×
Ad

ಟ್ರಿಣ್ ಟ್ರಿಣ್ ಬೈಸಿಕಲ್ ದರ ಪರಿಷ್ಕರಣೆ: ಡಿ.ರಂದೀಪ್

Update: 2018-01-29 20:48 IST

ಮೈಸೂರು,ಜ.29: ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಯಂತ್ರ ಚಾಲಿತವಲ್ಲದ ಈ ಬೈಸಿಕಲ್ ಯೋಜನೆಯನ್ನು ಸಾರ್ವಜನಿಕರ ಹಿತ ದೃಷ್ಟಿಯಿಂದ ಹಾಗೂ ಸೌಲಭ್ಯವನ್ನು ಹೆಚ್ಚಿನ ಜನರಿಗೆ ತಲುಪಿಸುವ ಉದ್ದೇಶದಿಂದ ಟ್ರಿಣ್ ಟ್ರಿಣ್ ಬೈಸಿಕಲ್ ಬಳಕೆಯ ದರಗಳನ್ನು ಪರಿಷ್ಕರಿಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದರು.

ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಅನುಷ್ಠಾನಗೊಳಿಸುತ್ತಿರುವ ಪಬ್ಲಿಕ್ ಬೈಸಿಕಲ್ ಶೇರಿಂಗ್ ಸಿಸ್ಟಮ್ ಟ್ರಿಣ್ ಟ್ರಿಣ್ ಕುರಿತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಫೆ.1ರಿಂದ ದರವನ್ನು ಪರಿಷ್ಕರಿಸಲಾಗುತ್ತಿದೆ. 30 ನಿಮಿಷ- ಒಂದು ಗಂಟೆ 5ರೂ. 1ರಿಂದ 2ಗಂಟೆ 15ರೂ, 3ರಿಂದ ನಾಲ್ಕು 35ರೂ, 4ರಿಂದ ಆರು 95ರೂ, 6ರಿಂದ ಎಂಟು 120ರೂ, 12 ಗಂಟೆಗೆ 245ರೂ. ಎಂದು ನಿಗದಿಪಡಿಸಲಾಗಿದೆ ಎಂದರು. ಅದಕ್ಕೆ ತಕ್ಕಂತೆ ನಿಮಿಷಗಳು ಉಚಿತವಾಗಿ ಸೇರಿವೆ ಎಂದರು.

