ಜೆಡಿಎಸ್ ಮುಗಿಸಲು ಸಂಚು: ಸಿಎಂ ವಿರುದ್ಧ ದೇವೇಗೌಡ ಆರೋಪ
ನಾಗಮಂಗಲ, ಜ.28: ಜೆಡಿಎಸ್‍ನಲ್ಲಿ ಬೆಳೆದು ಮುಖ್ಯಮಂತ್ರಿಯಾದವರು ಇಂದು ನಮ್ಮ ಪಕ್ಷವನ್ನು ಮುಗಿಸಲು ಸಂಚು ರೂಪಿಸುತ್ತಿದ್ದಾರೆಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಆರೋಪಿಸಿದ್ದಾರೆ.
ತಾಲೂಕಿನ ಪಿ.ನೇರಲಕೆರೆಯಲ್ಲಿ ರವಿವಾರ ನಡೆದ ಕಸಬಾ ಹೋಬಳಿ ಮಟ್ಟದ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಹೆಸರೇಳದೆ ಸಿದ್ದರಾಮಯ್ಯ ಮತ್ತು ಜೆಡಿಎಸ್ ಬಂಡಾಯ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು.
ಜೆಡಿಎಸ್‍ನಲ್ಲೆ ಬೆಳೆದು ಸಿಎಂ ಆಗಿರುವವರು ನಮ್ಮ ಪಕ್ಷ ಮುಳುಗಿಸಲು ಸಂಚು ರೂಪಿಸಿದ್ದಾರೆ. ಅದಕ್ಕಾಗಿ ನಮ್ಮ ಅಭ್ಯರ್ಥಿ ಸುರೇಶ್‍ಗೌಡರಿಗೆ ಇನ್ನಿಲ್ಲದ ತೊಂದರೆಗಳನ್ನು ಕೊಡುತ್ತಿದ್ದಾರೆ. ಪಕ್ಷ ಉಳಿಸಿಕೊಳ್ಳುಕೊಳ್ಳಲು ನನ್ನ ಹೋರಾಟ ನಿಲ್ಲುವುದಿಲ್ಲ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿಸುವ ನಿಟ್ಟಿನಲ್ಲಿ ಶ್ರಮಿಸಿರಿ ಎಂದು ಅವರು ಕಾರ್ಯಕರ್ತರಿಗೆ ಕರೆ ನೀಡಿದರು.
ಕೆಟಿಎಸ್ ವಾಗ್ದಾಳಿ: ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ನಾಗಮಂಗಲ ಪಟ್ಟಣದ ಮಿನಿ ವಿಧಾನಸೌಧದ ಮುಂದಿನ ಅಂಬೇಡ್ಕರ್ ಪ್ರತಿಮೆಯನ್ನು ಅನಾಥವಾಗಿ ಬಿಟ್ಟು ಬೊಮ್ಮನಹಳ್ಳಿ ಗ್ರಾಮದಲ್ಲಿ ಸಚಿವ ಪ್ರಿಯಾಂಕ್ ಖರ್ಗೆಯವರಿಂದ ಅಂಬೇಡ್ಕರ್ ಪ್ರತಿಮೆ ಉದ್ಘಾಟಿಸಿರುವ ಶಾಸಕರಿಗೆ ದಲಿತರ ಮತ ಕೇಳಲು ನೈತಿಕ ಹಕ್ಕಿಲ್ಲ ಎಂದು ಹೇಳಿದರು.
ಕ್ಷೇತ್ರದಲ್ಲಿ ಆಗಿರುವ ಅಭಿವೃದ್ದಿಗಳೆಲ್ಲಾ ಕುಮಾರಸ್ವಾಮಿ ಸಿಎಂ ಆಗಿದ್ದಾಗ ನಡೆದದ್ದು ಎಂದ ಅವರು, 18 ಸಾವಿರ ಬಗರ್‍ಹುಕುಂ ಅರ್ಜಿದಾರರಿಗೆ ಇದುವರೆಗೂ ಸಾಗುವಳಿ ನೀಡದಿರುವುದು ಯಾಕೆ ಎಂದು ಪ್ರಶ್ನಿಸಿದರು.
