ದಾವಣಗೆರೆ : ಭಾರತ ಕಮ್ಯೂನಿಷ್ಟ್ ಪಕ್ಷದ 23ನೇ ರಾಜ್ಯ ಸಮ್ಮೇಳನ

Update: 2018-01-27 16:57 GMT

ದಾವಣಗೆರೆ,ಜ.27:ಕೆಲವೇ ತಿಂಗಳುಗಳಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ಬರುತ್ತಿದೆ. ಇದು ಬಹು ನಿರ್ಣಾಯಕ ಹಾಗೂ ಗಮನಾರ್ಹ ಚುನಾವಣೆಯಾಗಿದ್ದು, ಬಿಜೆಪಿಯನ್ನು ಸೋಲಿಸಲು ಜನಪರ, ಜಾತ್ಯಾತೀತ, ಎಡ ಪಂಥೀಯ ಶಕ್ತಿಗಳು ಒಂದಾಗಬೇಕೆಂದು ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ, ರಾಜ್ಯಸಭಾ ಸದಸ್ಯ ಡಿ. ರಾಜಾ ಕರೆ ನೀಡಿದರು.

ನಗರದಲ್ಲಿ ಭಾರತ ಕಮ್ಯೂನಿಷ್ಟ್ ಪಕ್ಷದ 23ನೇ ರಾಜ್ಯ ಸಮ್ಮೇಳನದ ಪ್ರಯುಕ್ತ ಮಹಾನಗರ ಪಾಲಿಕೆ ಆವರಣದಲ್ಲಿರುವ ಬಯಲು ರಂಗಮಂದಿರದಲ್ಲಿ ಏರ್ಪಡಿಸಿದ್ದ ಬಹಿರಂಗ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಭಾಜಪ ಹೇಳುತ್ತಿರುವ ಕಾಂಗ್ರೆಸ್ ಮುಕ್ತ ಭಾರತ ಕೇವಲ ಕಾಂಗ್ರೆಸ್‍ನ ನಿರ್ನಾಮವಲ್ಲ. ಬದಲಿಗೆ ಅದು ಬಿಜೆಪಿ ವಿರೋಧಿಗಳ ಮುಕ್ತ ಭಾರತವಾಗಿದೆ. ಇದಕ್ಕಾಗಿ ಸುಳ್ಳು ಹೇಳಿ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಹವಣಿಸುತ್ತಿದೆ. ಆದ್ದರಿಂದ ನಾಡಿನ ಜಾತ್ಯಾತೀತರು, ಜನಪರರು ಹಾಗೂ ಎಡಪಂಥೀಯರು ಒಗ್ಗೂಡಿ ಬಿಜೆಪಿಯನ್ನು ಸೋಲಿಸಲು ಸಂಕಲ್ಪ ಮಾಡಬೇಕೆಂದ ಅವರು, ಕಾಂಗ್ರೆಸ್‍ಗೂ ಇದು ಪರಮಾರ್ಶೆಯ ಕಾಲವಾಗಿದ್ದು, ಅದರ ನಾಯಕರು ನೀವು ದೊಡ್ಡ ಹಿಂದು, ನಾವು ಸಣ್ಣ ಹಿಂದು ಎಂಬುದಾಗಿ ಹೇಳಿಕೊಂಡು ಕೂತರೇ ಆಗೊಲ್ಲ. ಈ ಧೋರೆಣೆಯನ್ನಿ ಬಿಟ್ಟು ಕಾಂಗ್ರೆಸ್ ನೆಹರು ಕಾಲದ ರಾಜಕಾರಣ ಮಾಡಬೇಕೆಂದು ಸೂಚ್ಯವಾಗಿ ನುಡಿದರು.

ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಬಿಜೆಪಿ ದಾಳಿ ನಡೆಸುತ್ತಿದೆ. ಹೀಗಾಗಿ ಬ್ರಿಟೀಷ್ ರಾಜ್ ವಿರುದ್ಧ ಹೋರಾಡಿರುವ ಪರಂಪರೆ ಇರುವ ನಾವು ಬಿಜೆಪಿಯ ಕೋಮುವಾದಿ, ಫ್ಯಾಸಿಸ್ಟ್ ಸಿದ್ಧಾಂತಗಳನ್ನು ಸೋಲಿಸಲು ಬಿಜೆಪಿ ರಾಜ್ ವಿರುದ್ಧವೂ ಹೋರಾಡಬೇಕಿದೆ. ದುಡಿಯುವ ವರ್ಗದ ಜನರಲ್ಲಿ ಹಾಗೂ ಜನಸಾಮಾನ್ಯರಲ್ಲಿ ಈ ರಾಜಕೀಯ ಪ್ರಜ್ಞೆ ಮೂಡಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

