ಕುಖ್ಯಾತ ಮನೆಗಳ್ಳರ ಸೆರೆ : ಲಕ್ಷಾಂತರ ರೂ. ಮೌಲ್ಯದ ನಗನಾಣ್ಯ ವಶ
ಶಿವಮೊಗ್ಗ, ಜ. 31: ಶಿವಮೊಗ್ಗದ ತುಂಗಾ ನಗರ ಠಾಣೆ ಪೊಲೀಸರು ಮೂವರು ಕುಖ್ಯಾತ ಮನೆಗಳ್ಳರನ್ನು ಬಂಧಿಸಿ ಲಕ್ಷಾಂತರ ರೂ. ಮೌಲ್ಯದ ನಗನಾಣ್ಯ ವಶಕ್ಕೆ ಪಡೆದ ಘಟನೆ ವರದಿಯಾಗಿದೆ.
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ನಾಗತಿಬೆಳಗಲು ಗ್ರಾಮದ ನಾಗರಾಜ ಯಾನೆ ನಾಗ (50), ಚಿಕ್ಕಮಗಳೂರು ತಾಲೂಕಿನ ಭಕ್ತರಹಳ್ಳಿ ಗ್ರಾಮದ ನಿವಾಸಿ ಬೂದೇಶ (49) ಹಾಗೂ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಸಂತೆರಸಗೂರು ಗ್ರಾಮದ ನಿವಾಸಿ ಫಯಾಜ್ ಅಹಮದ್ (54) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ಇದರಲ್ಲಿ ಆರೋಪಿಗಳಾದ ನಾಗರಾಜ ಹಾಗೂ ಬೂದೇಶನನ್ನು ಇತ್ತೀಚೆಗೆ ಶಿವಮೊಗ್ಗ ನಗರದ ಮಾಚೇನಹಳ್ಳಿಯ ಬಳಿ ಮಹೇಂದ್ರ ಬುಲೆರೊ ವಾಹನ ಸಮೇತ ಪೊಲೀಸರು ಬಂಧಿಸಿದ್ದರು. ಆರೋಪಿಗಳು ವಿಚಾರಣೆಯ ವೇಳೆ ನೀಡಿದ ಮಾಹಿತಿಯ ಅನುಸಾರ ಫಯಾಜ್ ಅಹಮದ್ (54) ನನ್ನು ಬಂಧಿಸಿದ್ದಾರೆ.
ಈತನಿಂದ ವಿವಿಧೆಡೆ ಕಳವು ಮಾಡಲಾಗಿದ್ದ 9.50 ಲಕ್ಷ ರೂ. ಮೌಲ್ಯದ 341 ಗ್ರಾಂ ತೂಕದ ಬಂಗಾರದ ಆಭರಣ, 1.75 ಲಕ್ಷ ರೂ. ಮೌಲ್ಯದ 4335 ಗ್ರಾಂ ಬೆಳ್ಳಿ, 28,500 ನಗದು ಹಾಗೂ ಮಾರುತಿ 800 ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕಳ್ಳರ ತಂಡಕ್ಕೆ ಸೇರಿದ ಶಿವಮೊಗ್ಗದ ಮಲ್ಲಿಗೇನಹಳ್ಳಿ ಗ್ರಾಮದ ನಿವಾಸಿಯಾದ ಮಂಜು ಯಾನೆ ಸ್ಮಾರ್ಟ್ ಮಂಜುನಾಥ್ ಎಂಬಾತ ತಲೆಮರೆಸಿಕೊಂಡಿದ್ದಾನೆ. ಈತನ ಬಂಧನಕ್ಕೆ ಪೊಲೀಸರು ಶೋಧ ಮುಂದುವರಿಸಿದ್ದಾರೆ.
ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಮುತ್ತುರಾಜ್, ಡಿವೈಎಸ್‍ಪಿ ಸುದರ್ಶನ್‍ರವರ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್ ಮಹಾಂತೇಶ್ ಬಿ. ಹೊಳಿ, ಸಬ್ ಇನ್ಸ್‍ಪೆಕ್ಟರ್ ಗಿರೀಶ್ ಮತ್ತವರ ಸಿಬ್ಬಂದಿಗಳಾದ ಇಮ್ರಾನ್, ಕರಿಬಸಪ್ಪ, ಮರ್ದನ್ ಕಿರ್ವಾಡಿ, ಟೀಕಪ್ಪ, ಸಂದೀಪ್, ರಾಜು ನೇತೃತ್ವದ ಪೊಲೀಸ್ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಎಟಿಎಂ ದರೋಡೆ: ಕಳೆದ ಜ. 16 ರಂದು ತಡರಾತ್ರಿ ತುಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸಂತೆಕಡೂರು ಗ್ರಾಮದಲ್ಲಿನ ಕೆನರಾ ಬ್ಯಾಂಕ್ ಎಟಿಎಂನಲ್ಲಿದ್ದ ಕಳವು ಮಾಡಲು ಆರೋಪಿಗಳು ಮುಂದಾಗಿದ್ದರು. ಎಟಿಎಂ ಯಂತ್ರ ಪುಡಿಗೈಯುವ ವೇಳೆ ಶಬ್ದದಿಂದ ಎಚ್ಚೆತ್ತ ಕಟ್ಟಡ ಮಾಲಕರಾದ ವಿವೇಕ ಹಾಗೂ ಮುರುಗೇಶ್ ಎಂಬುವರು ಸ್ಥಳಕ್ಕಾಗಮಿಸಿ ಆರೋಪಿಗಳನ್ನು ಹಿಡಿಯಲೆತ್ನಿಸಿದ್ದರು.ಆದರೆ ಆರೋಪಿಗಳು ರಾಡ್‍ನಿಂದ ವಿವೇಕ್ ಹಾಗೂ ಮುರುಗೇಶ್ ಮೇಲೆ ಹಲ್ಲೆ ನಡೆಸಿ, ಅವರ ಬಳಿಯಿದ್ದ 500 ನಗದು ದೋಚಿ ಪರಾರಿಯಾಗಿದ್ದರು. ಈ ಕುರಿತಂತೆ ಮಾಹಿತಿ ಪಡೆದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ತಂಡದ ಈರ್ವರನ್ನು ಜ. 17 ರಂದು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಹಲವು ಪ್ರಕರಣ: ಆರೋಪಿಗಳು ವಿಚಾರಣೆಯ ವೇಳೆ ತುಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 6, ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 5 ಹಾಗೂ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 1 ಸೇರಿದಂತೆ 12 ಕಳವು ಕೃತ್ಯಗಳಲ್ಲಿ ಭಾಗಿಯಾಗಿದ್ದು ಬೆಳಕಿಗೆ ಬಂದಿದೆ. ಆರೋಪಿಗಳು ಕಳವು ಮಾಡಿದ್ದ ಚಿನ್ನಾಭರಣಗಳನ್ನು ಫಯಾಜ್ ಅಹಮದ್ ಮೂಲಕ ಮಾರಾಟ ಮಾಡಿಸುತ್ತಿದ್ದರು.