ಬಣಕಲ್; ಸರಗಳ್ಳರ ಹಾವಳಿ : ಆತಂಕಗೊಂಡ ಗ್ರಾಮಸ್ಥರು

Update: 2018-01-31 11:51 GMT

ಬಣಕಲ್, ಜ.31: ಬಣಕಲ್‍ನಿಂದ ಕೊಟ್ಟಿಗೆಹಾರ ಮಾರ್ಗವಾಗಿ ಚಾರ್ಮಾಡಿ ಘಾಟ್ ಕಡೆಗೆ ಹೋಗುತ್ತಿದ್ದ ಬೈಕ್ ಸವಾರರು ಅಜಾದ್‍ನಗರಕ್ಕೆ ಸಮೀಪ ದಾರಿಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯ ಕುತ್ತಿಗೆಗೆ ಕೈಹಾಕಿ ಸರ ಕಳ್ಳತನ ಮಾಡಲು ಯತ್ನಿಸಿದ ಘಟನೆ ಬಣಕಲ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.

ಕೊಟ್ಟಿಗೆಹಾರ ತರುವೆ ಗ್ರಾಮದ ಆಶಾ ಕಾರ್ಯಕರ್ತೆಯ ಕುತ್ತಿಗೆಯ ಸರವನ್ನು ಎಳೆಯಲು ಬೈಕ್‍ನಲ್ಲಿ ಸಾಗುತ್ತಿದ್ದ ಕಳ್ಳರು ಪ್ರಯತ್ನ ನಡೆಸಿದ್ದು ತಕ್ಷಣ ಮಹಿಳೆಯು ಕೂಗಿ ಕೊಂಡಾಗ ಬೈಕ್ ಸವಾರರು ತಪ್ಪಿಸಿಕೊಂಡು ಚಾರ್ಮಾಡಿ ಮಾರ್ಗವಾಗಿ ಸಾಗಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಬಣಕಲ್ ಪೋಲಿಸ್ ಠಾಣಾಧಿಕಾರಿ ಸತ್ತಿವೇಲು ಕೊಟ್ಟಿಗೆಹಾರದ ಸಿಸಿ ಕ್ಯಾಮೆರಾದ ಜಾಡು ಹಿಡಿದು ತಕ್ಷಣ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.

ಚಾರ್ಮಾಡಿ ಗೇಟ್‍ನಲ್ಲಿ ಕರ್ತವ್ಯ ನಿರತರಾಗಿದ್ದ ಪೊಲೀಸರು ಬೈಕ್‍ನ್ನು ಅಡ್ಡ ಹಾಕಿದಾಗ ಪೊಲೀಸ್ ಪೇದೆಯ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಕಾರ್ಯಪ್ರವೃತ್ತರಾದ ಪೋಲಿಸರು ಹಾಸನ ಮೂಲದ ಸುಮಂತ್‍ನನ್ನು ವಶಕ್ಕೆ ಪಡೆದಿದ್ದಾರೆ. ಮತ್ತೋರ್ವ ಆರೋಪಿ ಸಂಘರ್ಷ ಎಂಬಾತ ತಪ್ಪಿಸಿಸಿಕೊಂಡಿದ್ದಾನೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News