ದೇಶದಲ್ಲಿ ಪೋಲಿಯೋ ನಿರ್ಮೂಲನೆ ಮಾಡೋಣ: ಡಾ.ಎಂ.ಲೋಕೇಶ್
ಶಿವಮೊಗ್ಗ, ಜ. 28: ದೇಶದಲ್ಲಿ ಪೊಲಿಯೋ ನಿರ್ಮೂಲನೆ ಮಾಡಲು ಆರೋಗ್ಯ ಇಲಾಖೆಯ ಸಿಬ್ಬಂದಿಗಳೊಂದಿಗೆ ಸಾರ್ವಜನಿಕರು, ಮಕ್ಕಳ ಪೋಷಕರು ಕೈಜೋಡಿಸುವಂತೆ ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ಅವರು ಹೇಳಿದರು.
ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರೋಟರಿ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಬಿ.ಹೆಚ್.ರಸ್ತೆ, ವಿದ್ಯಾನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪಲ್ಸ್ ಪೊಲೀಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಮಕ್ಕಳಿಗೆ ಶಾಶ್ವತ ಅಂಗವಿಕಲತೆ ಉಂಟು ಮಾಡುವ ಪೋಲಿಯೋ ರೋಗದಿಂದ ಮುಕ್ತವಾಗಲು ಲಸಿಕೆಯೊಂದೇ ಪರಿಹಾರವಾಗಿದೆ ಎಂದ ಅವರು, ಪೋಷಕರು ತಮ್ಮ 5 ವರ್ಷದೊಳಗಿನ ಮಕ್ಕಳಿಗೆ ಹಿಂದೆ ಎಷ್ಟೇ ಬಾರಿ ಪೋಲಿಯೋ ಲಸಿಕೆ ಹಾಕಿಸಿದ್ದರೂ ಮತ್ತೊಮ್ಮೆ ತಪ್ಪದೇ ಲಸಿಕೆ ಹಾಕಿಸಿ. ತಮ್ಮ ಮನೆ ಸಮೀಪದ ಶಾಲೆ, ಅಂಗನವಾಡಿ ಕೇಂದ್ರಗಳಲ್ಲಿ ತೆರೆದಿರುವ ಲಸಿಕಾ ಕೇಂದ್ರಗಳಲ್ಲಿ ಮಕ್ಕಳಿಗೆ ಲಸಿಕೆ ಹಾಕಲು ಜಿಲ್ಲಾಡಳಿತದ ವತಿಯಿಂದ ಕ್ರಮ ಕೈಗೊಳ್ಳಲಾಗಿದೆ ಎಂದರು.
ತಮ್ಮ ಮಕ್ಕಳಿಗೆ ಪೊಲೀಯೋ ಹಾಕಿಸಿರುವವರು ತಮ್ಮ ಮನೆಯ ಸುತ್ತಮುತ್ತಲಿರುವ ಮಕ್ಕಳಿಗೆ ಪೋಲಿಯೋ ಹಾಕಿಸಲು ಮಾಹಿತಿ ನೀಡಿ ಲಸಿಕಾ ಕೇಂದ್ರಕ್ಕೆ ಕರೆತರುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಾಯೋಜಿತ ಈ ಕಾರ್ಯಕ್ರಮ ಇದಾಗಿದ್ದು, ಪೋಲಿಯೋ ರೋಗ ಮುಕ್ತ ದೇಶ ನಿರ್ಮಾಣಕಾರ್ಯಕ್ಕೆ ಎಲ್ಲರೂ ಮುಂದಾಗುವಂತೆ ಅವರು ಸೂಚಿಸಿದರು.
ಈ ಸಂದಭದಲ್ಲಿ ಮಹಾನಗರಪಾಲಿಕೆಯ ಸದಸ್ಯ ವಿಶ್ವನಾಥ ಕಾಶಿ, ರಾಜಶೇಖರ, ಜಿಲ್ಲಾ ಸರ್ಜನ್ ಡಾ.ರಘುನಂದನ್, ಆರ್.ಸಿ.ಹೆಚ್.ಅಧಿಕಾರಿ ಡಾ.ನಟರಾಜ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಿ.ಹನುಮಂತಪ್ಪ, ಡಾ.ಜಗದೀಶ್ ಸೇರಿದಂತೆ ರೋಟರಿ ಸಂಸ್ಥೆಯ ಡಾ.ನಾರಾಯಣ್ ಮತ್ತು ಪದಾಧಿಕಾರಿಗಳು, ಸಾರ್ವಜನಿಕರು, ಪೋಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.