×
Ad

ಅನಂತ್ ಕುಮಾರ್ ಹೆಗಡೆ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

Update: 2018-01-27 22:54 IST

ಮಂಡ್ಯ, ಜ.27: ದೇಶದ ಸಂವಿಧಾನದ ಬಗ್ಗೆ ನಂಬಿಕೆ ಇಲ್ಲದ ಜನಪ್ರತಿನಿಧಿಗಳು ಬೇಕಾ ಎಂಬುದರ ಬಗ್ಗೆ ಜನರು ನಿರ್ಧರಿಸಬೇಕು ಎಂದು ಪ್ರವಾಸೋದ್ಯಮ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಸಲಹೆ ನೀಡಿದ್ದಾರೆ.

ನಾಗಮಂಗಲ ತಾಲೂಕಿನ ಜಿ.ಬೊಮ್ಮನಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದ ಅಂಬೇಡ್ಕರ್ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಮಾತನಾಡಿದ ಅವರು, ಸಂವಿದಾನ ಬದಲಾವಣೆ ಹೇಳಿಕೆ ವಿರುದ್ಧ ಕಿಡಿಕಾರಿದರು.

ಕೇಂದ್ರ ಸಚಿವ ಅನಂತ್‍ ಕುಮಾರ್ ಹೆಗಡೆ ಮತ್ತು ಸಂಸದ ಪ್ರತಾಪ್‍ ಸಿಂಹ ಅವರಿಗೆ ಸಂವಿಧಾನದ ಮೇಲೆ ನಂಬಿಕೆಯಿಲ್ಲ. ಅವರ ಬಾಯಲ್ಲಿ ಯಾವಾಗಲೂ ಹಿಂದುತ್ವ ವಿಷಯ ಮಾತ್ರ ಬರುತ್ತದೆ. ಇಂತಹ ಹೇಳಿಕೆ ಬಿಟ್ಟು ದೇಶದಲ್ಲಿ ಶೇ.65ರಷ್ಟಿರುವ ನಿರುದ್ಯೋಗಿ ಯುವಕರಿಗೆ ತರಬೇತಿ ನೀಡಿ ಉದ್ಯೋಗ ನೀಡುವ ಕಡೆಗೆ ಹೆಗಡೆ ಗಮನಹರಿಸಲಿ ಎಂದು ಅವರು ಸಲಹೆ ನೀಡಿದರು.

ಸಂವಿಧಾನ ಬದಲಾವಣೆಯಾಗಬೇಕೆಂಬ ತನ್ನ ಸಚಿವ ಸಂಪುಟದ ಸದಸ್ಯರೊಬ್ಬರು ಹೇಳಿರುವುದಕ್ಕೆ ಪ್ರಧಾನಿಯವರು ಮೌನವಹಿಸುವ ಮೂಲಕ ಸಮ್ಮತಿ ವ್ಯಕ್ತಪಡಿಸಿದ್ದಾರೆ ಎಂದು ಅವರು ಟೀಕಿಸಿದರು.

ದೇಶಕ್ಕೆ ಸಂವಿಧಾನ ಬೇಡ, ಮನುಸ್ಮೃತಿ ಜಾರಿಗೆ ಬರಲಿ ಎಂದು ಸಂಘಪರಿವಾರದವರು ವಾದಿಸುತ್ತಿದ್ದಾರೆ. ಒಂದು ವೇಳೆ ಮನುಸ್ಮೃತಿ ಏನಾದರೂ ಜಾರಿಗೆ ಬಂದಿದ್ದರೇ ಇಂದು ನಿವೇಲ್ಲಾ ಇಲ್ಲಿ ಸೇರುವ ಹಾಗಿರಲಿಲ್ಲ ಎಂದು ಅವರು ನೆರೆದಿದ್ದವರಿಗೆ ಹೇಳಿದರು.

ದೇಶ ಮುನ್ನಡೆಯುತ್ತಿರುವುದಕ್ಕೆ ಸಂವಿಧಾನವೇ ಕಾರಣ. ಪ್ರತಿಯೊಬ್ಬರೂ ಸಂವಿಧಾನವನ್ನು ಗೌರವಿಸಬೇಕು. ಸಂವಿಧಾನ ಬದಲಾವಣೆಯ ಬಗ್ಗೆ ಎಚ್ಚರಿಕೆಯನ್ನು ವಹಿಸಬೇಕು ಎಂದು ಅವರು ತಿಳಿಸಿದರು.

ಸ್ವತಂತ್ರ ಭಾರತದಲ್ಲಿ ಎಲ್ಲ ವರ್ಗದ ಜನರು ಸ್ವಾಭಿಮಾನದಿಂದ ಬದುಕು ಸಾಗಿಸಲು ಅನುವು ಮಾಡಿಕೊಟ್ಟ ಅಂಬೇಡ್ಕರ್ ಅವರನ್ನು ಒಂದು ಸಮುದಾಯದ ನಾಯಕ ಎಂದು ಬಿಂಬಿಸುವುದು ಸರಿಯಲ್ಲ ಎಂದು ಅವರು ಸಲಹೆ ನೀಡಿದರು.

ಶಾಸಕ ಎನ್.ಚಲುವರಾಯಸ್ವಾಮಿ ಅವರು ಇಂದಿನಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಉತ್ತಮ ನಾಯಕರಾಗಿರುವ ಅವರನ್ನು ಈ ಬಾರಿ ಬೆಂಬಲಿಸಬೇಕು ಎಂದು ಖರ್ಗೆ ಮನವಿ ಮಾಡಿದರು.

ಇದಕ್ಕೂ ಮೊದಲು ಸಚಿವ ಪ್ರಿಯಾಂಕ್ ಖರ್ಗೆ ಅವರು ಶಾಸಕ ಎನ್.ಚಲುವರಾಯಸ್ವಾಮಿ ಅವರೊಂದಿಗೆ ಮುಳುಕಟ್ಟೆ ಗ್ರಾಮದ ಶಕ್ತಿದೇವತೆ ಮುಳುಕಟ್ಟಮ್ಮ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. 

ಶಾಸಕ ಎನ್.ಚಲುವರಾಯಸ್ವಾಮಿ, ಎಚ್.ಟಿ.ಕೃಷ್ಣೇಗೌಡ, ಜಿಪಂ ಮಾಜಿ ಸದಸ್ಯ ಹುಚ್ಚೇಗೌಡ, ಇತರ ಮುಖಂಡರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News