×
Ad

ಕೋಮು ಗಲಭೆಗೆ ಬಿಜೆಪಿ, ಕಾಂಗ್ರೆಸ್ ಕಾರಣ: ಮಧು ಬಂಗಾರಪ್ಪ ಆರೋಪ

Update: 2018-01-29 18:30 IST

ಮಡಿಕೇರಿ, ಜ.29 :ಧರ್ಮ ಮತ್ತು ಜಾತಿಯನ್ನು ಒಡೆದು ರಾಜಕಾರಣ ಮಾಡುತ್ತಿರುವ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಂದಾಗಿ ಕರಾವಳಿ ಸೇರಿದಂತೆ ರಾಜ್ಯದ ವಿವಿಧೆಡೆ ಕೋಮು ಗಲಭೆ, ಸಾವು ನೋವುಗಳು ಸಂಭವಿಸುತ್ತಿದೆ ಎಂದು ಜಾತ್ಯತೀತ ಜನತಾದಳದ ಯುವ ಘಟಕದ  ರಾಜ್ಯಾಧ್ಯಕ್ಷರಾದ ಮಧು ಬಂಗಾರಪ್ಪ ಆರೋಪಿಸಿದ್ದಾರೆ.

ನಗರದ ಸುದರ್ಶನ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಯಾವುದೇ ಭಾಗದಲ್ಲಿ ನಡೆಯುವ ಹಿಂದೂಗಳ ಸಾವನ್ನು ಬಿಜೆಪಿ ಹಾಗೂ ಅಲ್ಪಸಂಖ್ಯಾತರ ಸಾವನ್ನು ಕಾಂಗ್ರೆಸ್ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿವೆ. ಜಾತ್ಯತೀತ ಜನತಾದಳ ಚುನಾವಣೆಯನ್ನು ತನ್ನ ಜಾತ್ಯತೀತ ನಿಲುವಿನ ಮೂಲಕ ಎದುರಿಸಲಿದೆ ಎಂದರು.

ರಾಷ್ಟ್ರೀಯ ಪಕ್ಷಗಳು ಎಲ್ಲಾ ಕ್ಷೇತ್ರಗಳಲ್ಲಿ ವೈಫಲ್ಯತೆಯನ್ನು ಕಾಣುತ್ತಿದ್ದು, ಇಲ್ಲಿನ ನೆಲ, ಜಲ, ಭಾಷೆಗಳನ್ನು ಕಡೆಗಣಿಸುತ್ತಿವೆ. ಈ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಪ್ರಾದೇಶಿಕ ಪಕ್ಷದ ಅಗತ್ಯತೆ ಇದೆ. ಈ ವಿಚಾರವನ್ನು ಮುಂದಿಟ್ಟುಕೊಂಡು ಹೆಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಈ ರಾಜ್ಯಕ್ಕೆ ನೀಡಿದ ವಿಚಾರಗಳನ್ನು ಮತ್ತು ಮುಂದೆ ನೀಡಲಿರುವ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಮುಟ್ಟಿಸಲು ‘ಕರ್ನಾಟಕಕ್ಕೆ ಕುಮಾರಣ್ಣ’ ಎನ್ನುವ ಅಭಿಯಾನವನ್ನು ಯುವ ಜನತಾದಳ ಕೈಗೆತ್ತಿಕೊಳ್ಳಲಿದೆ ಎಂದ ಅವರು, ಕುಮಾರಸ್ವಾಮಿ ಅವರ ನೇತೃತ್ವದ ಜೆಡಿಎಸ್‍ನ್ನು ಬೆಂಬಲಿಸುವಂತೆ ಜನರಲ್ಲಿ ಮನವಿ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದರು.

ಕೊಡಗು ಜಿಲ್ಲೆಯ ಶಾಸಕರು ಮತ್ತು ಸಂಸದರು ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗೆಹರಿಕೆಯ ನಿಟ್ಟಿನಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಡಾ.ಕಸ್ತೂರಿ ರಂಗನ್ ವರದಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಸೋತಿದ್ದಾರೆ. ಜೆಡಿಎಸ್ ಪರಿಸರ ಸಂರಕ್ಷಣೆಯ ವಿರೋಧಿಗಳಲ್ಲವೆಂದು ಸ್ಪಷ್ಟಪಡಿಸಿದ ಮಧುಬಂಗಾರಪ್ಪ, ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಕೇರಳಕ್ಕೊಂದು ಧೋರಣೆ ರಾಜ್ಯಕ್ಕೊಂದು ಧೋರಣೆ ಯಾಕೆ ಎಂದು ಪ್ರಶ್ನಿಸಿದರು.

