ಜ್ಯೋತಿಷಿಗಳಿಂದ ಭಯದ ವಾತಾವರಣ ನಿರ್ಮಾಣ: ಸಿ.ಎಸ್.ದ್ವಾರಕಾನಾಥ್
ಬೆಂಗಳೂರು, ಜ.31: ರಾಜ್ಯದಲ್ಲಿ ದೃಶ್ಯ ಮಾಧ್ಯಮಗಳು ತಮ್ಮ ಟಿಆರ್‌ಪಿಗಾಗಿ ಸುಳ್ಳುಗಳನ್ನು ಪ್ರಸಾರ ಮಾಡುತ್ತಿದ್ದರೆ, ಜ್ಯೋತಿಷಿಗಳು ಸುಳ್ಳುಗಳನ್ನು ಬಂಡವಾಳ ಮಾಡಿಕೊಂಡು ಜನರಲ್ಲಿ ಭಯದ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕಾನಾಥ್ ಹೇಳಿದ್ದಾರೆ.
ಪ್ರಗತಿಪರರ ವೇದಿಕೆ ವತಿಯಿಂದ ನಗರದ ಪುರಭವನದ ಎದುರು ಆಯೋಜಿಸಿದ್ದ ‘ನಮ್ಮ ನಡಿಗೆ ವಿಜ್ಞಾನದ ಕಡೆಗೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಾಮಾನ್ಯ ಜನರ ಮೇಲೆ ನಿರಂತರವಾಗಿ ಮೂಢನಂಬಿಕೆ, ಅಂದಶ್ರದ್ಧೆ ಹೇರಿಕೆ ಮಾಡುವ ಮೂಲಕ ಸತತವಾಗಿ ವಂಚನೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ.ಪ್ರಕಾಶ್ ಮಾತನಾಡಿ, ಗ್ರಹಣ ಬಂದಾಗ ಹೀಗೆ ಇರಬೇಕು ಎಂದು ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿದೆ. ನೀವು ಈಗ ಯಾಕೆ ವಿರೋಧ ಮಾಡುತ್ತಿದ್ದೀರ ಎಂಬ ಪ್ರಶ್ನೆಗಳು ಎದುರಾಗುತ್ತವೆ. ಆದರೆ, ಪುರಾತನ ಕಾಲದಿಂದಲೂ ಎಲ್ಲವೂ ವಿಜ್ಞಾನ ಅಥವಾ ಅಜ್ಞಾನವಾಗಿರಲಿಲ್ಲ. ಪುರಾತನ ಕಾಲದಲ್ಲಿನ ನಂಬಿಕೆಗಳೇ ಇಂದು ಅಜ್ಞಾನವಾಗಿ ಪರಿವರ್ತನೆಗೊಂಡಿದೆ ಎಂದರು.
ಇಂದಿನ ಜನರ ನಡುವೆ ಪ್ರಕೃತಿ ಹಾಗೂ ಮನುಷ್ಯರ ಹುಟ್ಟಿಗೆ ಸಂಬಂಧಿಸಿದಂತೆ ಅರಿವು ಮೂಡಿಸಬೇಕಾದ ಅಗತ್ಯವಿದೆ. ಇಂದಿಗೂ ನಮ್ಮ ಜನರ ನಡುವಿನ ಪ್ರಕೃತಿ ಹೀಗೆ ಸೃಷ್ಟಿಯಾಯಿತು ಎಂಬ ಪ್ರಶ್ನೆಗಳಿದ್ದು, ಅದಕ್ಕೆ ಉತ್ತರ ಕಂಡುಕೊಳ್ಳಬೇಕು ಎಂದ ಅವರು, ಭೌತವಾದ ಹಾಗೂ ಅಜ್ಞಾನದ ನಡುವೆ ನಿರಂತರವಾದ ಸಂಘರ್ಷ ನಡೆಯುತ್ತಿದೆ. ಜ್ಞಾನ, ವಿಜ್ಞಾನ, ಭೌತವಾದದ ಮೇಲೆ ಅಜ್ಞಾನ ಸತತವಾಗಿ ಹಿಡಿತ ಸಾಧಿಸಿಕೊಂಡು ಬರುತ್ತಿದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಟಿವಿಗಳಲ್ಲಿ ಜ್ಯೋತಿಷಿಗಳು ಹಾಗೂ ಪುರೋಹಿತರು ನಡೆಸಿಕೊಡುತ್ತಿರುವ ಕಾರ್ಯಕ್ರಮಗಳು ಜನರಲ್ಲಿ ಭಯ, ಭೀತಿ ಹುಟ್ಟಿಸುತ್ತಿವೆ. ಇಂತಹ ಸಂದರ್ಭದಲ್ಲಿ ವಿಜ್ಞಾನ ಅಂದರೆ ಜ್ಞಾನವನ್ನು ಎಲ್ಲರ ನಡುವೆ ಪಸರಿಸಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯೋನ್ಮುಖರಾಗಬೇಕು. ರಾಜ್ಯ, ದೇಶದಿಂದ ಮೂಢನಂಬಿಕೆ, ಅಜ್ಞಾನವನ್ನು ದೂರ ಮಾಡಬೇಕಿದೆ ಎಂದು ಅವರು ನುಡಿದರು.
