×
Ad

ನಾವೆಲ್ಲರುರೂ ಮೊದಲು ಭಾರತೀಯರಾಗೋಣ: ಏರ್ ಮಾರ್ಷಲ್ ಕೆ.ಸಿ.ಕಾರ್ಯಪ್ಪ ಕರೆ

Update: 2018-01-28 23:11 IST

ಮಡಿಕೇರಿ, ಜ.28 : ನಾವೆಲ್ಲರು ಮೊದಲಿಗೆ ‘ಭಾರತೀಯರು, ನಂತರವಷ್ಟೆ ನಮ್ಮ ಧರ್ಮ, ಜಾತಿ ಎನ್ನುವ ಉದಾತ್ತ ನಿಲುವನ್ನು ರಾಷ್ಟ್ರದ ಪ್ರಥಮ ಮಹಾದಂಡನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹೊಂದಿದ್ದರಲ್ಲದೆ, ಯುವ ಸಮೂಹಕ್ಕೆ ಪ್ರೇರಣಾದಾಯಕರಾಗಿದ್ದರು ಎಂದು ಅವರ ಪುತ್ರ ಏರ್ ಮಾರ್ಷಲ್ ಕೆ.ಸಿ.ಕಾರ್ಯಪ್ಪ ಶ್ಲಾಘಿಸಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ಕೋಟೆ ಆವರಣದಲ್ಲಿ ಆಯೋಜಿತ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪನವರ 119ನೇ ಜನ್ಮ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ, ಅತಿಥಿ ಗಣ್ಯರೊಂದಿಗೆ ಫೀ.ಮಾ.ಕಾರ್ಯಪ್ಪನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ತಮ್ಮ ತಂದೆ ಫೀ.ಮಾ.ಕಾರ್ಯಪ್ಪ ಅವರ ವ್ಯಕ್ತಿತ್ವ, ಧೋರಣೆಗಳನ್ನು ತೆರೆದಿಟ್ಟ ಏರ್ ಮಾರ್ಷಲ್ ಕೆ.ಸಿ. ಕಾರ್ಯಪ್ಪ, ಒಮ್ಮೆ ತನ್ನ ತಂದೆಯವರು ನನ್ನನ್ನು ನೀನು ಯಾರು ಎಂದು ಪ್ರಶ್ನಿಸಿದಾಗ, ನಾನು ಕೊಡವ ಎಂದು ಉತ್ತರಿಸಿದ್ದೆ. ಈ ಸಂದರ್ಭ ತಂದೆ ‘ಮೊದಲು ನಾವೆಲ್ಲರು ಭಾರತೀಯರು. ಉಳಿದುದೆಲ್ಲ ನಂತರ’ ಎನ್ನುವ ಬಹುಮೂಲ್ಯವಾದ ಸಂದೇಶವನ್ನು ನೀಡಿದ್ದರೆಂದು ತಿಳಿಸಿದರು.

ಭಾರತೀಯ ಸೇನೆಯ ಸೇವೆಯುದ್ದಕ್ಕೂ ಪೀ.ಮಾ.ಕಾರ್ಯಪ್ಪ ಅವರು ತಾವು ಹೋದ ಕಡೆಗಳಲ್ಲೆಲ್ಲಾ ತಮ್ಮ ಮಾನವೀಯ ಗುಣಗಳಿಂದ ಆಯಾ ಪ್ರದೇಶದ ಜನರು ಮತ್ತು ಸೈನಿಕರ ಮನವನ್ನು ತಟ್ಟಿದ್ದರು. ಈ ಹಿನ್ನೆಲೆಯಲ್ಲಿ ಫೀ.ಮಾ.ಕಾರ್ಯಪ್ಪರು ಸೈನಿಕರಿಗೆ ಪ್ರೀತಿ ಪಾತ್ರವಷ್ಟೆ ಅಲ್ಲ ಪೂಜನೀಯರಾಗಿದ್ದರೆಂದು ತಿಳಿಸಿದ ಏರ್ ಮಾರ್ಷಲ್ ಕೆ.ಸಿ. ಕಾರ್ಯಪ್ಪ, ಭವ್ಯ ಭಾರತದ ಭವಿಷ್ಯ ಯುವ ಸಮೂಹದ ಮೇಲಿದ್ದು, ಪ್ರತಿಯೊಬ್ಬರು  ರಾಷ್ಟ್ರದ ಏಳಿಗೆಗೆ ಐಕ್ಯತೆಯಿಂದ  ಶ್ರಮಿಸಬೇಕು ಎಂದರು.

ಭಾರತ ರತ್ನಕ್ಕಾಗಿ ಭಿಕ್ಷೆ ಬೇಡುವುದು ಬೇಡ: ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಾಜಿ ಸಚಿವರಾದ ಎಂ.ಸಿ. ನಾಣಯ್ಯ ಮಾತನಾಡಿ, ಫೀ.ಮಾ. ಕಾರ್ಯಪ್ಪ ಅವರು ಇಡೀ ಪ್ರಪಂಚಕ್ಕೆ ‘ರತ್ನ’ವೆಂದು ಬಣ್ಣಿಸಿ, ಇಂತಹ ಭವ್ಯ ಮೇರು ವ್ಯಕ್ತಿತ್ವಕ್ಕೆ ಭಾರತ ರತ್ನವನ್ನು ನೀಡಿ ಎಂದು ಭಿಕ್ಷೆ ಬೇಡುವುದನ್ನು ಇನ್ನಾದರು ನಿಲ್ಲಿಸಬೇಕೆಂದು ಹೇಳಿದರು.

