×
Ad

ಶೋಭಾ ಕರಂದ್ಲಾಜೆಗೆ ಕಾನೂನು ತಿಳುವಳಿಕೆ ಕಡಿಮೆ: ರಾಮಲಿಂಗಾರೆಡ್ಡಿ

Update: 2018-01-27 20:05 IST

ಬೆಂಗಳೂರು, ಜ.27: ಸನ್ನಡತೆ ಆಧಾರದಲ್ಲಿ ಕೈದಿಗಳನ್ನು ಬಿಡುಗಡೆ ಮಾಡುವ ಕ್ರಮದ ಕುರಿತು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಸ್ವಲ್ಪ ಕಾನೂನು ತಿಳಿದುಕೊಂಡರೆ ಒಳ್ಳೆಯದು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದರು.

ಶನಿವಾರ ವಿಕಾಸಸೌಧದಲ್ಲಿನ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ ಬಂದಾಗಿನಿಂದಲೂ ದೇಶದ ಎಲ್ಲ ರಾಜ್ಯಗಳಲ್ಲಿ ಸನ್ನಡತೆ ಆಧಾರದಲ್ಲಿ ಕೈದಿಗಳನ್ನು ಬಿಡುಗಡೆ ಮಾಡುವ ಪ್ರಕ್ರಿಯೆ ನಡೆದುಕೊಂಡು ಬಂದಿದೆ ಎಂದರು.

ಶೋಭಾ ಕರಂದ್ಲಾಜೆ ಗಂಡಸಾಗಿದ್ದರೆ ಅವರಿಗೆ ಹೇಳಬಹುದಿತ್ತು. ಆದರೆ, ಹೆಣ್ಣು ಮಗಳಾಗಿರುವ ಅವರ ಬಗ್ಗೆ ನಾನೇನು ಹೇಳುವುದಿಲ್ಲ. ಅವರ ಆರೋಪಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ, ಸನ್ನಡತೆ ಆಧಾರದಲ್ಲಿ ಕೈದಿಗಳನ್ನು ಬಿಡುಗಡೆ ಮಾಡಲು ಇರುವ ಕಾನೂನು ಅವಕಾಶಗಳ ಕುರಿತು ಸ್ವಲ್ಪ ತಿಳಿದುಕೊಂಡರೆ ಒಳ್ಳೆಯದು ಎಂದು ಅವರು ಹೇಳಿದರು.

ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಕೈದಿಗಳು ಕನಿಷ್ಠ 10 ವರ್ಷ ಶಿಕ್ಷೆಯನ್ನು ಪೂರೈಸಿರಬೇಕು, ಪುರುಷ ಕೈದಿಗಳ ವಯಸ್ಸು 65 ಹಾಗೂ ಮಹಿಳಾ ಕೈದಿಗಳ ವಯಸ್ಸು 60 ವರ್ಷವಾಗಿರಬೇಕು. ಅಂತಹವರನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಲು ಅವಕಾಶವಿದೆ. ಶೋಭಾ ಕರಂದ್ಲಾಜೆಗೆ ಈ ಬಗ್ಗೆ ತಿಳಿವಳಿಕೆಯ ಕೊರತೆಯಿದೆ. ಕಾನೂನಿನ ಬಗ್ಗೆ ತಿಳಿದುಕೊಳ್ಳುವುದು ಉತ್ತಮ ಎಂದು ರಾಮಲಿಂಗಾರೆಡ್ಡಿ ಹೇಳಿದರು.

ತಪ್ಪು ಮಾಡಿರುವವರು ಜೈಲಿಗೆ ಹೋಗಿದ್ದಾರೆ. ಬಹಳ ಜನ ತಪ್ಪುಗಳನ್ನು ಮಾಡಿದ್ದೂ ಇನ್ನು ಜೈಲು ಪಾಲಾಗದೆ ಹೊರಗಡೆ ಇದ್ದಾರೆ. ಅಂತಹವರನ್ನು ಬೇಕಾದರೆ ಬಿಜೆಪಿಯವರು ಬಳಸಿಕೊಳ್ಳಲಿ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

ಕೇಂದ್ರ ಗೃಹ ಸಚಿವ ರಾಜನಾಥ್‌ಸಿಂಗ್ ಗೌರಿ ಲಂಕೇಶ್ ಹಂತಕರನ್ನು ರಾಜ್ಯ ಸರಕಾರ ಇನ್ನೂ ಬಂಧಿಸಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿರುವುದನ್ನು ನೋಡಿಕೊಳ್ಳಲಿ. ವಿಚಾರವಾದಿಗಳಾದ ದಾಬೋಲ್ಕರ್ ಹಾಗೂ ಪನ್ಸಾರೆ ಹತ್ಯೆ ಪ್ರಕರಣಗಳ ಕುರಿತು 2014ರಿಂದ ಮಹಾರಾಷ್ಟ್ರ ಸರಕಾರ ಹಾಗೂ ಸಿಬಿಐ ತನಿಖೆ ನಡೆಸುತ್ತಿದೆ. ಆದರೆ, ಈವರೆಗೆ ಅಪರಾಧಿಗಳನ್ನು ಬಂಧಿಸಲಾಗಿಲ್ಲ ಎಂದು ಅವರು ತಿರುಗೇಟು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News