×
Ad

ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಖಂಡನೆ : ಮಡಿಕೇರಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ

Update: 2018-01-31 17:57 IST

ಮಡಿಕೇರಿ,ಜ.31 :ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಬೆಲೆ ಹೆಚ್ಚಳದ ಧೋರಣೆಯನ್ನು ಖಂಡಿಸಿ ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಹಾಗೂ ವಿವಿಧ ಘಟಕಗಳು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದವು. ರಸ್ತೆ ಬದಿಯಲ್ಲೆ ‘ಪಕೋಡ’ ತಯಾರಿಸುವ ಮೂಲಕ ನಿರುದ್ಯೋಗ ನಿವಾರಣೆಯ ಮೋದಿ ಹೇಳಿಕೆಗೆ ಪ್ರತಿಭಟನಾಕಾರರು ತಿರುಗೇಟು ನೀಡಿದರು.

ಕೆಪಿಸಿಸಿ ಕಾರ್ಯದರ್ಶಿ ಹಾಗೂ ಮಡಿಕೇರಿ ಕ್ಷೇತ್ರದ ಉಸ್ತುವಾರಿ ವೆಂಕಪ್ಪಗೌಡ, ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ಕೆ.ಯು.ಅಬ್ದುಲ್ ರಝಾಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಎಂ.ಲೋಕೇಶ್, ಅಪ್ರು ರವೀಂದ್ರ ಅವರುಗಳ ನೇತೃತ್ವದಲ್ಲಿ ಬುಧವಾರ ಬೆಳಗ್ಗೆ ಕಾಂಗ್ರೆಸ್ ಪ್ರಮುಖರು ಮತ್ತು ಕಾರ್ಯಕರ್ತರು ನಗರದ ಎವಿ ಶಾಲೆಯ ಬಳಿಯಿಂದ ಜನರಲ್ ತಿಮ್ಮಯ್ಯ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಜನರಲ್ ತಿಮ್ಮಯ್ಯ ವೃತ್ತದಲ್ಲಿ ಮಾನವ ಸರಪಳಿ ರಚಿಸಿದ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರದ ಬೆಲೆ ಏರಿಕೆ ಕ್ರಮವನ್ನು ತೀವ್ರವಾಗಿ ಖಂಡಿಸಿದರು. ಇದೇ ಸಂದರ್ಭ ರಸ್ತೆ ಬದಿಯಲ್ಲೆ ಕಾಂಗ್ರೆಸ್‍ನ ಘಟಕವಾದ ಐಎನ್‍ಟಿಯುಸಿ ಪ್ರಮುಖ ಪವನ್ ಪೆಮ್ಮಯ್ಯ ಅವರ ನೇತೃತ್ವದ ಕಾರ್ಯಕರ್ತರ ತಂಡ ‘ಪಕೋಡ’ ತಯಾರಿಸುವ ಮೂಲಕ ಇತ್ತೀಚೆಗೆ ಪ್ರಧಾನಿ ಮೋದಿ ಅವರು, ನಿರುದ್ಯೋಗಿಗಳು ಪಕೋಡ ತಯಾರಿಸುವ ಮೂಲಕ ಉದ್ಯೋಗವನ್ನು ಕಂಡುಕೊಳ್ಳಲು ಮುಂದಾಗಬೇಕೆಂದು ನೀಡಿದ ಹೇಳಿಕೆಯನ್ನು ಲೇವಡಿ  ಮಾಡಿದರು. 

ಈ ಸಂದರ್ಭ ಪವನ್ ಮಾತನಾಡಿ ನಿರುದ್ಯೋಗಿಗಳು ರಸ್ತೆ ಬದಿ ಪಕೋಡ ತಯಾರಿಸಿ ಮಾರಾಟಮಾಡುವ ಮೂಲಕ ಪ್ರಧಾನಿಗಳ ಮಾತನ್ನು ಪಾಲಿಸಲು ಮುಂದಾಗಿದ್ದಾರೆ. ಪ್ರಧಾನಿ ಮೋದಿ ಅವರು ಇದನ್ನು ನೋಡಿಕೊಂಡು ಸೂಟ್‍ಬೂಟ್ ಹಾಕಿಕೊಂಡು ವಿದೇಶಿ ಪ್ರವಾಸ ಮಾಡಲಿ ಎಂದು ವ್ಯಂಗ್ಯವಾಡಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಕೆಪಿಸಿಸಿ ಕಾರ್ಯದರ್ಶಿ ಹಾಗೂ ಮಡಿಕೇರಿ ಕ್ಷೇತ್ರದ ಉಸ್ತುವಾರಿ ವೆಂಕಪ್ಪ ಗೌಡ ಮಾತನಾಡಿ, ಯುಪಿಎ ಅಧಿಕಾರದ ಅವಧಿಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲದ ಬೆಲೆ ಬ್ಯಾರೆಲ್‍ಗೆ 120 ಡಾಲರ್ ಇದ್ದಾಗ, ಭಾರತದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 70 ರೂ. ಆಗಿತ್ತು. ಪ್ರಸ್ತುತ ಕಚ್ಛಾ ತೈಲದ ಬೆಲೆ 60 ಡಾಲರ್‍ಗೆ ಕುಸಿದಿದ್ದರು ಕೇಂದ್ರದ ಬಿಜೆಪಿ ಸರ್ಕಾರ ತೈಲ ಬೆಲೆಯನ್ನು ಇಳಿಕೆ ಮಾಡಿಲ್ಲ. ಅಡುಗೆ ಅನಿಲ ಸಿಲಿಂಡರ್ ಬೆಲೆ ಯುಪಿಎ ಅವಧಿಯಲ್ಲಿ 400 ರೂ.ಗಳಿತ್ತಾದರೆ, ಇಂದು 800 ರೂ.ಗಳಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. 