ಟ್ರಿಣ್ ಟ್ರಿಣ್ ಬೈಸಿಕಲ್ ಯೋಜನೆಯ ಸದಸ್ಯರ ಅನುಕೂಲಕ್ಕಾಗಿ ಈ ಹಿಂದೆ ಜಾರಿಯಲ್ಲಿದ್ದ ಪ್ರತಿ ಮಾಹೆಯ ಶುಲ್ಕ ಪಾವತಿ ಮಾಡಬೇಕಾಗಿದ್ದು, ಅದನ್ನು ಸರಳಗೊಳಿಸಿ ದೀರ್ಘಾವಧಿಗೆ ಒಂದೇ ಬಾರಿ ಶುಲ್ಕ ಪಾವತಿಸುವ ಅವಕಾಶವನ್ನು ಕಲ್ಪಿಸಲಾಗಿದೆ. ಈ ಸಂಬಂಧ ಸದಸ್ಯರುಗಳು ನೋಂದಣಿ ಕೇಂದ್ರಗಳು ಅಥವಾ ಮೈಟ್ರಿಪ್ ಆಪ್ ಮೂಲಕ ಈ ಸದುಪಯೋಗವನ್ನು ಫೆ.1ರಿಂದ ಮಂತ್ಲಿ ಮೆಂಬರ್ ಶಿಪ್-60ರೂ,(ಒಂದು ತಿಂಗಳ ಅವಧಿಗೆ) ಕ್ವಾರ್ಟರ್ ಲಿ ಪ್ಲಾನ್ (ಮೂರು ತಿಂಗಳ ಅವಧಿಗೆ)180ರೂ.ಹಾಪ್ ಇಯರ್ಲಿ ಪ್ಲಾನ್( ಆರು ತಿಂಗಳ ಅವಧಿಗೆ)300ರೂ. ಒಂದು ವರ್ಷದ ಅವಧಿಗೆ 600ರೂ. ಸಲ್ಲಿಸಿ ಯಾವುದೇ ಯೋಜನೆಯನ್ನು ಪಡೆಯಬಹುದು ಎಂದು ತಿಳಿಸಿದರು. ಅಷ್ಟೇ ಅಲ್ಲದೇ ನಗರದ ಕೆಲವು ಕಡೆ ಮಾತ್ರ ಈಗಾಗಲೇ ಟ್ರಿಣ್ ಟ್ರಿಣ್ ಸೈಕಲ್ ಸ್ಟ್ಯಾಂಡ್ ನಿರ್ಮಿಸಲಾಗಿತ್ತು. ಇದೀಗ ಬಹುಜನರ ಬೇಡಿಕೆಗೆ ಸ್ಪಂದಿಸಿ ವಿಶ್ವಮಾನವ ಜೋಡಿ ರಸ್ತೆಯಲ್ಲಿರುವ ಕುವೆಂಪು ಪಾರ್ಕ್ ಬಳಿ, ಆಂದೋಲನ ಸರ್ಕಲ್, ನಿವೇದಿತಾ ಪಾರ್ಕ್ ಬಳಿ, ಗವರ್ನಮೆಂಟ್ ಮೆನ್ಸ್ ಮೆಡಿಕಲ್ & ಇಂಜಿನಿಯರಿಂಗ್ ಹಾಸ್ಟೇಲ್ ಬಳಿ, ಸ್ಪೀಚ್ & ಹಿಯರಿಂಗ್, ಯೂನಿವರ್ಸಿಟಿ ವೆಸ್ಟ್ ಗೇಟ್, ಐಶ್ವರ್ಯಾ ಪೆಟ್ರೋಲ್ ಬಂಕ್, ಗೋಕುಲಂ, ಫೌಂಟೇನ್ ಸರ್ಕಲ್, ನ್ಯೂ ಡಿಸಿ ಆಫೀಸ್, ಮೈಸೂರು ಕೆ.ಎಂ.ಎಫ್ ಡೈರಿ, ತೆರೆಶಿಯನ್ ಕಾಲೇಜ್, ಶಿವಾಜಿ ಪಾರ್ಕ್ ಬಳಿ ತೆರೆಯಲಾಗುತ್ತಿದೆ ಎಂದರು. ಇನ್ನೂ ಕೆಲವು ಕಡೆ ಬೇಡಿಕೆ ಬಂದಿದ್ದು, ಅಲ್ಲಿಯೂ ಕೂಡ ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದರು.

ಇದೇ ವೇಳೆ ಬೈಸಿಕಲ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದಿದ್ದು, ಪಾಲಿಕೆಯ ಅಧಿಕಾರಿಗಳು ಇತ್ತ ಗಮನ ಹರಿಸಿ ಅವುಗಳನ್ನು ಸರ್ವೀಸ್ ಗೆ ಕೊಡಲು ತಿಳಿಸಿದರು. ಈಗಾಗಲೇ ನಗರದಲ್ಲಿ 52 ಬೈಸಿಕಲ್ ನಿಲ್ದಾಣಗಳಿದ್ದು, ಈ ಯೋಜನೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಟ್ಟು 8250ಕ್ಕೂ ಹೆಚ್ಚು ಸದಸ್ಯರು ಕಳೆದ ತಿಂಗಳಿನಲ್ಲಿ ಈ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆಂದು ತಿಳಿಸಿದರು.

ಸಭೆಯಲ್ಲಿ ಮಹಾನಗರ ಪಾಲಿಕೆಯ ಆಯುಕ್ತ ಜಿ.ಜಗದೀಶ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News