ಶ್ರೀಗಳು ಶೀಘ್ರ ಗುಣಮುಖರಾಗಲಿ: ಪರಮೇಶ್ವರ್
ತುಮಕೂರು,ಜ.27: ನಮ್ಮೆಲ್ಲರ ಆರಾಧ್ಯ ದೈವ ಶತಾಯುಷಿ, ನಡೆದಾಡುವ ದೇವರು, ಸಿದ್ದಗಂಗಾ ಮಠಾಧ್ಯಕ್ಷರಾದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಆರೋಗ್ಯ ಶೀಘ್ರ ಸುಧಾರಿಸಿ ಗುಣಮುಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಇಂದಿಲ್ಲಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಗಳಿಗೆ ಬಿಜಿಎಸ್ ಆಸ್ಪತ್ರೆಯಲ್ಲಿ ನಿನ್ನೆ ಸ್ಟೆಂಟ್ ಹಾಕಿದ್ದಾರೆ. ಸದ್ಯ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನೂ ಹತ್ತಾರು ವರ್ಷ ಕಾಲ ಸಮಾಜಕ್ಕೆ ಸೇವೆಯನ್ನು ಮಾಡುವಂತಹ ಶಕ್ತಿಯನ್ನು ಶ್ರೀಗಳಿಗೆ ಭಗವಂತ ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ನಮ್ಮೆಲ್ಲರಿಗೂ ಶ್ರೀಗಳ ಆಶೀರ್ವಾದ, ಮಾರ್ಗದರ್ಶನ ಅಗತ್ಯವಿದೆ ಎಂದು ಅವರು ಹೇಳಿದರು.
ಸರ್ವ ಪಕ್ಷ ಸಭೆ ವಿಚಾರ: ಮಹದಾಯಿ ನದಿ ನೀರು ಹಂಚಿಕೆ ವಿವಾದದ ಸಂಬಂಧ ವಸ್ತು ಸ್ಥಿತಿ ಏನೆಂಬುದು ತಿಳಿಯುವುದಕ್ಕೆ ಮುಖ್ಯಮಂತ್ರಿಗಳು ಸರ್ವ ಪಕ್ಷ ಸಭೆ ಕರೆದಿದ್ದಾರೆ. ಚರ್ಚೆಯಲ್ಲಿ ಏನು ತೀರ್ಮಾನ ಆಗುತ್ತದೆ ಎಂಬುದನ್ನು ನೋಡಬೇಕು ಎಂದರು.
ರಾಜ್ಯದಲ್ಲಿ ನಮ್ಮ ಪಕ್ಷದ ಸರ್ಕಾರ ಅಧಿಕಾರದಲ್ಲಿರುವುದರಿಂದ ನಾನು ಹೋಗುವ ಅಗತ್ಯವಿಲ್ಲ. ನಮ್ಮ ಮುಖ್ಯಮಂತ್ರಿಗಳು, ಸಚಿವರು ಸಭೆಯಲ್ಲಿ ಭಾಗಿಯಾಗಿರುತ್ತಾರೆ. ಹಾಗಾಗಿ ನಾನು ಹೋಗುವುದಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅಲ್ಪಸಂಖ್ಯಾತರ ಮೇಲೆ ಅನಗತ್ಯವಾಗಿ ಕೇಸ್‍ಗಳನ್ನು ಹಾಕಿದ್ದರೆ ಅದನ್ನು ಕಾನೂನು ರೀತಿಯಲ್ಲಿ ಪರಿಶೀಲನೆ ನಡೆಸಿ ಸಂಪುಟ ಸಭೆಯಲ್ಲಿ ಚರ್ಚಿಸಿ ವಾಪಸ್ ತೆಗೆದುಕೊಳ್ಳಲಾಗುವುದು. ಏಕಾಏಕಿ ಸಮ್ಮನೇ ವಾಪಸ್ ಪಡೆಯಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಕಾನೂನಿನ ಚೌಕಟ್ಟಿನಲ್ಲಿ ಇಂತಹ ತೀರ್ಮಾನವನ್ನು ಎಲ್ಲರೂ ಸೇರಿ ಚರ್ಚಿಸಿ ಕೈಗೊಳ್ಳುತ್ತಾರೆ. ಆದರೆ ಬಿಜೆಪಿಯವರು ಈ ವಿಚಾರದಲ್ಲಿ ಇಲ್ಲಸಲ್ಲದ ಗೊಂದಲ ಸೃಷ್ಠಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಸಂಸದ ಎಸ್.ಪಿ. ಮುದ್ದಹನುಮೇಗೌಡ, ಶಾಸಕ ಡಾ. ರಫೀಕ್‍ಅಹಮದ್ ಉಪಸ್ಥಿತರಿದ್ದರು.