ಸರಕಾರಿ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಿ : ಸಚಿವ ತನ್ವೀರ್ ಸೇಠ್
ಬೆಂಗಳೂರು, ಜ. 31: ಬಡವ-ಶ್ರೀಮಂತರೆಂಬ ಭೇದವಿಲ್ಲದೆ, ಎಲ್ಲ ವರ್ಗದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಕೊಡಿಸುವ ದೃಷ್ಟಿಯಿಂದ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಖಾಸಗಿ ಸಂಸ್ಥೆಗಳು ಕೈಜೋಡಿಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಮನವಿ ಮಾಡಿದ್ದಾರೆ.
ಬುಧವಾರ ವಿಕಾಸಸೌಧದಲ್ಲಿ ಸರಕಾರಿ ಶಾಲೆಗಳ ಅಭಿವೃದ್ಧಿಪಡಿಸುವ ಬಗ್ಗೆ ಖಾಸಗಿ ಸಂಸ್ಥೆಗಳು ಹಾಗೂ ಕೈಗಾರಿಕೋದ್ಯಮಿಗಳೊಂದಿಗೆ ಚರ್ಚೆ ಕಾರ್ಯಕ್ರಮದಲ್ಲಿ ‘ಶಿಕ್ಷಣ ಕಿರಣ’ ವಿದ್ಯಾರ್ಥಿ ಸಾಧನೆ ದತ್ತಾಂಶ ಸಂಗ್ರಹಿಸುವ ಆನ್‌ಲೈನ್ ಸೇವೆಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಎಲ್ಲ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಕ್ಕಾಗ ಮಾತ್ರ ಭವಿಷ್ಯದ ಉತ್ತಮ ಸಮಾಜ ನಿರ್ಮಾಣ ಹಾಗೂ ಉತ್ತಮ ಮಾನವ ಸಂಪನ್ಮೂಲ ಲಭ್ಯವಾಗಲಿದೆ ಎಂದ ತನ್ವೀರ್ ಸೇಠ್, ಸರಕಾರಿ ಶಾಲೆಗಳನ್ನು ಬಲವರ್ಧನೆಗೊಳಿಸಿ, ಮುಂದಿನ ಪೀಳಿಗೆಯ ನಾಯಕರನ್ನು ಸೃಜಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಖಾಸಗಿ ಸಂಸ್ಥೆಗಳು ‘ಸಿಎಸ್‌ಆರ್’ ಅನುದಾನದಲ್ಲಿ ಶಾಲೆಗಳಿಗೆ ಕುಡಿಯುವ ನೀರು, ಶೌಚಾಲಯ, ಕೊಠಡಿ ನಿರ್ಮಾಣ, ಶಿಕ್ಷಕರ ಕೌಶಲ್ಯ-ಸಾಮರ್ಥ್ಯ ಅಭಿವೃದ್ಧಿ ತರಬೇತಿ, ಗ್ರಂಥಾಲಯ, ಪ್ರಯೋಗಾಲಯ, ಕಂಪ್ಯೂಟರ್ ಲ್ಯಾಬ್, ಸರಕಾರಿ ಶಾಲೆಗಳ ದತ್ತು, ಬಡ ವಿದ್ಯಾರ್ಥಿಗಳ ದತ್ತು ಸೇರಿದಂತೆ ಮೂಲಸೌಲಭ್ಯ ಕಲ್ಪಿಸಲು ಸರಕಾರದೊಂದಿಗೆ ಕೈಜೋಡಿಸಬೇಕೆಂದು ಅವರು ಕೋರಿದರು.
ದೇಶದ ಪ್ರಗತಿ ಶಿಕ್ಷಣದ ಮೂಲಕ ಸಾಧ್ಯ. ಆದುದರಿಂದ ರಾಜ್ಯದಲ್ಲಿನ ಸರಕಾರಿ ಶಾಲೆಗಳ ಸಬಲೀಕರಣಗೊಳಿಸಬೇಕು. ಎಲ್ಲ ವರ್ಗದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕೆಂದ ಅವರು, ಸರಕಾರಿ ಶಾಲೆಗಳಿಗೆ ಸುಣ್ಣ-ಬಣ್ಣ ಮಾಡಿಸುವ ಕಂಪೆನಿಗಳಿಗೆ ತಮ್ಮ ಜಾಹೀರಾತು ಪ್ರಸಾರಕ್ಕೆ ಶಾಲೆಗಳ ಗೋಡೆಗಳನ್ನು ಒದಗಿಸಿಕೊಡಲಾಗುವುದು ಎಂದು ತಿಳಿಸಿದರು.
ಶಿಕ್ಷಣ ಕಿರಣ : ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ವಿವರ ದಾಖಲಿಸುವ ಶಾಲೆಗೆ ಬರುವಿಕೆ, ಶೈಕ್ಷಣಿಕ ಸಾಧನೆ, ಉತ್ತೀರ್ಣ, ವರ್ಗಾವಣೆ ಗುರುತಿಸಲು ತಂತ್ರಾಂಶ ಸಂಗ್ರಹಿಸಿದ್ದು, ರಾಜ್ಯದಲ್ಲಿನ 1 ಕೋಟಿ ಮಕ್ಕಳು ಈ ವ್ಯವಸ್ಥೆಯಲ್ಲಿ ಶಿಕ್ಷಕರು ಮತ್ತು ಶಾಲೆಯ ನಿರ್ವಹಣೆಯನ್ನು ಆನ್‌ಲೈನ್ ಮೂಲಕವೇ ನಿರ್ವಹಿಸಬಹುದು ಎಂದರು.
ರಾಜ್ಯದ ಸರಕಾರಿ, ಖಾಸಗಿ ಮತ್ತು ಅನುದಾನಿತ ಶಾಲೆಗಳೂ ಸೇರಿದಂತೆ 1ಕೊಟಿ ವಿದ್ಯಾರ್ಥಿಗಳ ವಿವರ, 4ಲಕ್ಷ ಶಿಕ್ಷಕರ ವಿವರ ಹಾಗೂ 77 ಸಾವಿರ ಶಾಲೆಗಳ ವಿವರ ಸಂಗ್ರಹಿಸಲಾಗಿದೆ ಎಂದ ಅವರು, 4ರಿಂದ 9ನೆ ತರಗತಿ ಮಕ್ಕಳ ಕಲಿಕಾ ಸಾಧನಾ ಪರೀಕ್ಷೆಯನ್ನು ಕೇಂದ್ರಿಕೃತವಾಗಿ ನಡೆಸಲು ಅಗತ್ಯ ತಂತ್ರಾಂಶ ಸಿದ್ಧಪಡಿಸಿದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್, ಹಿರಿಯ ಅಧಿಕಾರಿಗಳು, ಖಾಸಗಿ ಸಂಸ್ಥೆಗಳ ಮುಖ್ಯಸ್ಥರು ಸೇರಿದಂತೆ ಶಿಕ್ಷಣ ಕ್ಷೇತ್ರದ ತಜ್ಞರು ಪಾಲ್ಗೊಂಡಿದ್ದರು.