ಮುಸ್ಲಿಮರ ವಿರುದ್ಧದ ಸಂಘಪರಿವಾರದ ಆರೋಪ ಸುಳ್ಳು: ಮಠಸಾಗರ ಗ್ರಾಮಸ್ಥರು

Update: 2018-01-28 15:17 GMT
ಸೌಹಾರ್ದತೆ ಉಳಿಯುವಂತೆ ಮಠಸಾಗರ ಗ್ರಾಮಸ್ಥರ ಪ್ರಾರ್ಥನೆ

“ಮುಸ್ಲಿಮರ ಜಾಗದಲ್ಲೇ ದೇವಸ್ಥಾನವಿದೆ”

ಸಕಲೇಶಪುರ, ಜ.28: ಮುಸ್ಲಿಮರ ಜಾಗದಲ್ಲೇ ದೇವಸ್ಥಾನವಿದೆ. ಬಜರಂಗದಳ ಹಾಗು ವಿಶ್ವ ಹಿಂದೂ ಪರಿಷತ್ ಆರೋಪಿಸಿದಂತೆ ಮುಸ್ಲಿಂ ಕುಟುಂಬ ದೇವಸ್ಥಾನದ ಜಮೀನನ್ನು ಕಬಳಿಸಿಲ್ಲ. ನಾವು ಸೌಹಾರ್ದದಿಂದಿದ್ದು, ಸೌಹಾರ್ದಯುತವಾಗಿಯೇ ಪ್ರಕರಣವನ್ನು ಬಗೆಹರಿಸುತ್ತೇವೆ. ನಮ್ಮ ಸೌಹಾರ್ದಕ್ಕೆ ಹೊರಗಿನವರು ಹುಳಿ ಹಿಂಡುತ್ತಿದ್ದಾರೆ ಎಂದು ತಾಲೂಕಿನ ಮಠಸಾಗರದ ಗ್ರಾಮಸ್ಥರು ಹೇಳಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಇಲ್ಲಿ ಮುಸ್ಲಿಮರು ದೇವಸ್ಥಾನದ ಜಮೀನನ್ನು ಮುಸ್ಲಿಮರು ಕಬಳಿಸಿದ್ದಾರೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್ ಹಾಗು ಬಜರಂಗದಳ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಗೆ ಮನವಿ ಸಲ್ಲಿಸಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಗ್ರಾಮಸ್ಥರು, ನಮ್ಮ ಗ್ರಾಮದಲ್ಲಿ ಯಾವುದೇ ರೀತಿಯ ಧಾರ್ಮಿಕ ಅಡಚಣೆಯಾಗಲೀ, ವಿವಾದವಾಗಲೀ ಇಲ್ಲವೆ ಇಲ್ಲ. ಬೀರಲಿಂಗೇಶ್ವರ ದೇವಸ್ಥಾನದ ಭೂಮಿ ಒತ್ತುವರಿ ಮಾಡಿರುವ ವಿಷಯ ತಿಳಿದಿರಲಿಲ್ಲ. ಹೊರಗಿನವರಿಂದ ಉದ್ಭವಿಸಿರುವ ಸಮಸ್ಯೆಯನ್ನು ನಾವು ಪ್ರೀತಿ ಸೌಹಾರ್ದ, ಬಾಂಧವ್ಯಕ್ಕೆ ಧಕ್ಕೆಯಾಗದಂತೆ ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಪೂಜೆ ಸಲ್ಲಿಸಲು ಯಾವುದೇ ರೀತಿಯ ಸಮಸ್ಯೆಗಳಿಲ್ಲ. ಮುಸ್ಲಿಮರು ನಮಗೆ ಯಾವುದೇ ಅಡಚಣೆ ಮಾಡಿಲ್ಲ. ಸಹಕಾರ ನೀಡುತ್ತಿದ್ದಾರೆ ಎಂದು ದೇವಸ್ಥಾನದ ಅರ್ಚಕ ಎಂ.ಡಿ. ಮಂಜುನಾಥ್ ಸ್ಪಷ್ಟಪಡಿಸಿದ್ದಾರೆ.

ನಾವು ಪರಿಶಿಷ್ಟ ಜಾತಿಗೆ ಸೇರಿದವರು. ಗ್ರಾಮದ ಬಹುತೇಕ ಜನರು ದಲಿತರಾಗಿದ್ದಾರೆ. ದೇವಸ್ಥಾನ ಶಿಥಿಲಾವಸ್ಥೆಯಲ್ಲಿದ್ದ ಸಂದರ್ಭ  ತೋಟದ ಮಾಲಕರಾದ ಮುಸ್ಲಿಮರು ನಮಗೆ ಆರ್ಥಿಕ ಸಹಾಯ ಮಾಡಿದ್ದಾರೆ. ಇತ್ತೀಚೆಗೆ ಪೊಲೀಸರು ಕರೆ ಮಾಡಿ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ದೂರು ನೀಡಿದ್ದಾರೆ. ದೇವಸ್ಥಾನದ 36 ಗುಂಟೆ ಭೂಮಿಯನ್ನು ಅಕ್ರಮಿಸಲಾಗಿದೆ. ತೆರವು ಮಾಡಿಸಿ ಕೊಡಿ ಎಂದು ತಿಳಿಸಿದ್ದಾರೆ. ಆದ್ದರಿಂದ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಬರುವುದಾಗಿ ತಿಳಿಸಿದರು. ಸ್ಥಳ ಪರಿಶೀಲಿಸಲು ಬಂದ ಪೋಲಿಸರಿಗೆ ನಾನು ವಾಸ್ತವಾಂಶವನ್ನು ವಿವರಿಸಿದ್ದೇನೆ ಎಂದು ಮಂಜುನಾಥ್ ತಿಳಿಸಿದರು.

