×
Ad

ಮೋದಿ ಸರಕಾರದ ಜನವಿರೋಧಿ ನೀತಿ ಖಂಡಿಸಿ ಜೈಲ್ ಭರೋ ಚಳವಳಿ: ಅಣ್ಣಾ ಹಜಾರೆ

Update: 2018-01-31 20:27 IST

ಬೆಂಗಳೂರು, ಜ.31: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಮಾ.23ಕ್ಕೆ ಹೊಸದಿಲ್ಲಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಿದ್ದು, ಈ ವೇಳೆ ನಮ್ಮನ್ನು ಜೈಲಿಗೆ ಹಾಕಿದರೂ ಸಿದ್ಧವಾಗಿರಬೇಕು ಎಂದು ಹಿರಿಯ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹೇಳಿದ್ದಾರೆ.

ಬುಧವಾರ ನಗರದ ಬಸವನಗುಡಿ ನ್ಯಾಶನಲ್ ಕಾಲೇಜು ಮೈದಾನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ, ರೈತರ ಬೃಹತ್ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ಸರಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ ಸಾಲವನ್ನು ಮನ್ನಾ ಮಾಡಬೇಕು. ಅದೇ ರೀತಿ, ‘ರೈತರ ಮೇಲಿರುವ ಜಿಎಸ್ಟಿ ಕಡಿತಗೊಳಿಸಬೇಕು’ ಎಂದು ಒತ್ತಾಯಿಸಿ 190 ಸಂಘಟನೆಗಳ ಸಹಯೋಗದಲ್ಲಿ ಹೊಸದಿಲ್ಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ತಿಳಿಸಿದರು.

ಪ್ರತಿಭಟನೆ ನಡೆಸುವಾಗ ಸರಕಾರ ಸುಮ್ಮನೆ ಇರುವುದಿಲ್ಲ. ಬದಲಾಗಿ ಹೋರಾಟಗಾರರನ್ನು ಜೈಲಿಗೆ ಹಾಕುತ್ತಾರೆ. ಆದರೆ, ಜೈಲಿನಲ್ಲಿಯೇ ಮೂರು ಬಾರಿ ಊಟ ದೊರೆಯಲಿದ್ದು, ನಾವು ನಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಜೈಲಿಗೂ ಹೋಗಲು ಸಿದ್ಧವಾಗಬೇಕಿದೆ. ಅಲ್ಲದೆ, ಜೈಲು ಹೋರಾಟಗಾರರಿಗೆ ಅಲಂಕಾರ ಇದ್ದಂತೆ ಎಂದು ಅಣ್ಣ ಹಜಾರೆ ಹೇಳಿದರು.

ಈ ಹಿಂದೆ ಭ್ರಷ್ಟಾಚಾರದ ವಿರುದ್ಧ ನಡೆದ ಬೃಹತ್ ಪ್ರತಿಭಟನೆ ಪರಿಣಾಮವಾಗಿ ಕಾಂಗ್ರೆಸ್ ಸರಕಾರ ಚುನಾವಣೆಯಲ್ಲಿ ಸೋಲು ಕಂಡಿತು. ಅದೇ ರೀತಿ, ಮೋದಿ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಬೃಹತ್ ಆಂದೋಲನ ರೂಪಿಸಿ, ಆ ಸರಕಾರಕ್ಕೆ ಸೋಲಿನ ರುಚಿ ತೋರಿಸಲಾಗುವುದು ಎಂದು ನುಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಉದ್ಯೋಗಪತಿಗಳ ಸಾಲವನ್ನು ಮನ್ನಾ ಮಾಡಿದೆ. ಆದರೆ, ರೈತರ ಸಾಲವನ್ನು ಮನ್ನಾ ಮಾಡಲು ಏಕೆ ಮುಂದಾಗಿಲ್ಲ ಎಂದು ಪ್ರಶ್ನಿಸಿದ ಅವರು, ರೈತರ ಆತ್ಮಹತ್ಯೆಗಳನ್ನು ಸರಕಾರಗಳು ತಡೆಯಬೇಕು. ಜೊತೆಗೆ ರೈತರಲ್ಲಿ ಆತ್ಮವಿಶ್ವಾಸ ತುಂಬಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ತಿಳಿಸಿದರು.