ಫಾರೂಕ್ ಅವರನ್ನು ರಾಜ್ಯಸಭೆ ಚುನಾವಣೆ ಅಭ್ಯರ್ಥಿಯನ್ನಾಗಿ ಮಾಡಿದ ಜೆಡಿಎಸ್‍ಗೆ ಮತ ಹಾಕದೆ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದವರು ಮುಸ್ಲಿಂ ವಿರೋಧಿಗಳಾಗಿದ್ದಾರೆ ಎಂದು ಅವರು ಜೆಡಿಎಸ್ ಬಂಡಾಯ ಶಾಸಕರಾದ ಚಲುವರಾಯಸ್ವಾಮಿ ಮತ್ತು ಜಮೀರ್ ಅಹಮ್ಮದ್ ವಿರುದ್ದ ವಾಗ್ದಾಳಿ ನಡೆಸಿದರು.
ಜನತೆ ಕೊಟ್ಟ ಅಧಿಕಾರ ಮಾರಿಕೊಳ್ಳುವುದಿಲ್ಲ:
ಜೆಡಿಎಸ್ ಅಭ್ಯರ್ಥಿ ಸುರೇಶ್‍ಗೌಡ ಮಾತನಾಡಿ, ಕ್ಷೇತ್ರದ ಜನತೆ ಕೊಟ್ಟ ಅಧಿಕಾರವನ್ನು ನಾನು ವ್ಯಾಪಾರಕ್ಕಾಗಿ ಬಳಸಿಕೊಳ್ಳುವುದಿಲ್ಲ ಎಂದು ಎದುರಾಳಿ ಚಲುವರಾಯಸ್ವಾಮಿಗೆ ತಿರುಗೇಟು ನೀಡಿದ ಅವರು, ನಾನು ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಗೆ ಮತ್ತು ಅಭಿವೃದ್ದಿಗೆ ಬದ್ದನಾಗಿದ್ದು, ದೇವೇಗೌಡ, ಕುಮಾರಸ್ವಾಮಿಯ ಶಕ್ತಿಯನ್ನು ತೋರಿಸಬೇಕು ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.
ಸಂಸದ ಸಿ.ಎಸ್.ಪುಟ್ಟರಾಜು, ಶಾಸಕ ಎನ್.ಅಪ್ಪಾಜಿಗೌಡ, ಜೆಡಿಎಸ್ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಝಫರುಲ್ಲಾ ಖಾನ್, ಮಾಜಿ ಶಾಸಕರಾದ ಎಲ್.ಆರ್.ಶಿವರಾಮೇಗೌಡ, ಎಂ.ಶ್ರೀನಿವಾಸ್, ಜಿಪಂ ಸದಸ್ಯರಾದ ಶಿವಪ್ರಕಾಶ್, ಶಿವಣ್ಣ, ಮಾಜಿ ಸದಸ್ಯ.ರಾದ ಚಂದ್ರೇಗೌಡ, ಡಿ.ಟಿ.ಶ್ರೀನಿವಾಸ್, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ತಾಲೂಕು ಅಧ್ಯಕ್ಷ ಜವರೇಗೌಡ, ಎಸ್ಸಿ,ಎಸ್ಟಿ ವಿಭಾಗದ ಅಧ್ಯಕ್ಷ ಕಂಚಿನಕೋಟೆ ಮೂರ್ತಿ, ಇತರೆ ಮುಖಂಡರು ಉಪಸ್ಥಿತರಿದ್ದರು.
ಕಾವೇರಿ ತೀರ್ಪಿನ ಬಗ್ಗೆ ಆತಂಕವಿದೆ:
ಈಗಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇನ್ನೆರಡು ವಾರದಲ್ಲಿ ಹೊರ ಬೀಳಲಿರುವ ಕಾವೇರಿ ನದಿ ನೀರು ಹಂಚಿಕೆಯ ಅಂತಿಮ ತೀರ್ಪಿನ ಬಗ್ಗೆ ಆತಂಕವಿದೆ. ಸುಪ್ರೀಂಕೋರ್ಟ್ ತೀರ್ಪನ್ನು ನಮಗೆ ತಿರಸ್ಕರಿಸಲು ಆಗಲ್ಲ. ಅಲ್ಲದೆ, ಈಗಾಗಲೇ ತೀರ್ಪು ನೀಡಬೇಕಾದವರ ವಿರುದ್ದವೇ 4 ಜನ ನ್ಯಾಯಾಧೀಶರು ತಿರುಗಿಬಿದ್ದಿದ್ದಾರೆ. ಈ ಬೆಳವಣಿಗೆಯಿಂದ ತೀರ್ಪು ಯಾವ ರೀತಿ ಬರುವುದೋ ಎಂಬ ಆತಂಕ ನಮ್ಮನ್ನು ಕಾಡುತ್ತಿದೆ ಎಂದು ದೇವೇಗೌಡರು ಆತಂಕ ವ್ಯಕ್ತಪಡಿಸಿದರು.