ಮಾಜಿ ಸಚಿವೆ ಬಿಟಿ ಲಲಿತಾನಾಯಕ್ ಮಾತನಾಡಿ, ನಮ್ಮ ಸಮಾಜದಲ್ಲಿ ಹುಣ್ಣಿಮೆ, ಅಮಾವಾಸ್ಯೆ ಎಲ್ಲವೂ ಪ್ರಕೃತಿದತ್ತವಾಗಿ ಶತಮಾನಗಳಿಂದ ನಡೆದುಕೊಂಡು ಬರುತ್ತಿದೆ. ಆದರೆ, ಅಂಧಕಾರದಲ್ಲಿ ಮುಳುಗಿ ಹೋಗಿರುವ ಜ್ಯೋತಿಷಿಗಳು ಜನರಿಗೆ ಸುಳ್ಳುಗಳನ್ನು ತಲುಪಿಸುತ್ತಿದ್ದಾರೆ ಎಂದು ದೂರಿದರು.
ಗ್ರಹಣ ಬಂದಿದೆ ಜನರು ಊಟ ಮಾಡಬಾರದು, ದಕ್ಷಿಣೆ, ಕಾಣಿಕೆ ಕೊಡಬೇಕು ಎಂದು ಮೂಢರು ನಂಬಿಸಿದ್ದಾರೆ. ಆದರೆ, ಇದೆಲ್ಲ ಶುದ್ಧ ಸುಳ್ಳಾಗಿದ್ದು, ಜನ ನಂಬಬಾರದು. ಸಮಾಜದಲ್ಲಿ ಎಲ್ಲರೂ ಒಂದೊಂದು ದುಡಿಮೆ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ಅದೇ ರೀತಿಯಲ್ಲಿ ಜ್ಯೋತಿಷಿಗಳು ಜೀವನ ನಿರ್ವಹಣೆಗಾಗಿ ಸುಳ್ಳು ಹೇಳುವುದನ್ನು ದುಡಿಮೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಸಾಮಾಜಿಕ ಕಾರ್ಯಕರ್ತ ನರಸಿಂಹಮೂರ್ತಿ ಮಾತನಾಡಿ, ನಾಸಾ ಸೇರಿದಂತೆ ಹಲವು ವಿಜ್ಞಾನಿಗಳು ಇದೊಂದು ಕೂಲ್‌ಮೂನ್, ಎಲ್ಲರೂ ನೋಡಬಹುದು ಎಂದು ವರದಿ ಮಾಡಿದೆ. ಆದರೆ, ಕೆಲ ಜ್ಯೋತಿಷಿಗಳು ಅದನ್ನು ದಿಕ್ಕು ತಪ್ಪಿಸಿ ಹೆದರಿಸಿದ್ದಾರೆ. ಬಂಡವಾಳ ಮಾಡಿಕೊಂಡು ಆ ಮೂಲಕ ವ್ಯಾಪಾರ ಮಾಡುತ್ತಿದ್ದಾರೆ ಎಂದ ಅವರು, ಸುಳ್ಳುಗಳನ್ನು ಹೇಳುವವರನ್ನು ಕೂಡಲೇ ಬಂಧಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಹಣ್ಣು, ಹಂಪಲು, ಸಮೋಸ, ಪಕೋಡ, ವಡೆ, ಚುರುಮುರಿ ಹಾಗೂ ಇನ್ನಿತರೆ ಆಹಾರ ಪದಾರ್ಥಗಳನ್ನು ಸೇವನೆ ಮಾಡುವ ಮೂಲಕ ಜ್ಯೋತಿಷಿಗಳು ಹೇಳಿದ್ದು ಸುಳ್ಳು ಎಂದು ಸಾಬೀತುಪಡಿಸಿದರು. ಪ್ರತಿಭಟನೆಯಲ್ಲಿ ಅರಸು ಸಂಶೋಧನಾ ಕೇಂದ್ರದ ನಿರ್ದೇಶಕ ಎನ್.ವಿ.ನರಸಿಂಹಯ್ಯ, ದಲಿತ ಮುಖಂಡ ಮಾವಳ್ಳಿ ಶಂಕರ್, ಬಿ.ಗೋಪಾಲ್, ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ.ಕೃಷ್ಣ, ರೈತ ಮುಖಂಡ ವೀರಸಂಗಯ್ಯ, ಸಮಾಜವಾದಿ ಪಕ್ಷದ ಅಧ್ಯಕ್ಷ ರಾಬಿನ್ ಮ್ಯಾಥ್ಯೂ ಸೇರಿದಂತೆ ಹಲವರು ಭಾಗವಹಿಸಿದ್ದರು.