ಒಂದೆಡೆ ಬೆಲೆ ಹೆಚ್ಚಳ, ಮತ್ತೊಂದೆಡೆ ಜಿಎಸ್‍ಟಿ ಹೊರೆ ಜನಸಾಮಾನ್ಯರ ಮೇಲೆ ಬೀಳುತ್ತಿದ್ದು, ಇದೇ ಏನು 'ಅಚ್ಛೇ ದಿನ್' ಎಂದು ಪ್ರಶ್ನಿಸಿದ ವೆಂಕಪ್ಪ ಗೌಡ, 'ಅಚ್ಛೇ ದಿನ್' ದೊರಕಿರುವುದು ‘ಮೋದಿ’ ಅವರಿಗೆ ಮಾತ್ರವೆಂದು ಆರೋಪಿಸಿದರು.

ಸರ್ಕಾರದ ಸಾಧನಾ ಸಮಾವೇಶವನ್ನು ಸರ್ಕಾರದ ಹಣವನ್ನು ಬಳಸಿ ಮಾಡಿರುವ ಬಗ್ಗೆ ಬಿಜೆಪಿ ಟೀಕಿಸುತ್ತಿದೆ. ಅದೇ ಪ್ರಧಾನಿ ಹುದ್ದೆಗೇರಿದ ಬಳಿಕ ನೂರಾರು ದೇಶಗಳಿಗೆ ಭೇಟಿ ನೀಡುತ್ತಿರುವ ಮೋದಿ ಅವರು ಇದಕ್ಕೆ ವೆಚ್ಚಮಾಡುತ್ತಿರುವ ದುಡ್ಡು ಯಾರದೆಂದು ಪ್ರಶ್ನಿಸಿದರು. ಮುಂಬರುವ ಚುನಾವಣೆಯಲ್ಲಿ ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವನ್ನು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

 ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ಕೆ.ಯು.ಅಬ್ದುಲ್ ರಜಾಕ್ ಮಾತನಾಡಿ, ಕೇಂದ್ರ ಸರ್ಕಾರದ ಆರ್ಥಿಕ ದ್ವಿಮುಖ ನೀತಿಯಿಂದ ನಿತ್ಯೋಪಯೋಗಿ ವಸ್ತುಗಳ ಬೆಲೆ ಗಗನ ಮುಖಿಯಾಗಿದೆ. ಪೆಟ್ರೋಲ್ ಡೀಸೆಲ್ ದರ ಹೆಚ್ಚಳವಾಗಿದ್ದು, ಅಡುಗೆ ಅನಿಲ ದರ 400 ರೂ,.ಗಳಿಂದ 800 ರೂ,.ಗಳನ್ನು ಮುಟ್ಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಮಾತನಾಡಿ, ರಾಜ್ಯದಲ್ಲಿ ಸಾವಿರಾರು ರೈತರು ಆತ್ಮಹತ್ಯೆಗೆ ಶರಣಾಗಿದ್ದರು ಕೇಂದ್ರ ಸರ್ಕಾರ ಇದರತ್ತ ಕಿಂಚಿತ್ ಕಾಳಜಿ ವಹಿಸಿ, ರೈತರ ನೆರವಿಗೆ ಮುಂದಾಗಿಲ್ಲವೆಂದು ಟೀಕಿಸಿದರು. ಅಧಿಕಾರಕ್ಕೆ ಬಂದ ಬಳಿಕ ವಾರ್ಷಿಕ ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಮೋದಿ ಹೇಳಿಕೊಂಡಿದ್ದರು. ಪ್ರಸ್ತುತ ವಾರ್ಷಿಕ 10 ಲಕ್ಷ ಉದ್ಯೋಗವು ಸೃಷ್ಟಿಯಾಗುತ್ತಿಲ್ಲವೆಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ನಗರಸಭಾ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ, ಮೂಡ ಅಧ್ಯಕ್ಷ ಎ.ಸಿ. ದೇವಯ್ಯ, ನಗರಸಭಾ ಸದಸ್ಯರಾದ ಜುಲೇಕಾಬಿ, ಪ್ರಕಾಶ್ ಆಚಾರ್ಯ,  ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್, ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನೀರ ಮೈನ, ಯುವ ಕಾಂಗ್ರೆಸ್ ಹನೀಫ್ ಸಂಪಾಜೆ, ಶಾಫಿ ಕೊಟ್ಟಮುಡಿ, ಸುನಿಲ್ ನಂಜಪ್ಪ, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಆರ್.ಪಿ., ನಗರಸಭಾ ನಾಮ ನಿರ್ದೇಶಿತ ಸದಸ್ಯರಾದ ಉದಯ ಕುಮಾರ್, ಎಂ.ಎ. ಉಸ್ಮಾನ್ ಹಾಗೂ ಪ್ರಭು ರೈ, ಅಂಬೆಕಲ್ ನವೀನ್, ಜಗದೀಶ್,  ಫಾರ್ವತಿ(ಫ್ಯಾನ್ಸಿ) , ಸ್ವರ್ಣಲತಾ, ಶಶಿ, ಮಂಜುಳಾ ಮಂಜು, ಉದಯ ಚಂದ್ರಿಕಾ, ಗಿರಿಜಾ, ರೇಣುಕಾ, ಸೌಭಾಗ್ಯ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News