ಅರಣ್ಯ ವ್ಯಾಪ್ತಿಯಲ್ಲಿ ಅಗತ್ಯ ಆಹಾರ ಇಲ್ಲದೆ ಕಾಡಾನೆಗಳು ನಾಡಿಗೆ ಲಗ್ಗೆ ಇಡುತ್ತಿವೆ. ಹೀಗಿದ್ದೂ ಸರ್ಕಾರ ಸಮಸ್ಯೆ ಬಗೆಹರಿಕೆಯ ನಿಟ್ಟಿನಲ್ಲಿ ಅಗತ್ಯ ಕಾರ್ಯಕ್ರಮಗಳನ್ನು ರೂಪಿಸಿಲ್ಲ. ಈ ಎಲ್ಲಾ ವಿಚಾರಗಳ ಬಗ್ಗೆ ಚಿಂತಿಸಿ ವೈಜ್ಞಾನಿಕವಾಗಿ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವ ಅಗತ್ಯವಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ಗಂಭೀರ ಚಿಂತನೆ ಹರಿಸಲಿರುವ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‍ ಅನ್ನು ರಾಜ್ಯದಲ್ಲಿ ಅಧಿಕಾರಕ್ಕೇರಿಸುವ ಪ್ರಯತ್ನಗಳನ್ನು ಯುವ ಜೆಡಿಎಸ್ ನಡೆಸುತ್ತಿರುವುದಾಗಿ ಸ್ಪಷ್ಟಪಡಿಸಿದರು.

ಪಾಪದ ಕೊಡ: 
ಆತ್ಮಚರಿತ್ರೆ ಎನ್ನುವುದು ಯಾವತ್ತೂ ಮಾರ್ಗದರ್ಶಕವಾಗಿರಬೇಕು. ಆದರೆ, ಹಿರಿಯ ರಾಜಕಾರಣಿ ಜನಾರ್ಧನ ಪೂಜಾರಿಯ ಆತ್ಮಚರಿತ್ರೆಯೊಂದು ‘ಪಾಪದ ಕೊಡ’ ಎಂದು ಮಧು ಬಂಗಾರಪ್ಪ ಆರೋಪಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಜನಾರ್ಧನ ಪೂಜಾರಿ ಅವರ ಆತ್ಮಚರಿತ್ರೆಯಲ್ಲಿ ತಮ್ಮ ತಂದೆ ಬಂಗಾರಪ್ಪ ಅವರನ್ನು ಕೀಳಾಗಿ ಉಲ್ಲೇಖಿಸಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಇಂದಿಗೂ ಬಂಗಾರಪ್ಪ ಅವರು ಕೊಟ್ಟ ಕಾರ್ಯಕ್ರಮಗಳ ಬಗ್ಗೆ ಜನತೆಯ ಮನದಲ್ಲಿ ಗೌರವವಿದೆ. ಬಂಗಾರಪ್ಪ ನೀಡಿದ ಆಶ್ರಯ, ಆರಾಧನಾ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಬಗ್ಗೆ ಜನತೆಯಲ್ಲಿ ಇಂದಿಗೂ ಗೌರವವಿದೆ ಎಂದು ತಿಳಿಸಿದರು. ಬಂಗಾರಪ್ಪ, ತಾವು ನಾಯಕರಾಗಿದ್ದುದಲ್ಲದೆ, ಸಾಕಷ್ಟು ನಾಯಕರನ್ನು ಸೃಷ್ಟಿಸಿದ್ದರು. ಅದೇ ಜನಾರ್ಧನ ಪೂಜಾರಿ ಎಷ್ಟು ನಾಯಕರನ್ನು ಸೃಷ್ಟಿಸಿದ್ದಾರೆ ಎಂದು ಪ್ರಶ್ನಿಸಿದರು. ಜನಾರ್ಧನ ಪೂಜಾರಿ ಅವರು ಮಾರ್ಗದರ್ಶನ ನೀಡುವ ವ್ಯಕ್ತಿಯಲ್ಲವೆಂದು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವರು ಹಾಗೂ ಪಕ್ಷದ ಪ್ರಮುಖರಾದ ಬಿ.ಎ.ಜೀವಿಜಯ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸಂಕೇತ್ ಪೂವಯ್ಯ, ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿ.ಹೆಚ್.ಚಂದ್ರಶೇಖರ್ ಉಪಸ್ಥಿತರಿದ್ದರು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News