ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಸಾಲ ಮನ್ನಾ: ಕುಮಾರಸ್ವಾಮಿ
ಹರಿಹರ,ಜ.28 : ಜೆಡಿಎಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಎಲ್ಲಾ ರಾಷ್ಟ್ರೀಕೃತ ಸಹಕಾರ, ಗ್ರಾಮೀಣ ಬ್ಯಾಂಕ್ ಸಾಲ ಮನ್ನಾ ಮಾಡುವುದು ನಿಶ್ಚಿತ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಪುನರುಚ್ಛರಿಸಿದರು.
ನಗರದ ಎಸ್.ಜೆ.ವಿ.ಪಿ. ಪಾಲಿಟೆಕ್ನಿಕ್ ಕಾಲೇಜು ಆವರಣದಲಿ ಹರಿಹರ ಹಬ್ಬ ಕಾರ್ಯಕ್ರಮದ ಅಂಗವಾಗಿ ನಡೆದ 46 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಇಲ್ಲಿಯವರೆಗೂ 3,500ಕ್ಕೂ ಅಧಿಕ ರೈತರು ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲಬಾಧೆಯಿಂದ ಬೇಸತ್ತು ನೇಣು, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಕುಟುಂಬಗಳು ಬೀದಿಗೆ ಬಿದ್ದಿವೆ. ಹಾಗಾಗಿ, ನಾಡಿನ ಆರೂವರೆ ಕೋಟಿ ಜನರಿಗೆ ಉತ್ತಮ ಬದುಕು, ಆರೋಗ್ಯ, ಶಿಕ್ಷಣ, ರೈತನಿಗೆ 24 ಗಂಟೆ ವಿದ್ಯುತ್ ಒದಗಿಸುವುದೇ ನನ್ನ ಮೊದಲ ಗುರಿಯಾಗಿದೆ ಎಂದರು.
ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯದ 113 ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಬಹುಮತಗಳಿಂದ ಆಯ್ಕೆಯಾಗುತ್ತಾರೆಂದು ನಾನು ನಂಬಿದ್ದೇನೆ. ಜನತೆ ಆಶೀರ್ವದಿಸಿ ಜನತಾದಳ ಪಕ್ಷವನ್ನು ಅಧಿಕಾರಕ್ಕೆ ತಂದಲ್ಲಿ 24 ಗಂಟೆಯೊಳಗಾಗಿ ರೈತರ ಸಂಪೂರ್ಣ ಸಾಲಮನ್ನಾ, ಸಮಗ್ರ ನೀರಾವರಿ, ಕುಡಿಯುವ ನೀರು, ಕೃಷಿ ಕ್ಷೇತ್ರ ಮತ್ತು ಮಹಿಳೆಗೆ ವಿವಿಧ ಕ್ಷೇತ್ರಗಳಲ್ಲಿ ಪ್ರಥಮ ಆದ್ಯತೆ ನೀಡುತ್ತೇನೆ ಎಂದರು.
ಕೃಷಿ ಪ್ರಧಾನವಾದ ದೇಶವು ಬಹುತೇಕ ಹಳ್ಳಿಗಳಿಂದ ಕೂಡಿದೆ. ರಾಜ್ಯದ ಗ್ರಾಮೀಣ ಪ್ರದೇಶಲ್ಲಿನ ರೈತರ, ಕೃಷಿ ಕೂಲಿಕಾರ್ಮಿಕರ ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಪದವೀಧರರಾಗಿರುವ ಅನೇಕರು ಇಂದು ನಿರುದ್ಯೋಗಿಗಳಾಗಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಪದವಿ ಪಡೆದು ನಿರುದ್ಯೋಗಿಗಳಾಗಿರುವ ರೈತರ ಮಕ್ಕಳು ಉದ್ಯೋಗವನ್ನರಸಿ ಊರನ್ನು ಹಾಗೂ ತಂದೆತಾಯಿಯನ್ನು ಬಿಟ್ಟು ಬೇರೆಡೆಗೆ ಹೋಗುವುದನ್ನು ಹಾಗೂ ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ಕೃಷಿ ಕ್ಷೇತ್ರದಲ್ಲಿಯೇ ವಿಶೇಷ ಯೋಜನೆ ಜಾರಿಗೆ ತರಲಾಗುವುದೆಂದರು.
ಇತ್ತೀಚಿನ ದಿನಗಳಲ್ಲಿ ಮಾದ್ಯಮಗಳಲ್ಲಿ ಪ್ರಕಟವಾಗುವ ಸುದ್ದಿಗಳು ಬೇಸರವನ್ನುಂಟು ಮಾಡಿವೆ. ಆಡಳಿತ ಮತ್ತು ವಿರೋಧ ಪಕ್ಷದ ನಾಯಕರು ಮಾತನಾಡುತ್ತಿರುವ ಮಾತಿನ ಶೈಲಿಯ ಶುದ್ದಿಗಳು ಕೇವಲ ಜೈಲುವಾಸಕ್ಕೆ ಕಳುಹಿಸುವ ನಾಟಕ ಕಂಪನಿಯವರು ಆಡುವ ಮಾತುಗಳಾಗಿವೆ. ಇಂತಹ ನಾಯಕರನ್ನು ಮನೆಗಟ್ಟುವ ಕಾರ್ಯಕ್ಕೆ ಮತದಾರರು ಮುಂದಾಗಬೇಕೆಂದು ಅವರು ಮನವಿ ಮಾಡಿದರು.
ಶಾಸಕರಾದ ಹೆಚ್.ಎಸ್. ಶಿವಶಂಕರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಾಡಿನ ವಿವಿಧ ಮಠಗಳ ಮಠಾಧೀಶರು ಸಾನ್ನಿದ್ಯ ವಹಿಸಿದ್ದರು. ಹರಿಹರ ನಗರಸಭೆಯ ಪ್ರಭಾರಿ ಅಧ್ಯಕ್ಷೆ ಬೇಡರ ಇದ್ದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಬಿ. ಚಿದಾನಂದಪ್ಪ, ತಾಪಂ ಸದಸ್ಯ ಕೊಟ್ರೇಶ್‍ಗೌಡ, ಮಹಿಳಾ ಘಟಕದ ಅಧ್ಯಕ್ಷರಾದ ಶೀಲಾನಾಯ್ಕ, ಜಿ. ನಂಜಪ್ಪ, ಎಚ್. ಅಬಿಬುಲ್ಲಾ, ಅಮಾನುಲ್ಲಾಖಾನ್, ಎಚ್. ಧರ್ಮಪ್ಪ, ರೇವಣಸಿದ್ದಪ್ಪ ಅಂಗಡಿ, ಮಂಜುನಾಥ್ ದೇಸಾಯಿ, ಶೀಲಾ ಕೊಟ್ರೇಶ್, ಅಂಗಡಿ ಬಸೆಟಪ್ಪ, ಲತಾ ಕೊಟ್ರೇಶ್, ಹೊನ್ನಾಮ್ಮ ಕೆ., ಲಕ್ಷ್ಮೀ ರಾಜಾಚಾರ್, ಅಡಕೆ ಕುಮಾರ್, ರಾಜಣ್ಣ ಮತ್ತಿತರರಿದ್ದರು.