ತಾನು ಸಚಿವನಾಗಿದ್ದ 1994 ಮತ್ತು 1997 ನೇ ಸಾಲಿನಲ್ಲಿ ಎರಡು ಬಾರಿ ಫೀ.ಮಾ.ಕಾರ್ಯಪ್ಪ ಮತ್ತು ನಿಜಲಿಂಗಪ್ಪ ಅವರಿಗೆ ಭಾರತ ರತ್ನವನ್ನು ನೀಡುವಂತೆ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಕಳುಹಿಸಿಕೊಡುವ ಕೆಲಸವನ್ನು ಮಾಡಿದ್ದೇನೆ. ಆದರೆ, ಇಲ್ಲಿಯವರೆಗೂ ಅದಕ್ಕೆ ಸೂಕ್ತ ಸ್ಪಂದನ ದೊರಕಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ಸ್ವಾತಂತ್ರ್ಯಾನಂತರ ಭಾರತೀಯ ಸೇನೆಯನ್ನು ಸಶಕ್ತವಾಗಿ ರೂಪಿಸಿದ ಫೀ.ಮಾ.ಕಾರ್ಯಪ್ಪ ಅವರು ಫಾದರ್ ಆಫ್ ಇಂಡಿಯನ್ ಆರ್ಮಿ ಎಂದೇ ಜನಜನಿತರಾಗಿದ್ದಾರೆ. ಇಂತಹ ಮಹಾನ್ ವ್ಯಕ್ತಿಗೆ ಪ್ರಥಮವಾಗಿ ಫೀಲ್ಡ್ ಮಾರ್ಷಲ್ ಪದವಿಯನ್ನು ನೀಡಬೇಕಾಗಿತ್ತು. ಹೀಗಿದ್ದೂ ಆ ಪದವಿಯನ್ನ 1986 ರಲ್ಲಿ ಕೊಡಲಾಯಿತೆಂದು ತಿಳಿಸಿದ ಎಂ.ಸಿ ನಾಣಯ್ಯ, ಈ ಎಲ್ಲಾ ವಿಚಾರಗಳ ಹಿನ್ನೆಲೆಯಲ್ಲಿ ಕೇಂದ್ರದಿಂದಲೂ ರಾಜಕೀಯ ನಡೆದಿದೆಯೆಂದು ಅನಿಸಿಕೆ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ಫೀ.ಮಾ.ಕಾರ್ಯಪ್ಪ ಕುರಿತ ‘ಯುಗ ಪುರುಷ’ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಿ ಮಾತನಾಡಿ, ಸ್ವಾತಂತ್ರ್ಯಾನಂತರದ ಅವಧಿಯಲ್ಲಿ ಸುಭದ್ರ ಸೈನ್ಯದ ನಿರ್ಮಾಣಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟ ಮಹಾನ್ ವ್ಯಕ್ತಿ ಫೀ.ಮಾ. ಕಾರ್ಯಪ್ಪ ಅವರಾಗಿದ್ದು, ಅವರ ಶಿಸ್ತು, ಸಂಯಮ, ದೇಶ ಭಕ್ತಿಯನ್ನು ಮೈಗೂಡಿಸಿಕೊಳ್ಳುವ ಮೂಲಕ ರಾಷ್ಟ್ರಾಭ್ಯುದಯಕ್ಕೆ ಮುಂದಾಗುವಂತೆ ಕರೆ ನೀಡಿದರು.

ಫೋರಂ ಕಾರ್ಯದರ್ಶಿ ಉಳ್ಳಿಯಡ ಎಂ. ಪೂವಯ್ಯ ಅವರು ಫೀ.ಮಾ.ಕಾರ್ಯಪ್ಪ ಅವರ ಜನ್ಮ ದಿನವನ್ನು ‘ರಾಷ್ಟ್ರೀಯ ಶಿಸ್ತಿನ’ ದಿನವನ್ನಾಗಿ ಆಚರಿಸುವಂತಾಗಬೇಕೆಂದು ತಿಳಿಸಿ, ಅವರ ಬದುಕಿನ ಬಗ್ಗೆ ಮಾಹಿತಿ ನೀಡಿದರು.ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಬಿ.ಎ. ಹರಿಶ್ ಮಾತನಾಡಿ, ಫೀ.ಮಾ.ಕಾರ್ಯಪ್ಪ ಅವರ ಬದುಕಿನ ಆದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಮತ್ತು ಪೋಷಕರು ತಮ್ಮ ಮಕ್ಕಳನ್ನು ಸೈನ್ಯಕ್ಕೆ ಕಳುಹಿಸಲು ಮುಂದಾಗುವಂತೆ ಕೋರಿದರು.

ಸಮಾರಂಭದಲ್ಲಿ ಜಿಪಂ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿಲ್ಲಾ ಕಸಾಪ ಅಧ್ಯಕ್ಷ ಲೋಕೇಶಗ ಸಾಗರ್, ಮಡಿಕೇರಿ ನಗರಸಭಾ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ, ಜಿಪಂ ಸಿಇಒ ಪ್ರಶಾಂತ್ ಕುಮಾರ್ ಮಿಶ್ರ  ಉಪಸ್ಥಿತರಿದ್ದರು.

ಕೊಡವ ಅಕಾಡೆಮಿ ಮಾಜಿ ಅಧ್ಯಕ್ಷ ಬಿ.ಎಸ್, ತಮ್ಮಯ್ಯ ಸ್ವಾಗತಿಸಿ, ಹಿಂದುಳಿದ ವರ್ಗಗಳ ಇಲಾಖಾ ಅಧಿಕಾರಿ ಸುರೇಶ್ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕರಾದ ಚಿನ್ನಸ್ವಾಮಿ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News