“ನನ್ನ ಆರೋಗ್ಯ - ನನ್ನ ಹಕ್ಕು” ಕಾರ್ಯಾಗಾರ

Update: 2018-01-27 17:58 GMT

ಮಡಿಕೇರಿ,ಜ.27: ಹೆಚ್‍ಐವಿ ಮತ್ತು ಏಡ್ಸ್ ಬಾಧಿತರಿಗೆ ಅಗತ್ಯ ಮೂಲಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಸೇರ್ಪಡೆಗೊಳಿಸುವ ಆಶಯದೊಂದಿಗೆ 2017ರ ಏಪ್ರಿಲ್ 20 ರಂದು ನೂತನ ಕಾನೂನು ಜಾರಿಗೆ ಬಂದಿದ್ದು, ಇದರ ಸಮರ್ಪಕ ಅನುಷ್ಠಾನ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದೊಡ್ಡ ಹೊಣೆಗಾರಿಕೆಯಾಗಿದೆ ಎಂದು ನಗರದ ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪವನೇಶ್ ಡಿ. ಅಭಿಪ್ರಾಯಪಟ್ಟಿದ್ದಾರೆ.

ನಗರದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಆಯೋಜಿತ ಓಡಿಪಿ ಸಂಸ್ಥೆಯ ಸ್ನೇಹಾಶ್ರಯ ಸಮಿತಿಯ ದಶಮಾನೋತ್ಸವ ಮತ್ತು ‘ನನ್ನ ಆರೋಗ್ಯ -ನನ್ನ ಹಕ್ಕು, ಕಳಂಕ ತಾರತಮ್ಯ ತಡೆಯೋಣ’ ಎನ್ನುವ ವಿಷಯದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹೆಚ್‍ಐವಿ ಮತ್ತು ಏಡ್ಸ್ ಬಾಧಿತರ ಉತ್ತಮ ಬದುಕಿಗಾಗಿ ಕಾನೂನೊಂದು ಇದೆ ಎನ್ನುವ ವಿಚಾರವೆ ಬಹಳಷ್ಟು ಮಂದಿಯ ಅರಿವಿನಲ್ಲಿ ಇಲ್ಲವೆಂದು ವಿಷಾಧಿಸಿ, ಈ ಕಾನೂನು ರೋಗಕ್ಕೆ ಒಳಗಾದ ಮಂದಿಗೆ ಅಗತ್ಯ ಸೌಲಭ್ಯ , ಸಮಾನತೆಯ ಬದುಕನ್ನು ಕಲ್ಪಿಸಿಕೊಡಲು ಸಹಕಾರಿಯಾಗಿದ್ದು, ಇದರ ಪರಿಣಾಮಕಾರಿ ಅನುಷ್ಟಾನವಾಗಬೇಕಿದೆ. ಕಾನೂನಿನಡಿ ಹೆಚ್‍ಐವಿ ನಿಯಂತ್ರಣ, ರೋಗ ಬಾಧಿತರಿಗೆ ಪುನರ್ವಸತಿ, ಅಗತ್ಯ ಚಿಕಿತ್ಸೆ, ರೋಗಬಾಧಿತರ ಹಕ್ಕುಗಳ ಸಂರಕ್ಷಣೆಯನ್ನು ಪ್ರತಿಪಾದಿಸಲಾಗಿದೆ. ಹೆಚ್‍ಐವಿ ಮತ್ತು ಏಡ್ಸ್ ಬಾಧಿತರನ್ನು ಕೀಳಾಗಿ, ಅಸಮಾನತೆಯಿಂದ ಕಾಣುವಂತಹವರಿಗೆ 1 ಲಕ್ಷ ರೂ. ದಂಡ, 3 ವರ್ಷಗಳ ಜೈಲುವಾಸದ ಕಠಿಣ ಶಿಕ್ಷೆಯನ್ನು ನೂತನ ಕಾನೂನಿನಲ್ಲಿ ತಿಳಿಸಲಾಗಿದೆಯೆಂದು ಮಾಹಿತಿ ನೀಡಿದರು.

ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರ ಮಾತನಾಡಿ, ಹೆಚ್‍ಐವಿ ಮತ್ತು ಏಡ್ಸ್ ಬಾಧಿತರಿಗೆ ಸರ್ಕಾರದಿಂದ ಸಾಕಷ್ಟು ಸೌಲಭ್ಯಗಳಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿ, ರೋಗ ಬಾಧಿತರಿಗೆ ಬಿಪಿಎಲ್ ಕಾರ್ಡ್ ಸೌಲಭ್ಯ, ಆರೋಗ್ಯ ತಪಾಸಣೆ, ವಸತಿ ಯೋಜನೆ ಸೌಲಭ್ಯ, ಸಾಲ ಸೌಲಭ್ಯ, ವಿವಿಧ ವಿಷಯಗಳ ತರಬೇತಿ ಕಾರ್ಯಗಳು ಇರುವುದಾಗಿ ಮಾಹಿತಿ ನೀಡಿದರು.

