ಹಿಂದೂಗಳಿಗೆ ಬಿಜೆಪಿ ಸುರಕ್ಷಿತವಲ್ಲ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾರ್ಯದರ್ಶಿ ವೆಂಕಪ್ಪ ಗೌಡ ಆರೋಪ
ಮಡಿಕೇರಿ ಜ.31 :ಅಭಿವೃದ್ಧಿಯನ್ನು ಬಿಟ್ಟು ಕ್ಷಣಿಕವಾದ ಧಾರ್ಮಿಕ ಭಾವನೆಗಳನ್ನೇ ತನ್ನ ಅಜೆಂಡ ಮಾಡಿಕೊಂಡಿರುವ ಬಿಜೆಪಿ ಹಿಂದೂಗಳಿಗೆ ಸುರಕ್ಷಿತವಲ್ಲವೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾರ್ಯದರ್ಶಿ ವೆಂಕಪ್ಪ ಗೌಡ ಆರೋಪಿಸಿದ್ದಾರೆ.
ನಗರದಲ್ಲಿ ನಡೆದ ಕೇಂದ್ರ ಸರ್ಕಾರದ ಬೆಲೆ ಹೆಚ್ಚಳ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದುತ್ವದ ಪ್ರಧಾನ ಅಜೆಂಡಾ ಹೊಂದಿರುವ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ತೊಗಾಡಿಯಾ, ಪ್ರಮೋದ್ ಮುತಾಲಿಕ್, ಮಹೇಂದ್ರ ಕುಮಾರ್ ಮತ್ತು ಸೂಲಿಬೆಲೆ ಅವರ ಪರಿಸ್ಥಿತಿ ಏನಾಗಿದೆಯೆಂದು ಪ್ರಶ್ನಿಸಿದರು. ಅದನ್ನು ಗಮನಿಸಿಯಾದರು ಯುವ ಸಮೂಹ ಬಿಜೆಪಿಯ ಬಗ್ಗೆ ಎಚ್ಚರಿಕೆ ವಹಿಸಬೇಕೆಂದು ತಿಳಿಸಿದರು.
ಕರಾವಳಿ ಭಾಗದಲ್ಲಿ ಪ್ರಸ್ತುತ ಬಿಜೆಪಿ ಅಭಿವೃದ್ಧಿಯ ವಿಚಾರಗಳ ಬಗ್ಗೆ ಮಾತನಾಡುತ್ತಿಲ್ಲ. ಬದಲಾಗಿ ಹಿಂದುತ್ವದ ವಿಚಾರವನ್ನೆ ರಾಜಕೀಯ ಮಾಡುತ್ತಿದೆ. ಇಂತಹ ಹಿಂದುತ್ವವನ್ನು ಮುಂದಿರಿಸಿಕೊಂಡು ನಡೆಸುವ ಬಿಜೆಪಿ ಆಟ ಇನ್ನು ಮುಂದೆ ನಡೆಯುವುದಿಲ್ಲವೆಂದು ತೀಕ್ಷ್ಣವಾಗಿ ನುಡಿದು, ಕಾಂಗ್ರೆಸ್ ಪಕ್ಷದಲ್ಲೂ ಹಿಂದುಗಳಿದ್ದಾರೆ ಮತ್ತು ಅವರೂ ಹಬ್ಬಹರಿದಿನಗಳಲ್ಲಿ ದೇವಸ್ಥಾನಕ್ಕೆ ತೆರಳಿ ಸರ್ವರಿಗೂ ಒಳಿತನ್ನು ಉಂಟುಮಾಡುವಂತೆ ಬೇಡಿಕೊಳ್ಳುತ್ತಾರೆ. ಆದರೆ, ಕಾಂಗ್ರೆಸ್ ಅಜೆಂಡಾ ಕೇವಲ ಅಭಿವೃದ್ಧಿ ಎಂದು ಸ್ಪಷ್ಟಪಡಿಸಿದರು.