×
Ad

ಕಾಂಗ್ರೆಸ್ ಎಸ್ಸಿ-ಎಸ್ಟಿ, ಅಲ್ಪಸಂಖ್ಯಾತರ ಅಭಿವೃದ್ದಿಗೆ ಯಾವುದೇ ಕ್ರಮ ಕೈಗೊಂಡಿಲ್ಲ: ಯಡಿಯೂರಪ್ಪ

Update: 2018-01-30 19:47 IST

ದಾವಣಗೆರೆ,ಜ.30: ಆರು ದಶಕಗಳ ಕಾಲ ದೇಶ ಆಳಿದ ಕಾಂಗ್ರೆಸ್ ಎಸ್ಸಿ-ಎಸ್ಟಿ, ಅಲ್ಪಸಂಖ್ಯಾತರ ಅಭಿವೃದ್ದಿಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಟೀಕಿಸಿದರು. 

ತಾಲೂಕಿನ ಅಣಜಿ ಗ್ರಾಮದಲ್ಲಿ ಬಿಜೆಪಿ ಎಸ್ಸಿ ಮೋರ್ಚಾದ ಮಾಯಕೊಂಡ ಮೀಸಲು ಕ್ಷೇತ್ರದ ಹರಿಜನ (ಮಾದಿಗ) ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಕಾಂಗ್ರೆಸ್ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಶವಸಂಸ್ಕಾರಕ್ಕೆ ರಾಜಘಾಟ್‍ನಲ್ಲಿ ಜಾಗ ನೀಡದೆ ಅವಮಾನ ಮಾಡಿತ್ತು. ಅಲ್ಲದೆ, ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು 2 ಬಾರಿ ಸೋಲಿಸಿದ್ದು ಕಾಂಗ್ರೆಸ್ ಪಕ್ಷ. ಅದರೆ, ಬಿಜೆಪಿ ಡಾ.ಬಿ.ಆರ್. ಅಂಬೇಡ್ಕರ್ ಬಗ್ಗೆ 2 ದಿವಸಗಳ ಕಾಲ ಲೋಕಸಭೆಯಲ್ಲಿ ಚರ್ಚೆಗೆ ಅವಕಾಶ ಮಾಡಿಕೊಟ್ಟಿತು ಎಂದರು. 

ಸಿಎಂ ಸಿದ್ದರಾಮಯ್ಯ, ದಲಿತರ ಮನೆಯಲ್ಲಿ ಊಟ ಮಾಡಿದಾಗ ಟೀಕಿಸುವ ಮೂಲಕ ಸಂಬಂಧ ಬೆಳೆಸುವ ಬಗ್ಗೆ ಮಾತನಾಡಿ ಕೀಳುಮಟ್ಟದ ರಾಜಕಾರಣ ಮಾಡಿದ್ದಾರೆ. ನಾನು ಸಿಎಂ ಆದ ಸಂದರ್ಭ ಬೆಂಗಳೂರಿನಲ್ಲಿ ಬಾಬು ಜಗಜೀವನ್ ರಾಂ ಅವರ ಭವನ ನಿರ್ಮಾಣಕ್ಕೆ 2 ಕೋಟಿ ಹಣ ಮೀಸಲಿರಿಸಿದ್ದೇನೆ. ಎಲ್ಲ ಜಿಲ್ಲಾ ಮತ್ತು ತಾಲೂಕುಗಳಲ್ಲಿ ಬಾಬು ಜಗಜೀವನರಾಂ ಭವನ ನಿರ್ಮಾಣ ಮಾಡಿದ್ದೇವೆ. ಪರಿಶಿಷ್ಟ ಜಾತಿ ಸಮುದಾಯದ ಜನರಿಗೆ ಗಂಗಾ ಕಲ್ಯಾಣ ಯೋಜನೆಯಲ್ಲಿ ಸೌಲಭ್ಯ ಕಲ್ಪಿಸಿದ್ದೇವೆ. ಕಿತ್ತೂರು ಚೆನ್ನಮ್ಮ, ಮೋರಾರ್ಜಿ ಶಾಲೆಗಳ ಅಭಿವೃದ್ದಿ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಪ್ರೊ.ಲಿಂಗಣ್ಣ ಅವರಿಗೆ ಟಿಕೆಟ್ ನೀಡುವ ಸಂಬಂಧ ಸರ್ವೇ ಮಾಡಲಾಗುತ್ತಿದೆ. ನಂತರ ಪಕ್ಷದ ವರಿಷ್ಠರಾದ ಅಮಿತ್ ಶಾ ಯಾರಿಗೆ ಟಿಕೆಟ್ ನೀಡಬೇಕು ಎಂಬುದನ್ನು ನಿರ್ಧಾರ ಮಾಡಲಿದ್ದಾರೆ. ಟಿಕೆಟ್ ಯಾರಿಗೆ ಕೊಟ್ಟರೂ ಎಲ್ಲರೂ ಬಿಜೆಪಿಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು. 

ಪ್ರೊ. ಲಿಂಗಣ್ಣ ಮಾತನಾಡಿ, ಕಾಂಗ್ರೆಸ್ ನಮ್ಮ ಸಮಾಜವನ್ನು ಕೇವಲ ಓಟ ಬ್ಯಾಂಕ್‍ಗೆ ಸೀಮಿತ ಮಾಡಿ ನಿರ್ಲಕ್ಷ್ಯ ಮಾಡಿದೆ. ಅದರೆ, ಬಿಜೆಪಿ ಆಡಳಿತದ ಅವಧಿಯಲ್ಲಿ ಸಾಕಷ್ಟು ಅಭಿವೃದ್ದಿ ಕೈಗೊಳ್ಳಲಾಗಿದೆ. ಕೇಂದ್ರ ಸರಕಾರದ ಶೇ. 40ರಷ್ಟು ಯೋಜನೆಗಳು ಪ. ಜಾತಿ ಪರವಾಗಿವೆ ಎಂದರು. 

ಹಿರಿಯೂರ ಆದಿಜಾಂಬವ ಪೀಠದ ಷಡಕ್ಷರಿ ಮುನಿಶ್ರೀ, ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ಆಲೂರು ನಿಂಗರಾಜ್, ಮೆಳೆಕಟ್ಟೆ ನಾಗರಾಜ್, ಬಿ.ಪಿ. ಹರೀಶ್, ಯಶವಂತರಾವ್ ಜಾಧವ್, ಅಣಜಿ ಗುಡ್ಡೇಶ್, ನಾಗಣ್ಣ ಹಾಗೂ ಇತರರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News