ಕೈಹಿಡಿದು ಮುನ್ನಡೆಸಿ- ಪುಟಾಣಿ ಮಕ್ಕಳೊಂದಿಗೆ ದಶಮಾನೋತ್ಸವ ಪ್ರಯುಕ್ತ ಕೇಕ್ ಕತ್ತರಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ಹೆಚ್‍ಐವಿ ಮತ್ತು ಏಡ್ಸ್ ರೋಗ ಬಾಧಿತರನ್ನೆ ಎಂದಿಗೂ ಕಡೆಗಣಿಸದಿರಿ. ಸಮಾಜದ ಪ್ರತಿಯೊಬ್ಬರು ನೊಂದ ಜೀವಗಳಿಗೆ ಸ್ಥೈರ್ಯವನ್ನು ತುಂಬಿ ಕೈಹಿಡಿದು ಮುನ್ನಡೆಸುವುದು ಅತ್ಯವಶ್ಯವೆಂದರು.

ಸೌಲಭ್ಯ ವಿತರಣೆ- ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷರಾದ ಟಿ.ಪಿ.ರಮೇಶ್ ಅವರು ಫಲಾನುಭವಿಗಳಿಗೆ ಪೌಷ್ಠಿಕ ಆಹಾರ ಮತ್ತು ಕಂಬಳಿಯನ್ನು ಒಳಗೊಂಡ ಕಿಟ್‍ಗಳನ್ನು ವಿತರಿಸಿ ಮಾತನಾಡಿ,  ನೊಂದವರ ನೆಮ್ಮದಿಯ ಬದುಕಿಗೆ ಸಮಾಜದಿಂದ ಏನೆಲ್ಲ ಕಾರ್ಯಗಳನ್ನು ಮಾಡಬೇಕೋ ಅವುಗಳನ್ನೆಲ್ಲ ಎಲ್ಲರೂ ಒಗ್ಗೂಡಿ ನಡೆಸುವಂತಾಗಲಿ. ರೋಗಬಾಧಿತರು ಧೈರ್ಯಗುಂದದೆ ಬದುಕುವ ಸಾಮಥ್ರ್ಯವನ್ನು ಮೈಗೂಡಿಸಿಕೊಳ್ಳುವಂತೆ ಕಿವಿಮಾತುಗಳನ್ನಾಡಿದರು.

ಸಭಾಧ್ಯಕ್ಷತೆ ವಹಿಸಿದ್ದ ಮೈಸೂರು ಓಡಿಪಿ ಸಂಸ್ಥೆಯ ನಿರ್ದೇಶಕರಾದ ಸ್ವಾನಿ ಡಿ ಅಲ್ಮೆಡಾ ಮಾತನಾಡಿ, ಸಮಾಜದಲ್ಲಿ ನೊಂದವರನ್ನು ಪ್ರೀತಿಸಿ ಸಲಹುವ ಹೃದಯವಂತಿಕೆ ಇಂದಿಗೂ ಇದ್ದು, ಸ್ನೇಹಾಶ್ರಯ ಸಮಿತಿಯ ಕಾರ್ಯ ಶ್ಲಾಘನೀಯ. ರೋಗ ಬಾಧಿತರಲ್ಲಿ ತಾನು ಯಾರಿಗೂ ಕಡಿಮೆ ಇಲ್ಲ ಎನ್ನುವ ಮನೋಭಾವನೆ ಇರಬೇಕು ಮತ್ತು ಇಂತಹ ಆತ್ಮಸ್ಥೈರ್ಯ ತುಂಬುವ ಕಾರ್ಯವನ್ನು ಸಮಾಜ ಮಾಡಬೇಕೆಂದರು.

ಸನ್ಮಾನ-ಸ್ನೇಹಾಶ್ರಯ ಸಮಿತಿ ಕಾರ್ಯಾಧ್ಯಕ್ಷರಾದ ಕೆ.ಟಿ. ಬೇಬಿ ಮ್ಯಾಥ್ಯು ಅವರನ್ನು ಇದೇ ಸಂದರ್ಭ ಅತಿಥಿ ಗಣ್ಯರು ಸನ್ಮಾನಿಸಿ ಗೌರವಿಸಿದರು.
ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಮುಖ್ಯಸ್ಥರಾದ ಡಾ. ಶಿವ ಕುಮಾರ್, ಜಿಲ್ಲಾ ಮೇಲ್ವಿಚಾರಕರಾದ ಸುನೀತ ಮಾತನಾಡಿದರು. ಬೇಬಿ ಮ್ಯಾಥ್ಯು ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಮಲ್ಲೇಸ್ವಾಮಿ, ಲಯನೆಸ್ ಅಧ್ಯಕ್ಷರಾದ ಕನ್ನಂಡ ಕವಿತಾ, ಲಯನ್ ಮಧುಕರ್, ವಕೀಲರಾದ ಪವನ್, ಅಂಬೆಕಲ್ ನವೀನ್ ಮೊದಲಾದ ಗಣ್ಯರು ಹಾಜರಿದ್ದರು. ಸ್ನೇಹಾಶ್ರಯ ಸಮಿತಿ ಪ್ರಧಾನ ಕಾರ್ಯದರ್ಶಿ ಜಾಯ್ಸ್ ಮೆನೇಜಸ್ ಸ್ವಾಗತಿಸಿ, ಜಯಪ್ಪ  ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News