'ಸಬ್‍ಕಾ ಸಾಥ್ ಸಬ್‍ಕಾ ವಿಕಾಸ್' ಎನ್ನುತ್ತಿರುವ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ದಲಿತ, ರೈತ, ಕಾರ್ಮಿಕ, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತರ ಜೊತೆಗಿಲ್ಲ. ಅದು ಅಂಬಾನಿ, ಟಾಟಾ, ಆದಾನಿ ಅವರ ಜೊತೆಗಿದೆ. ಕೇಂದ್ರ ಸರ್ಕಾರದ ಅಚ್ಚೆ ದಿನ್ ಉದ್ಯಮಪತಿಗಳಿಗೆ ಬಂದಿದೆ ಹೊರತು, ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಬಂದಿಲ್ಲ ಎಂದು ದೂರಿದರು.

ಸಿಪಿಐ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ, ರಾಜ್ಯಸಭಾ ಮಾಜಿ ಸದಸ್ಯ ಸೈಯದ್ ಅಜೀಜ್ ಪಾಷಾ ಮಾತನಾಡಿ, ಬಡವ, ಬಲ್ಲಿದ, ಜಾತಿ, ಧರ್ಮದ ಹಂಗಿಲ್ಲದೇ, ಸಿಪಿಐ ರೈತರು, ಕಾರ್ಮಿಕರ ಪರವಾಗಿ ನಿರಂತರ ಹೋರಾಟ ಮಾಡಿಕೊಂಡು ಬಂದಿದೆ. ಈ ನಮ್ಮ ಚರಿತ್ರೆ ಮತ್ತೆ ಮರುಕಳಿಸಬೇಕಾಗಿದೆ ಎಂದರು.

ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಹೆಚ್.ಕೆ.ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಿಪಿಐ ರಾಜ್ಯ ಕಾರ್ಯದರ್ಶಿ ಪಿ.ವಿ.ಲೋಕೇಶ್, ಎಐಟಿಯುಸಿ ರಾಜ್ಯಾಧ್ಯಕ್ಷ ಹೆಚ್.ವಿ.ಅನಂತಸುಬ್ಬರಾವ್, ಸಿಪಿಐ ಜಿಲ್ಲಾ ಖಜಾಂಚಿ ಆನಂದರಾಜ್, ಆವರೆಗೆರೆ ಚಂದ್ರು, ಟಿ.ಎಸ್.ನಾಗರಾಜ್, ಆವರಗೆರೆ ವಾಸು, ಮಹಮ್ಮದ್ ಭಾಷಾ, ಗುಡಿಹಳ್ಳಿ ಹಾಲೇಶ್, ಟಿ.ಹೆಚ್.ನಾಗರಾಜ್, ಎ.ಜ್ಯೋತಿ, ಎಂ.ಜಯಮ್ಮ, ಎಂ.ಬಿ.ಶಾರದಮ್ಮ, ಪ್ರಕಾಶ್ ಹಿಟ್ನಳ್ಳಿ, ಪರಿಮಳ ವಿಜಯಕುಮಾರ್, ಗುಣಶೇಖರ್, ಸ್ವಾತಿ ಸುಂದರೇಶ್, ರೇವಣ್ಣ, ರಾಧಾ ಸುಂದರೇಶ್, ಶಿವರುದ್ರಪ್ಪ, ಭೀಮಾಶಂಕರ್, ಬಾಬು, ನಾಗೇಶ್ ಸಾತೇರಿ, ಗಿರೀಶ್, ಎಂ.ಸಿ.ಟೊಂಗ್ರೆ, ಹೊನ್ನಪ್ಪ ಮರಿಯಮ್ಮವರ್, ಕೆ.ವಿ. ಸುನೀಲ್‍ಕುಮಾರ್, ಕುಕ್ಯಾನ್, ಮುರಳೀಧರ್, ಜನಾರ್ಧನ್, ಕರಿಯಣ್ಣ ಉಳ್ಳಾರ್ತಿ, ಜಾಫರ್ ಶರೀಫ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News