ಮತದಾನ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ನಾಗರೀಕರು ಭಾಗವಹಿಸುವುದು ಕರ್ತವ್ಯ: ಪ್ರಭಾವತಿ ಎಂ.ಹಿರೇಮಠ್

Update: 2018-01-27 16:47 GMT

ಚಿಕ್ಕಮಗಳೂರು,ಜ.27: ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ದೇಶ ನಮ್ಮದಾಗಿದ್ದು, ಪ್ರತಿಯೊಬ್ಬ ನಾಗರೀಕರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವುದು ಆದ್ಯ ಕರ್ತವ್ಯ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಪ್ರಭಾವತಿ ಎಂ. ಹಿರೇಮಠ್ ತಿಳಿಸಿದರು.

ಅವರು ಶನಿವಾರ ಚುನಾವಣಾ ಆಯೋಗ ಸ್ಥಾಪನೆಯ ದಿನದ ಅಂಗವಾಗಿ ನಗರದ ಕುವೆಂಪು ಕಲಾಮಂದಿರದಲ್ಲಿ ಚುನಾವಣಾ ಆಯೋಗ, ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ, ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿಶ್ವದಲ್ಲಿಯೇ ಅತ್ಯಂತ ವಿಶಾಲವಾದ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ನಮ್ಮ ದೇಶದಲ್ಲಿ ಪ್ರಜೆಗಳೇ ಪ್ರಜಾಪ್ರಭುತ್ವದ ಬೆನ್ನೆಲುಬು. ಜನಪ್ರತಿನಿಧಿಗಳ ಆಯ್ಕೆ ಸಂದರ್ಭದಲ್ಲಿ ವಿವೇಕ, ವಿವೇಚನೆ ಬಳಸಿ, ಯಾವುದೇ ಜಾತಿ, ಜನಾಂಗ, ಧರ್ಮ ಹಾಗೂ ಮತ್ತಿತರ ಆಮಿಷಗಳಿಗೆ ಒಳಗಾಗದೇ ನಿರ್ಭೀತರಾಗಿ ಮತದಾನಕ್ಕೆ ಮುಂದಾಗಬೇಕೆಂದು ಕರೆ ನೀಡಿದರು.

ಸಮೀಕ್ಷೆ ಪ್ರಕಾರ ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶಗಳಲ್ಲಿ ಮತದಾನ ಮಾಡುವವರ ಪ್ರಮಾಣ ಕಡಿಮೆಯಾಗಿದ್ದು, ವಿದ್ಯಾವಂತರೂ ಮತದಾನದಿಂದ ದೂರ ಉಳಿಯುತ್ತಿದ್ದಾರೆ. ನಮ್ಮ ಒಂದು ಮತದಿಂದ ಏನೂ ಬದಲಾವಣೆಯಾಗುವುದಿಲ್ಲ ಎಂಬ ಆಲಕ್ಷ್ಯ ಭಾವನೆ ಹೊಂದಿದ್ದಾರೆ ಅದನ್ನು ಬಿಟ್ಟು ಮತದಾನ ನಮ್ಮೆಲ್ಲರ ಹಕ್ಕು ಮತ್ತು ಕರ್ತವ್ಯವಾಗಿದೆ. ಒಬ್ಬ ವ್ಯಕ್ತಿ ನೀಡಿದ ಮತದಾನ ನಾಡನ್ನು, ದೇಶವನ್ನು ಸದೃಢವಾಗಿ ಕಟ್ಟುವಲ್ಲಿ ಸಾಕಾರಿಯಾಗಬಲ್ಲದು ಎಂದು ಹೇಳಿದರು. 

