×
Ad

ಅಪ್ರಾಪ್ತೆಯ ಅತ್ಯಾಚಾರ: ಆರೋಪಿಗೆ ಏಳು ವರ್ಷ ಕಠಿಣ ಶಿಕ್ಷೆ

Update: 2018-01-30 23:51 IST

ಶಿವಮೊಗ್ಗ, ಜ. 30: ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಯುವಕನಿಗೆ 7 ವರ್ಷ ಕಠಿಣ ಶಿಕ್ಷೆ ವಿಧಿಸಿ 1 ನೇ ವಿಶೇಷ ಸತ್ರ ನ್ಯಾಯಾಲಯ ಆದೇಶಿಸಿದೆ. 

ಶಿಕಾರಿಪುರ ತಾಲೂಕಿನ ಚಿಕ್ಕಮಾಗಡಿ ತಾಂಡಾದ ನಿವಾಸಿ ಕುಮಾರನಾಯ್ಕ್ ಶಿಕ್ಷೆಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಕಠಿಣ ಶಿಕ್ಷೆಯ ಜೊತೆಗೆ 5000 ರೂ. ದಂಡ ಕೂಡ ವಿಧಿಸಿ ನ್ಯಾಯಾಧೀಶೆ ಶುಭಾಗೌಡರ ಅವರು ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಸ್.ಕೆ.ಮೂರ್ತಿರಾವ್ ವಾದ ಮಂಡಿಸಿದ್ದರು. 

ಘಟನೆ ಹಿನ್ನೆಲೆ: ಶಿಕ್ಷೆಗೊಳಗಾದ ಕುಮಾರನಾಯ್ಕ್ ಅಪ್ರಾಪ್ತೆಯೋರ್ವಳ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದ. ಈ ವಿಷಯ ಯಾರಿಗೂ ತಿಳಿಸದಂತೆ ಜೀವ ಬೆದರಿಕೆ ಕೂಡ ಹಾಕಿದ್ದ. ಬಾಲಕಿ ಗರ್ಭವತಿಯಾದ ನಂತರ ಮದುವೆಯಾಗುವಂತೆ ಕೋರಿದ್ದು, ಇದನ್ನು ಕೂಡ ನಿರಾಕರಿಸಿದ್ದ. ಈ ಕುರಿತಂತೆ ಬಾಧಿತೆಯು ಕುಮಾರನಾಯ್ಕ್ ವಿರುದ್ದ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. 

ಪೊಲೀಸರು ಕುಮಾರನಾಯ್ಕ್ ವಿರುದ್ದ ಪೋಕ್ಸೋ ಕಾಯ್ದೆ ಹಾಗೂ ಐಪಿಸಿಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದರು. ನಂತರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಆರೋಪಿಯ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News