ವರದಿ ಜಾರಿಗೊಳಿಸಿ: ರೈತರ ಪ್ರಗತಿಗೆ ಪೂರಕವಾಗಿರುವ ಡಾ.ಸ್ವಾಮಿನಾಥನ್ ವರದಿಯನ್ನು ಯಥಾವತ್ತಾಗಿ ಜಾರಿ ಮಾಡಬೇಕು. ಅದೇ ರೀತಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ರಾಜಕೀಯ ಮಾಡುವುದನ್ನು ಬಿಟ್ಟು ರೈತರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ಬೃಹತ್ ಹೋರಾಟ: ಮಹಾರಾಷ್ಟ್ರ ಸಂಸದ ರಾಜುಶೆಟ್ಟಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ 'ಅಚ್ಛೇ ದಿನ್' ರೈತರಿಗೆ ಬಂದಿಲ್ಲ. ಹೀಗಾಗಿ, ಕೇಂದ್ರದ ಆಡಳಿತದ ವಿರುದ್ಧ ಮುಂಬೈನಲ್ಲಿ 5 ಲಕ್ಷಕ್ಕೂ ಹೆಚ್ಚಿನ ರೈತರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಈ ಹಿಂದೆ ರೈತರ ಅನುಕೂಲಕ್ಕಾಗಿ ಖರೀದಿ ಕೇಂದ್ರ ಸ್ಥಾಪನೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮೆಕ್ಕೆಜೋಳ, ಭತ್ತಕ್ಕೆ 3 ಸಾವಿರ, ರಾಗಿಗೆ 4,500, ತೊಗರಿಗೆ 5 ಸಾವಿರ, ಹತ್ತಿಗೆ 10 ಸಾವಿರ ರೂ.ಗಳ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು. ಖಾತೆ ಮತ್ತು ಬಗರ್ ಹುಕುಂ ಅರ್ಜಿದಾರರಿಗೆ ಪರಿಹಾರ ನೀಡಬೇಕು. ಏತ ನೀರಾವರಿ ಮೂಲಕ ಕುಡಿಯುವ ನೀರು, ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಈ ಸಮಾವೇಶ ನಡೆಸಲಾಗುತ್ತಿದೆ ಎಂದರು.

ಕೇಂದ್ರ ಸರಕಾರ ಜಾರಿ ಮಾಡಿರುವ ಫಸಲ್ ಬಿಮಾ ಯೋಜನೆಯಿಂದ ರೈತರಿಗೆ ಯಾವುದೇ ಲಾಭದಾಯಕವಾಗಿಲ್ಲ. ಆದ್ದರಿಂದ, ರೈತರಿಗೆ ಲಾಭದಾಯಕವಾಗುವಂತಹ ವಿಮೆ ಜಾರಿಯಾಗಬೇಕು. ಅಲ್ಲಿಯವರೆಗೆ ಸಾಲ ಪಡೆದ ರೈತರಿಗೆ ವಿಮಾ ಕಂತು ಕಡ್ಡಾಯ ಮಾಡಬಾರದು. ರೈತರ ಸಹಕಾರಿ ಸಾಲವನ್ನು ರಾಜ್ಯ ಸರಕಾರ ಸಂಪೂರ್ಣ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ಸಮಾವೇಶದಲ್ಲಿ ಬಹುಭಾಷಾ ನಟ ಪ್ರಕಾಶ್ ರೈ, ಬೆಂಗಳೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ನಟರಾಜ್ ಹುಳಿಯಾರ್, ಆಹಾರ ತಜ್ಞ ದೇವೇಂದ್ರಶರ್ಮ, ಅಖಿಲ ಭಾರತ ಕಿಸಾನ್ ಮುಕ್ತಿ ಹೋರಾಟ ಸಮಿತಿ ಸಂಚಾಲಕ ವಿ.ಎಂ.ಸಿಂಗ್, ಹಿಮಾಚಲ ಸೇಬು ಬೆಳೆಗಾರರ ಸಂಘದ ಅಧ್ಯಕ್ಷ ಹರೀಶ್‌ಚೌಹಾಣ್, ರಾಷ್ಟ್ರೀಯ ರೈತ ಮುಖಂಡರಾದ ಶ್ರೀಧರ್, ನಲ್ಲಗೌಂಡರ್, ಕೆ.ಎಂ.ರಾಮಗೌಂಡರ್, ಭಾರತಿ ಬ್ರಹ್ಮಕುಮಾರಿ ಸೇರಿ ಪ್ರಮುಖರಿದ್ದರು.

ರೈತರಿಗೆ ಪಿಂಚಣಿ
60 ವರ್ಷ ಮೇಲ್ಪಟ್ಟ ರೈತರಿಗೆ ಪ್ರತಿ ತಿಂಗಳು 5 ಸಾವಿರ ರೂಪಾಯಿ ಪಿಂಚಣಿ ಸೌಲಭ್ಯ ಒದಗಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಮುಂದಾಗುವಂತೆ ಒತ್ತಾಯಿಸಿ ಹೋರಾಟ ಆರಂಭಿಸಲಾಗುವುದು. ನಾನು ಇದುವರೆಗೂ ಮದುವೆಯಾಗಿಲ್ಲ. ದೇಶವೇ ನನಗೆ ಕುಟುಂಬ. ಎಲ್ಲರ ಹಕ್ಕುಳ ಹೋರಾಟಕ್ಕಾಗಿ ಸದಾ ಸಿದ್ಧ.
-ಅಣ್ಣಾ ಹಜಾರೆ, ಸಾಮಾಜಿಕ ಹೋರಾಟಗಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News