ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಕಾಣುವ ಸಂಕಲ್ಪ ಮಾಡಿದರೆ ಸಮಸ್ಯೆ ದೂರವಾಗುತ್ತದೆ: ಕೆ.ಸಿ.ರತನ್
ಮೂಡಿಗೆರೆ, ಫೆ.1: ಹಾಸ್ಟೆಲ್‍ಗಳು ಮಕ್ಕಳಿಗಾಗಿ ಮಾಡಿರುವ ನಿರಾಶ್ರಿತ ತಾಣವಲ್ಲ. ಅಲ್ಲಿ ಮಕ್ಕಳಿಗೆ ಯಾವ ಕೊರತೆಯೂ ಬಾರದಂತೆ ಮೇಲ್ವಿಚಾರಕರು ನೋಡಿಕೊಳ್ಳಬೇಕು ಎಂದು ತಾಪಂ ಅಧ್ಯಕ್ಷ ಕೆ.ಸಿ.ರತನ್ ಹೇಳಿದರು.
ಅವರು ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ವಸತಿ ಶಾಲೆಯ ಮೇಲ್ವಿಚಾರಕರು ಹಾಗೂ ಅಡುಗೆ ಸಿಬ್ಬಂದಿಗಳಿಗೆ ಗುರುವಾರ ಏರ್ಪಡಿಸಿದ್ದ ಪ್ರಶಿಕ್ಷಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ತಾನು ಈಗಾಗಲೇ 60 ಕ್ಕೂ ಅಧಿಕ ಬಾರಿ ತಾಲೂಕಿನ ಎಲ್ಲಾ ಹಾಸ್ಟೆಲ್‍ಗಳಿಗೆ ಭೇಟಿ ನೀಡಿದ್ದೇನೆ.
ಬಿದರಹಳ್ಳಿ ಮುರಾರ್ಜಿ ವಸತಿ ಶಾಲೆ, ಸಂಸೆಯಲ್ಲಿರುವ ವಸತಿ ಶಾಲೆಯಲ್ಲಿ ಮೇಲ್ವಿಚಾರಕರು ಹಾಸ್ಟೆಲ್‍ನಲ್ಲಿರುವ ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಿರುವುದರಿಂದ ಸಮಸ್ಯೆ ಕಂಡು ಬರುತ್ತಿಲ್ಲ. ಎಲ್ಲಾ ಹಾಸ್ಟೆಲ್‍ಗಳಿಗೆ ಸರಕಾರದಿಂದ ಒಂದೇ ರೀತಿಯ ಅನುದಾನ ಬರುತ್ತಿದ್ದರೂ ಮಕ್ಕಳಿಗೆ ಮೂಲ ಸೌಕರ್ಯ ಒದಗಿಸುವಲ್ಲಿ ವಿಫಲವಾಗಿರುವುದು ದುರಂತ. ಎಲ್ಲಾ ಹಾಸ್ಟೆಲ್‍ಗಳ ಮೇಲ್ವಿಚಾರಕರು ಇಂದಿನಿಂದಲೇ ಹಾಸ್ಟೆಲ್‍ನಲ್ಲಿರುವ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಕಾಣುತ್ತೇವೆಂದು ಸಂಕಲ್ಪ ಮಾಡಿದಾಗ ಮಾತ್ರ ಸಮಸ್ಯೆ ತಾನಾಗಿಯೆ ದೂರವಾಗುತ್ತದೆ ಎಂದು ಹೇಳಿದರು.
ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ರವೀಂದ್ರ ಬೆಳವಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಚಾರ, ವಿಚಾರ, ಸಂಸ್ಕೃತಿ, ಸಂಸ್ಕಾರ ತುಂಬಿದ ಸರ್ವ ಶ್ರೇಷ್ಠವಾದ ಭಾರತ ದೇಶದ ಈ ಭೂಮಿಯಲ್ಲಿ ಹಾಸ್ಟೆಲ್‍ಗಳಲ್ಲಿ ಮಕ್ಕಳಿಗೆ ಕೇವಲ ಮೂಲ ಸೌಕರ್ಯ ಒದಗಿಸುವುದು ಮಾತ್ರವಲ್ಲ, ಸಂಸ್ಕಾರ ಕಲಿಸಿಕೊಡಬೇಕು. ಪ್ರಪಂಚದಲ್ಲಿ ಅತೀ ಹೆಚ್ಚು ಎಂಜಿನಿಯರ್, ಡಾಕ್ಟರ್ ಇರುವುದು ನಮ್ಮ ಭಾರತ ದೇಶದಲ್ಲಿ. ಹಾಸ್ಟಲ್‍ನಲ್ಲಿರುವ ಅನೇಕ ವಿದ್ಯಾರ್ಥಿಗಳಲ್ಲಿ ತನ್ನದೇ ಆದ ಪ್ರತಿಭೆಗಳಿರುತ್ತದೆ. ಅದನ್ನು ಗುರುತಿಸಿ ಬೆಂಬಲಿಸಿದರೆ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡುವ ಅವಕಾಶ ವಿದ್ಯಾರ್ಥಿಗಳಿಗೆ ಸಿಗುತ್ತದೆ. ಹಾಗಾಗಿ ಮೇಲ್ವಿಚಾರಕರು ಸೇವಾ ಮನೋಭಾವನೆಯಿಂದ ಕರ್ತವ್ಯ ನಿರ್ವಹಿಸಬೇಕೆಂದು ಸಲಹೆ ನೀಡಿದರು.
ಜಿಪಂ ಸದಸ್ಯರಾದ ಶೃಂಗೇರಿ ಶಿವಣ್ಣ, ಶಾಮಣ್ಣ, ಅಮಿತಾ ಮುತ್ತಪ್ಪ ಮಾತನಾಡಿದರು. ಸಮಾಜ ಕಲ್ಯಾಣ ಉಪ ನಿರ್ದೇಶಕ ಬಿ.ಮಲ್ಲಿಕಾರ್ಜುನ, ಪರಿಶಿಷ್ಟ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಅಟ್ಟಪ್ಪ, ಸಮಾಜ ಕಲ್ಯಾಣಾಧಿಕಾರಿ ಧನಂಜಯ, ಬಿಸಿಎಂ ವಿಸ್ತರಣಾಧಿಕಾರಿ ರಾಜೇಶ್, ವಿವಿಧ ವಸತಿ ಶಾಲೆಯ ಪ್ರಾಂಶುಪಾಲರಾದ ಲತಾ, ನಾಗರಾಜು, ಪಿ.ಸತೀಶ್ ಉಪಸ್ಥಿತರಿದ್ದರು.