ಸಂವಿಧಾನ ನೀಡಲ್ಪಟ್ಟಿರುವ ಮತದಾನದ ಹಕ್ಕನ್ನು ಸರಿಯಾಗಿ ಬಳಸಿಕೊಂಡು ನಮ್ಮನ್ನಾಳುವ ರಾಜಕೀಯ ನಾಯಕನನ್ನು ಆಯ್ಕೆ ಮಾಡಿದಲ್ಲಿ ದೇಶ ಅಭಿವೃದ್ದಿ ಹೊಂದಲು ಸಾಧ್ಯವಾಗುತ್ತದೆ. ಜನ ಪ್ರತಿನಿಧಿಯನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ವಿವೇಚನೆಯುತವಾಗಿ ಪ್ರತಿಯೊಬ್ಬ ಮತದಾರರೂ ಮತ ಚಲಾಯಿಸಬೇಕು ಎಂದ ಅವರು ಶೇ.100ರಷ್ಟು ಮತದಾನ ನಡೆದಾಗ ಮಾತ್ರ ಸೂಕ್ತ ವ್ಯಕ್ತಿಯ ಆಯ್ಕೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜ್ ಚೇಂಗಟಿ ಮಾತನಾಡಿ, ಪ್ರತಿಯೊಬ್ಬರೂ ಮತದಾನವನ್ನು ದಾನ ಮಾಡಬೇಕು ಹೊರತಾಗಿ ಯಾವುದೇ ಆಕಾಂಕ್ಷೆಗಳಿಗೆ ಬಲಿಯಾಗಿ ತಮ್ಮ ಮತವನ್ನು ಮಾರಿಕೊಳ್ಳಬಾರದು. ಸಮೀಕ್ಷೆಯ ಪ್ರಕಾರ 18 ಮತ್ತು 19 ವರ್ಷದ ಶೇ.60 ರಷ್ಟು ಯುವ ಜನತೆ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿರುವುದಿಲ್ಲ, ಪ್ರತಿಯೊಬ್ಬರು 18 ವರ್ಷ ತುಂಬಿದ ಕೂಡಲೇ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕೆಂದರು.  

ಜಿ.ಪಂ.ಸಿಇಓ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷೆ ಸಿ. ಸತ್ಯಭಾಮ ಮಾತನಾಡಿ, ಚುನಾವಣಾ ಆಯೋಗ ಅಸ್ಥಿತ್ವಕ್ಕೆ ಬಂದ ದಿನವನ್ನು ರಾಷ್ಟ್ರೀಯ ಮತದಾರರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ ಎಂದ ಅವರು ರಾಷ್ಟ್ರೀಯ ಮತದಾರರ ಮುಖ್ಯ ಉದ್ದೇಶ ಯುವ ಮತದಾರರನ್ನು ಮತಪಟ್ಟಿಗೆ ಸೇರ್ಪಡೆಗೊಳಿಸುವುದು ಮತ್ತು ಅವರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸುವುದಾಗಿದೆ ಎಂದರು.

ಯುವ ಮತದಾರರು ನಮೂನೆ 6 ರಲ್ಲಿ ಮತದಾರರ ಪಟ್ಟಿಗೆ ಹೆಸರನ್ನು ಸೇರಿಸಿಕೊಳ್ಳುವಂತೆ ಹೇಳಿದ ಅವರು ಮತಪಟ್ಟಿಯಿಂದ ಹೆಸರು ತೆಗೆದು ಹಾಕಲು ನಮೂನೆ 7, ತಿದ್ದುಪಡಿ ಮಾಡಲು 8 ಹಾಗೂ ವರ್ಗಾವಣೆ ಮಾಡಲು ನಮೂನೆ 8ಎ ಬಳಸಬಹುದಾಗಿದೆ ಎಂದ ಅವರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿದೆಯೇ ಎಂದು ಖಾತ್ರಿಪಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ಮಾತನಾಡಿ, ಚುನಾವಣಾ ಸಂದರ್ಭದಲ್ಲಿ ಅಲ್ಪ ಸಂಖ್ಯಾತ ಪ್ರದೇಶಗಳಲ್ಲಿ ಮಹಿಳೆಯರು ತಮ್ಮ ಧಾರ್ಮಿಕ ಕಟ್ಟುಪಾಡುಗಳಿಗೆ ಒಳಗಾಗಿ ಮತಚಾಲಾಯಿಸಲು ಮುಂದಾಗುತ್ತಿಲ್ಲ ಆ ಕಾರಣದಿಂದಾಗಿ ಮತಗಟ್ಟೆಗಳಲ್ಲಿ ಮಹಿಳಾ ಅಧಿಕಾರಿಗಳನ್ನು ನಿಯೋಜಿಸುವುದಾಗಿ ಹಾಗೂ ಭದ್ರತೆ ಒದಗಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ 18 ವರ್ಷ ತುಂಬಿದ ಮಿಲೇನಿಯಂ ಮತದಾರರಿಗೆ ಗುರುತಿನ ಚೀಟಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಎಲ್. ವೈಶಾಲಿ, ಪ್ರೊಬೋಷನರಿ  ಉಪ ವಿಭಾಗಾಧಿಕಾರಿ ಡಾ. ಸಹನ ಆದಿಮನಿ, ಜಿ.ಪಂ. ಉಪಕಾರ್ಯದರ್ಶಿ ರಾಜಗೋಪಾಲ್, ತಹಶಿಲ್ದಾರ್ ಶಿವಣ್ಣ, ನಗರ ಸಭೆ ಆಯುಕ್ತೆ ತುಷಾರಮಣಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News