ಜಿಲ್ಲೆಯ ರೈತರಿಂದ ಕಡಲೆ ಖರೀದಿಸಲು ಖರೀದಿ ಕೇಂದ್ರ ತೆರೆಯಲಾಗುವುದು : ಜಿಲ್ಲಾಧಿಕಾರಿ ಡಿ.ಎಸ್. ರಮೇಶ್

Update: 2018-01-31 17:55 GMT

ದಾವಣಗೆರೆ,ಜ.31: 2017-18ನೇ ಸಾಲಿನಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಕಡಲೆಕಾಳು ಉತ್ಪನ್ನ ರೈತರಿಂದ ಖರೀದಿಸಲು ಜಗಳೂರು ಮತ್ತು ಹರಪನಹಳ್ಳಿಯಲ್ಲಿ ಜ. 31ರಿಂದಲೇ ಖರೀದಿ ಕೇಂದ್ರ ತೆರೆದು, ಖರೀದಿ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಎಫ್‍ಎಕ್ಯೂ ಗುಣಮಟ್ಟದ ಕಡಲೇಕಾಳು ಪ್ರತಿ ಕ್ವಿಂಟಾಲ್‍ಗೆ ರೂ. 4250 ಮತ್ತು ಪ್ರೋತ್ಸಾಹಧನ 150 ಸೇರಿದಂತೆ ಒಟ್ಟು ರು. 4400 ಕನಿಷ್ಟ ಬೆಂಬಲ ಬೆಲೆ ಘೋಷಿಸಿದ್ದು, ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ(ಮಾರ್ಕ್‍ಫೆಡ್)ಇವರನ್ನು ಖರೀದಿ ಏಜೆನ್ಸಿಯಾಗಿ ನೇಮಕ ಮಾಡಲಾಗಿದೆ. ಬೆಂಬಲ ಬೆಲೆ ಮಾರ್ಗಸೂಚಿಗಳನ್ವಯ ಜಿಲ್ಲೆಯ ರೈತರಿಂದ ಕಡಲೆ ಖರೀದಿಸಲು ಹರಪನಹಳ್ಳಿ ಮತ್ತು ಜಗಳೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣಗಳಲ್ಲಿ ಖರೀದಿ ಕೇಂದ್ರ ತೆರೆಯಲಾಗುವುದು ಎಂದರು.

ಕೃಷಿ ಜಂಟಿ ನಿರ್ದೇಶಕ ಸದಾಶಿವ ಮಾತನಾಡಿ, 2017-18ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ದಾವಣಗೆರೆ ಜಿಲ್ಲೆಯ ಜಗಳೂರು ಮತ್ತು ಹರಪನಹಳ್ಳಿ ತಾಲೂಕುಗಳಲ್ಲಿ ಕಡಲೆಕಾಳು ಹೆಚ್ಚಿಗೆ ಬಿತ್ತನೆಯಾಗಿದ್ದು ಅಧಿಕ ಇಳುವರಿ ನಿರೀಕ್ಷಿಸಲಾಗುತ್ತಿದೆ. ಕನಿಷ್ಟ ಬೆಂಬಲ ಬೆಲೆ ಯೋಜನೆ ಅನುಷ್ಟಾನಗೊಳಿಸಿದಲ್ಲಿ ರೈತರಿಗೆ ಅನುಕೂಲವಾಗುತ್ತದೆ.

ದಾವಣಗೆರೆ ತಾಲೂಕಿನಲ್ಲಿ ಸುಮಾರು 60 ಹೆಕ್ಟೇರು ಪ್ರದೇಶದಲ್ಲಿ 480 ಕ್ವಿಂ, ಹರಿಹರ 30 ಹೆ. ಪ್ರದೇಶದಲ್ಲಿ 240 ಕ್ವಿಂ, ಹೊನ್ನಾಳಿಯಲ್ಲಿ 308 ಹೆ. ನಲ್ಲಿ 2464 ಕ್ವಿಂ, ಚನ್ನಗಿರಿಯಲ್ಲಿ 251 ಹೆ.ಪ್ರದೇಶದಲ್ಲಿ 2008, ಹರಪನಹಳ್ಳಿಯಲ್ಲಿ 1075 ಹೆ.ಪ್ರದೇಶದಲ್ಲಿ 8600 ಮತ್ತು ಜಗಳೂರು ತಾಲೂಕಿನಲ್ಲಿ 3500 ಹೆ.ಪ್ರದೇಶದಲ್ಲಿ 28000 ಕ್ವಿಂಟಾಲ್ ಸೇರಿದಂತೆ ಒಟ್ಟು 5224 ಹೆ.ಪ್ರದೇಶದಲ್ಲಿ 41792 ಇಳುವರಿ ನಿರೀಕ್ಷಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಗಳೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಮಾತನಾಡಿ, ಈ ಬಾರಿ ಕಡಲೆಕಾಳನ್ನು ಹೆಚ್ಚಾಗಿ ಬೆಳೆದಿದ್ದು, ಖರೀದಿದಾರರು ಇಲ್ಲದಿರುವುದರಿಂದ ತಾವು ಬೆಳೆದ ಕಡಲೆಯನ್ನು ಕೊಟ್ಟೂರು, ಚಿತ್ರದುರ್ಗ, ದಾವಣಗೆರೆ ಮಾರುಕಟ್ಟೆಗಳಿಗೆ ಕೊಂಡೊಯ್ಯುತ್ತಿದ್ದಾರೆ. ಅಲ್ಲಿಯೂ ಅತಿ ಕಡಿಮೆ ದರ ಹೇಳುತ್ತಿರುವುದರಿಂದ ಮಾರಾಟ ಮಾಡದೇ ವಾಪಾಸ್ಸಾಗುತ್ತಿದ್ದು, ರೈತರು ತೀವ್ರ ಸಂಕಷ್ಟದಲ್ಲಿರುವುದರಿಂದ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರ ಸ್ಥಾಪಿಸಬೇಕೆಂದು ಮನವಿ ಮಾಡಿದರು. 

ಸಭೆಯಲ್ಲಿ ಎಪಿಎಂಸಿ ಸಹಾಯಕ ನಿರ್ದೇಶಕಿ ಎಂ ಮಂಜುಳಾದೇವಿ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಶಾಖಾ ವ್ಯವಸ್ಥಾಪಕ ಮೂರುಕಣ್ಣಯ್ಯ, ಹರಪನಹಳ್ಳಿ ಮತ್ತು ಜಗಳೂರು ಎಪಿಎಂಸಿ ಕಾರ್ಯದರ್ಶಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News