ಮೋದಿ ಸರಕಾರ ಸುಳ್ಳಿನ ಕಂತೆಯ ಸರಕಾರ: ವಿಷ್ಣುನಾಧನ್

Update: 2018-01-29 17:46 GMT

ಮಂಡ್ಯ, ಜ.29: ಕೇಂದ್ರದ ನರೇಂದ್ರಮೋದಿ ನೇತೃತ್ವದ ಸರಕಾರ ಸುಳ್ಳಿನ ಕಂತೆಯ ಸರಕಾರವಾಗಿದೆ ಎಂದು ಟೀಕಿಸಿರುವ ಎಐಸಿಸಿ ಕಾರ್ಯದರ್ಶಿ ಹಾಗೂ ಮೈಸೂರು ವಿಭಾಗ ಉಸ್ತುವಾರಿ ವಿಶ್ವನಾಧನ್, ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗೆಸ್ ಸರಕಾರ ನುಡಿದಂತೆ ನಡೆದ ಸರಕಾರವಾಗಿದೆ ಎಂದು ಹೇಳಿದ್ದಾರೆ.

ನಗರದ ಬ್ರಾಹ್ಮಣಸಭಾ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಕಾಂಗ್ರೆಸ್‍ನ ಭೂತ್‍ಮಟ್ಟದ ಏಜೆಂಟರ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಸರಕಾರ ಅಧಿಕಾರಕ್ಕೆ ಬರುವ ಮುನ್ನ ಚುನಾವಣೆಯ ಪ್ರಣಾಳಿಕೆಯಲ್ಲಿ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸಿದೆ. ಜತೆಗೆ ಅನ್ನಭಾಗ್ಯ, ಕ್ಷೀರಭಾಗ್ಯ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದ ಜನಪರ ಸರಕಾರವಾಗಿದೆ ಎಂದರು.

ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರಕಾರ ಐದು ವರ್ಷದಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡಿದೆ. ಅಲ್ಲದೇ ಯಡಿಯೂರಪ್ಪ ಸೇರಿದಂತೆ ಹಲವಾರು ಮಂದಿ ಜೈಲಿಗೆ ಹೋಗಿ ಬಂದಿದ್ದಾರೆ. ಬಹಳಷ್ಟು ಮಂದಿ ಕಳಂಕಿತ ಆಪಾದನೆಯನ್ನು ಹೊಂದಿದ್ದಾರೆ. ಆದರೆ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ಒಬ್ಬ ಮಂತ್ರಿಯ ಮೇಲೆ ಆರೋಪಗಳಿಲ್ಲ, ಭ್ರಷ್ಟಾಚಾರಗಳಿಲ್ಲ. ಪಾರದರ್ಶಕವಾಗಿ ಆಡಳಿತ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಕೇಂದ್ರ ಸರಕಾರ ಬಡ ಮತ್ತು ಮಧ್ಯಮ ವರ್ಗದ ಜನರ ಮೇಲೆ ತೆರಿಗೆಯ ಬರೆಯನ್ನು ಎಳೆಯುತ್ತಿದೆ. ಜಿಎಸ್‍ಟಿ ಜಾರಿಗೆ ತಂದ ಪರಿಣಾಮ ಹಲವಾರು ತೊಂದರೆಗಳನ್ನು ಅನುಭವಿಸುವಂತಾಗಿದೆ. ಮತ್ತೊಂದೆಡೆ, ರಾಜ್ಯ ಸರಕಾರ 5 ರೂ.ಗಳಿಗೆ ತಿಂಡಿ, 10 ರೂ.ಗಳಿಗೆ ಊಟವನ್ನು ನೀಡುವ ಮೂಲಕ ಹಸಿವು ಮುಕ್ತ ರಾಜ್ಯವನ್ನಾಗಿ ಮಾಡುತ್ತಿದೆ ಎಂದು ಅವರು ವಿವರಿಸಿದರು.

ಈ ಹಿಂದೆ ಜಾಗತಿಕ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸಲ್ ದರ ಕಡಿಮೆಯಿದ್ದಾಗಲೂ ಕೇಂದ್ರ ಸರಕಾರ ಬೆಲೆಯನ್ನು ಇಳಿಕೆ ಮಾಡಲಿಲ್ಲ. ಪ್ರಸ್ತುತ ಇಂಧನ ದರಗಳು ಭಾರಿ ಏರಿಕೆಯಾಗುತ್ತಿದ್ದು, ಇದರ ಬಿಸಿ ಸಾರ್ವಜನಿಕರಿಗೆ ತಟ್ಟುತ್ತಿದೆ. ಇಂತಹ ಸರಕಾರವನ್ನು ಕಿತ್ತೊಗೆಯಬೇಕು ಎಂದು ಅವರು ಕರೆ ನೀಡಿದರು.

ಕಾಂಗ್ರೆಸ್ ಜಿಲ್ಲಾ ವೀಕ್ಷಕ ಎನ್.ಸಂಪಂಗಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಆತ್ಮಾನಂದ, ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಮಹಿಳಾ ಸಂಘಟಕದ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಎಪಿಎಂಸಿ ಅಧ್ಯಕ್ಷೆ ಪಲ್ಲವಿ, ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ, ಉಪಾಧ್ಯಕ್ಷೆ ಸುಜಾತಮಣಿ, ಪುಟ್ಟೇಗೌಡ, ಜಬೀವುಲ್ಲಾ, ರಾಮಲಿಂಗಯ್ಯ, ಜಿ.ಸಿ.ಆನಂದ್, ಚಂದ್ರಶೇಖರ್, ಸಿದ್ದರಾಜು, ಇತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News