×
Ad

ಮುಸ್ಲಿಂ ವಕ್ಫ್ ಆಸ್ತಿ ಭ್ರಷ್ಟಾಚಾರ ಮುಕ್ತಿ ಮಹಾಸಭಾ ಅಸ್ತಿತ್ವಕ್ಕೆ: ಅನ್ವರ್ ಮಾಣಿಪ್ಪಾಡಿ

Update: 2018-01-29 23:42 IST

ದಾವಣಗೆರೆ,ಜ.29: ಸುಪ್ರೀಂ ಕೋರ್ಟ್ ಆದೇಶವನ್ನು ಈಗಿನ ಸರ್ಕಾರ ಅನುಷ್ಠಾನಕ್ಕೆ ತರಲು ವಿಫಲವಾದ ಹಿನ್ನೆಲೆಯಲ್ಲಿ ವಕ್ಫ್ ಆಸ್ತಿಗಳ ರಕ್ಷಣೆಗೆ ಮುಸ್ಲಿಂ ವಕ್ಫ್ ಆಸ್ತಿ ಭ್ರಷ್ಟಾಚಾರ ಮುಕ್ತಿ ಮಹಾಸಭಾ ಅಸ್ತಿತ್ವಕ್ಕೆ ತಂದಿದ್ದೇವೆ ಎಂದು ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಅನ್ವರ್ ಮಾಣಿಪ್ಪಾಡಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾನ ಮನಸ್ಕರ ಕೋರಿಕೆ ಮೇರೆಗೆ ಮಹಾಸಭಾ ಅಸ್ತಿತ್ವಕ್ಕೆ ಬಂದಿದೆ. ವಕ್ಫ್ ಆಸ್ತಿ ಸಂರಕ್ಷಣೆಗೆ ಸಂಬಂಧಿಸಿದಂತೆ ಅಸ್ತಿತ್ವಕ್ಕೆ ಬಂದಿರುವ ಮೊದಲ ನೋಂದಾಯಿತ ಸಂಘಟನೆ ಇದು. ರಾಜ್ಯದಲ್ಲಿ ವಕ್ಫ್ ಆಸ್ತಿ ಕಬಳಿಕೆ ಆಗಿರುವ ಬಗ್ಗೆ ಈಗಾಗಲೇ ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ. ಆದರೆ, ಈ ವರದಿ ವಿಧಾನ ಮಂಡಲದ ಅಧಿವೇಶನದಲ್ಲಿ ಮಂಡನೆಯಾಗಿಲ್ಲ ಎಂದರು.

ವಕ್ಫ್ ಆಸ್ತಿ ಒತ್ತುವರಿಗೊಳಿಸಿ ಎಷ್ಟೇ ವರ್ಷವಾಗಿದ್ದರೂ ತೆರವುಗೊಳಿಸಬೇಕೆಂದು 1998ರಲ್ಲಿ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ ಆದೇಶಿಸಿದೆ. ಅಲ್ಲದೆ, 2013ರಲ್ಲಿ ಅಂದಿನ ಬಿಜೆಪಿ ಸರ್ಕಾರವು ವಕ್ಫ್ ಆಸ್ತಿ ಕಬಳಿಕೆಗೆ ಸಂಬಂಧಿಸಿದ ನಮ್ಮ ವರದಿಯನ್ನು ಸಚಿವ ಸಂಪುಟದಲ್ಲಿ ಅಂಗೀಕರಿಸಿ, ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ಹಾಗೂ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಜಿಲ್ಲಾಮಟ್ಟದ ಕಾರ್ಯಪಡೆ ರಚಿಸಿತ್ತು. ಸರ್ಕಾರ ಬದಲಾದ ನಂತರ ವರದಿ ಅಧಿವೇಶನದಲ್ಲಿ ಮಂಡಿಸಲೇ ಇಲ್ಲ. ಈ ಕುರಿತು ಹೈಕೋರ್ಟ್‍ನಲ್ಲಿ ಹೂಡಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಲ್ಲೂ ನಮಗೆ ಜಯ ಸಿಕ್ಕಿದ್ದು, ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆಯ ಪ್ರಕರಣ ವಿಚಾರಣೆ ಹಂತದಲ್ಲಿದೆ ಎಂದರು.

ಈ ನಿಟ್ಟಿನಲ್ಲಿ ಬರುವ ಅಧಿವೇಶನದಲ್ಲಿ ವರದಿ ಮಂಡಿಸಿ, ಸದನದ ಅಂಗೀಕಾರ ಪಡೆಯಬೇಕು. ಇಲ್ಲವಾದರೆ ನಮ್ಮ ಆಸ್ತಿ-ನಮ್ಮ ಹಕ್ಕು ಹಿಂದಿರುಗಿಸಿ, ಇಲ್ಲವೇ ಉಗ್ರ ಹೋರಾಟ ಎದುರಿಸಿ ಎಂಬ ಘೋಷಣೆಯೊಂದಿಗೆ ಉಗ್ರ ಹೋರಾಟ ಕೈಗೊಳ್ಳಲಾಗುವುದು. ಫೆ.15ರಂದು ರಾಜ್ಯದ ಉದ್ದಗಲಕ್ಕೂ ಪ್ರತಿಭಟನೆ ನಡೆಸುವ ಮೂಲಕ ಮುಸಲ್ಮಾನರ ಶಕ್ತಿ ಪ್ರದರ್ಶಿಸಲಾಗುವುದು ಎಂದರು

ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಮಹಾಸಭಾ ಪ್ರಧಾನ ಕಾರ್ಯದರ್ಶಿ ನಯಾಜ್ ಅಹ್ಮದ್, ಮುಖಂಡರಾದ ಟಿಪ್ಪು ಸುಲ್ತಾನ್, ಇಕ್ಬಾಲ್ ಅಹಮದ್, ಅಬು ಸಾಲೇಹ, ಜಹೀರ್, ಹೊನ್ನೂರು ಸಾಬ್, ಅತಾವುಲ್ಲಾ, ಸಾದಿಕ್ ಖಾನ್, ಸಲೀಂ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News