ಊರ ಹೊರಗಿನ ವ್ಯಕ್ತಿಗಳು ಉದ್ದೇಶ ಪೂರ್ವಕವಾಗಿ ಇಲ್ಲಿ ಸಮಸ್ಯೆಯನ್ನು ಹುಟ್ಟುಹಾಕಿದ್ದಾರೆ. ಗ್ರಾಮದ ಬಗ್ಗೆ ಸಮಾಜದಲ್ಲಿ ತಪ್ಪು ಕಲ್ಪನೆ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ. ನಮ್ಮ ಸಮಸ್ಯೆಯನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ ಎಂದರು.

ಗ್ರಾಮಸ್ಥರಾದ ಮದನ್ ಕುಮಾರ್ ಮಾತನಾಡಿ, ಬಿಜೆಪಿ ಪರವಾದ ಸಂಘಟನೆಗಳು ಸಮಾಜದಲ್ಲಿ ಶಾಂತಿಯನ್ನು ಕದಡಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ. ಗ್ರಾಮದ ಭೀರಲಿಂಗೇಶ್ವರ ದೇವಸ್ಥಾನಕ್ಕೆ ಇಲ್ಲಿಯ ದಲಿತರು ಮಾತ್ರ ಅರ್ಚಕರಾಗಿ ಪೂಜೆ ಸಲ್ಲಿಸುತ್ತಿದ್ದಾರೆ. ತೋಟದ ಮಾಲಕರು ಮುಸ್ಲಿಮರು. ಯಾವುದೇ ರೀತಿಯ ಸಮಸ್ಯೆ ಇಲ್ಲ. ದಾನಮ್ಮ ಪ್ರಕರಣ ಸೇರಿದಂತೆ ಅನೇಕ ಪ್ರಕರಣಗಳು ನಡೆದಿವೆ. ಈ ಬಗ್ಗೆ ಮಾತನಾಡದ ಬಿಜೆಪಿ ಪರ ಸಂಘಟನೆಗಳು ಗ್ರಾಮದ ವಿಚಾರವನ್ನು ತೆಗೆದು ಗ್ರಾಮದ ಶಾಂತಿಯನ್ನು ಹದಗೆಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ತೋಟದ ಮಾಲಕರ ಪುತ್ರ ಕೊಲ್ಲಹಳ್ಳಿ ಸಲೀಂ, “ಈ ತೋಟವನ್ನು ಸುಮಾರು 50 ವರ್ಷಗಳ ಹಿಂದೆ ನಮ್ಮ ತಂದೆ ಖರೀದಿಸಿದ್ದರು. ಅಂದಿನಿಂದ ಇಂದಿನವರೆಗೂ ಇಲ್ಲಿಯ ಗ್ರಾಮಸ್ಥರು ಪೂಜೆ ಸಲ್ಲಿಸುತ್ತಿದ್ದಾರೆ. ನಮ್ಮ ಬಳಿ ಇರುವ ದಾಖಲೆಯಂತೆ ನಾವು ಈ ಸ್ಥಳದ ಅಧೀನದಲ್ಲಿದ್ದೇವೆ. ಕಂದಾಯ ಇಲಾಖೆ ಸರ್ವೆ ಮಾಡಲಿ. ದೇವಸ್ಥಾನದ ಹೆಸರಿನಲ್ಲಿ ಭೂಮಿ ಇದ್ದರೆ ನಾವು ಬಿಟ್ಟು ಕೊಡುತ್ತೇವೆ ಎಂದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮದ ಪ್ರಮುಖರು ಸಭೆ ನಡೆಸಿದ್ದು, ಸಮಸ್ಯೆಯನ್ನು ಸೌಹಾರ್ದಯುತವಾಗಿ ನಾವೇ ಬಗೆಹರಿಸಿ ಕೊಳ್ಳೋಣ. ಹೊರಗಿನವರಿಗೆ ಅವಕಾಶ ನೀಡುವುದು ಬೇಡ ಎಂದು ತೀರ್ಮಾನಿಸಿದ್ದಾರೆ. ದೇವರಿಗೆ ಪೂಜೆ ಸಲ್ಲಿಸಿ ಗ್ರಾಮದ ಶಾಂತಿಗೆ ಧಕ್ಕೆಯಾಗದಂತೆ, ಇಲ್ಲಿಯ ಸೌಹಾರ್ದತೆ ಮತ್ತು ಸಹೋದರತ್ವವನ್ನು ಉಳಿಸುವಂತೆ ಪ್ರಾರ್ಥಿಸಿದ್ದಾರೆ.

ಈ ಸಂದರ್ಭ ಅರ್ಚಕ ಮಂಜುನಾಥ್, ಸಹೋದರ ಶಿವಣ್ಣ, ಗ್ರಾಪಂ ಮಾಜಿ ಅಧ್ಯಕ್ಷ ರಘು, ಗ್ರಾಪಂ ಸದಸ್ಯ ಮರಿಯಪ್ಪ, ಬೋಜ ಪೂಜಾರಿ, ಜಯಾನಂದ, ಯೋಗೇಶ್. ಈಶ್ವರ್ ಆಳ್ವ, ಸತೀಶ್ ಶೆಟ್ಟಿ ಮುಂತಾದವರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News