×
Ad

ಅಂಬೇಡ್ಕರ್ ರಚಿಸಿದ ಸಂವಿಧಾನ ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ: ಪಿ.ಎಂ.ನರೇಂದ್ರ ಸ್ವಾಮಿ

Update: 2018-02-01 22:20 IST

ಮೈಸೂರು,ಫೆ.1: ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ರಚಿಸಿದ ಸಂವಿಧಾನ ಭದ್ರವಾಗಿ ನಿಂತಿದ್ದು, ಅದರಲ್ಲಿರುವ ತತ್ವಗಳು ಭಾರತದ ಬೇರಾಗಿದೆ. ಸಂವಿಧಾನವನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ ಎಂದು ಮಂಡ್ಯ ಜಿಲ್ಲೆ ಮಳವಳ್ಳಿ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರ ಸ್ವಾಮಿ ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಮೈಸೂರು ವಿವಿ ಸಾರ್ವಜನಿಕ ಆಡಳಿತ ಅಧ್ಯಯನ ವಿಭಾಗ ವತಿಯಿಂದ ಗುರುವಾರ ಆಯೋಜಿಸಲಾಗಿದ್ದ ಮಾಜಿ ಸಚಿವ ದಿ.ಎಂ.ಮಲ್ಲಿಕಾರ್ಜುನ ಸ್ವಾಮಿ ಇವರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 

ಸಂವಿಧಾನ ಅಂಬೇಡ್ಕರ್ ಅವರ ಹುಟ್ಟಿನಿಂದ ಸಾವಿನವರೆಗಿನ ಸಾಧನೆ. ಯುಗಯುಗಗಳು ಕಳೆದರೂ ವಿಶ್ವಕ್ಕೆ ಒಂದು ಆಸ್ತಿ. ಪ್ರಬುದ್ಧ ಭಾರತ ನಿರ್ಮಾಣದ ಕನಸು ಕಂಡವರು. ಅವರಿಗೆ ಇದ್ದ ಅವಕಾಶಗಳಿಂದಲೇ ಮೇರು ಪರ್ವತವಾಗಿ ಹೊರಹೊಮ್ಮಿದರು. ಅವರು ಪ್ರತಿ ಚರ್ಚೆಯಲ್ಲಿಯೂ ಕಾಣಿಸುತ್ತಾರೆ. ಬ್ರಿಟಿಷರು ಆಡಳಿತ ನಡೆಸಿದ ಸಂದರ್ಭ ಅವರಿಗೆ ಸಿಕ್ಕ ಅವಕಾಶ ಯಾವುದೇ ಶಿಪಾರಸ್ಸಿನದಲ್ಲ. ಬದಲಾಗಿ ವಿದ್ವತ್ತಿನದ್ದು ಎಂದರು. 

ಅವರ ಜ್ಞಾನವೇ ಅವರಿಗೆ ಶಿಫಾರಸ್ಸಾಯಿತು. ಅವರು ಜ್ಞಾನದ ಭಂಡಾರವಾಗಿದ್ದರು. ಯಾರ ಮುಂದೆ ಬೇಕಾದರೂ ನಿರರ್ಗಳವಾಗಿ ಚರ್ಚೆಗೆ ನಿಲ್ಲುವ ತಾಕತ್ತು ಅವರಿಗಿತ್ತು. ಮೀಸಲಾತಿ ವಿಷಯ ಬಂದರೆ ಎಷ್ಟೋ ಜನ ಅಸಹ್ಯ ಪಡುತ್ತಾರೆ. ನಾನು ಕೂಡ ಮೀಸಲಾತಿ ಕ್ಷೇತ್ರದಿಂದ ಬಂದವನೇ. ಮೀಸಲಾತಿ ಕ್ಷೇತ್ರ ಇಲ್ಲ ಎಂದಿದ್ದರೆ ಅವಕಾಶವೇ ಸಿಗುತ್ತಿರಲಿಲ್ಲ ಎಂದರು. ಈ ದೇಶದ ಜನ ಹುಲಿಗಳಾಗಬೇಕು ಎಂದು ಬಯಸಿದರು. ಆದರೆ ಇಂದು ಇಲಿಗಳಾಗುತ್ತಿದ್ದಾರೆ. ಕೆಲವರು ಸಂವಿಧಾನವನ್ನೇ ಪ್ರಶ್ನೆ ಮಾಡುತ್ತಾರೆ. ಅದರ ಯೋಗ್ಯತೆಯೇನು ಎಂಬುದೇ ಅವರಿಗೆ ಗೊತ್ತಿಲ್ಲ. ಸಂವಿಧಾನವನ್ನೇ ಪ್ರಶ್ನಿಸುವುದನ್ನು ವಿದ್ಯಾವಂತ ಮನಸುಗಳು ಚರ್ಚೆಯಲ್ಲಿ ತಿರಸ್ಕರಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಸ್ವಾಮಿ ಅವರ ಪುತ್ರ ಡಾ.ಶೇಖರ್ ಮಲ್ಲಿಕಾರ್ಜುನ ಸ್ವಾಮಿ,ಮಲ್ಲಿಕಾರ್ಜುನ ಅವರ ಧರ್ಮಪತ್ನಿ, ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News