ಬ್ರೈಲ್ ಲಿಪಿಯನ್ನು ಅವಿಷ್ಕರಿಸದಿದ್ದರೆ ಅಂಧರ ಬದುಕು ಮತ್ತಷ್ಟು ಕಷ್ಟವಾಗುತ್ತಿತ್ತು: ಡಿ.ರಂದೀಪ್
ಮೈಸೂರು,ಜ.28: ದೃಷ್ಟಿವಿಕಲ ಚೇತನರು ಸಮಾಜದ ಅವಿಭಾಜ್ಯ ಅಂಗವಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ಅಭಿಪ್ರಾಯ ಪಟ್ಟರು.
ನಂಜರಾಜ ಬಹದ್ದೂರ್ ಛತ್ರದಲ್ಲಿ ರವಿವಾರ ಲೂಯಿ ಬ್ರೈಲ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಲೂಯಿ ಬ್ರೈಲ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ನಮ್ಮ ಸಮಾಜವು ಅಂಗವಿಕಲರು, ದೃಷ್ಟಿಹೀನರನ್ನು ಒಂದು ರೀತಿಯಲ್ಲಿ ಅವಹೇಳನಕಾರಿ ರೀತಿಯಲ್ಲಿ ಕಾಣುತ್ತಾರೆ. ಅವರಲ್ಲಿ ಅಂಗವಿಕಲತೆ ಹಾಗೂ ದೃಷ್ಟಿಹೀನತೆ ಮಾತ್ರ ಇದೆ. ಇದನ್ನು ಬಿಟ್ಟರೆ ಅವರು ಇತರೆ ಸಾಮಾನ್ಯ ಮನುಷ್ಯರಂತೆ ಜೀವನ ನಡೆಸಲು ಅರ್ಹರಾಗಿರುವುದರಿಂದ ಅವರು ಸಮಾಜದ ಅವಿಭಾಜ್ಯ ಅಂಗ ಎಂದರೆ ತಪ್ಪಾಗಲಾರದು ಎಂದು ಹೇಳಿದರು.
ಲೂಯಿಬ್ರೈಲ್ ಹದಿಹರೆಯ ವಯಸ್ಸಿನಲ್ಲಿಯೇ ತನ್ನ ಎರಡು ಕಣ್ಣುಗಳನ್ನು ಕಳೆದುಕೊಂಡರೂ ತನ್ನಂತೆ ವಿದ್ಯಾರ್ಜನೆಯಿಂದ ಇತರ ಅಂಧರು ವಂಚಿತರಾಗದಂತೆ ಬ್ರೈಲ್ ಲಿಪಿಯನ್ನು ಆವಿಷ್ಕರಿಸುವುದರ ಮೂಲಕ ಅಂಧರ ಬಾಳಿಗೆ ದಾರಿ ದೀಪದಂತಿದ್ದಾರೆ ಎಂದರು.
ಅವರು ಬ್ರೈಲ್ ಲಿಪಿಯನ್ನು ಆವಿಷ್ಕರಿಸದಿದ್ದಲ್ಲಿ ಅಂಧರು ಮತ್ತಷ್ಟು ಕೆಳಮಟ್ಟಕ್ಕೆ ಇಳಿಯುವ ಸಂಭವ ಉಂಟಾಗುತ್ತಿತ್ತು ಎಂದು ಹೇಳಿದ ಅವರು, ಇಂತಹ ಮಹಾನ್ ವ್ಯಕ್ತಿಗಳನ್ನು ಅಂಧರು ಹಾಗೂ ನಾವೆಲ್ಲರೂ ಎಂದಿಗೂ ಮರೆಯಬಾರದೆಂದರು. ಇದೇ ಸಂದರ್ಭದಲ್ಲಿ ಅವರು ಈ ಬಾರಿಯ ಲೂಯಿಬ್ರೈಲ್ ಪ್ರಶಸ್ತಿ ವಿಜೇತರಾದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ದ್ವಿ.ದ.ಸ ವೀರಕ್ಯಾತಯ್ಯ ರವರನ್ನು ಅಭಿನಂದಿಸಿದರು.
ಸಮಾರಂಭದಲ್ಲಿ ವಿಶ್ರಾಂತಿ ಪ್ರಾಂಶುಪಾಲ ಪ್ರೊ. ಹೆಚ್.ಆರ್ ಸಿದ್ದೇಗೌಡ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಕೆ.ರಾಧಾ, ಮೈಸೂರು ಆಪರೇಷನ್ಸ್ ಸ್ಯಾನ್ ಇಂಜಿನಿಯರಿಂಗ್ ಮತ್ತು ಲೋಕೋಮೋಟೀವ್ ಸಂಸ್ಥೆಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಎ.ಎನ್ ಮೂರ್ತಿ, ಡಿಲೈಟ್ ಸಂಸ್ಥೆ ಅಧ್ಯಕ್ಷ ಕುಮಾರ್, ಕಾರ್ಯದರ್ಶಿ ಕುಮಾರಸ್ವಾಮಿ ಹಾಗೂ ಲೂಯಿಬ್ರೈಲ್ ವಿಕಲ ಚೇತನರ ಸೇವಾ ಪ್ರತಿಷ್ಠಾನದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪ್ರತಿಷ್ಠಾನದ ವತಿಯಿಂದ ಅಂಧ ವಿದ್ಯಾರ್ಧಿಗಳಿಗಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.