ಭಾಷೆ ಬೇಡ ಎನ್ನುವುದು,ತಾಯಿ ಬೇಡ ಎನ್ನುವಂತಿದೆ: ಪ್ರೊ.ಜಿ.ಕೆ.ಗೋವಿಂದರಾವ್

Update: 2018-02-02 15:55 GMT

ತುಮಕೂರು,ಫೆ.02: ಕನ್ನಡ ಭಾಷೆಯ ವ್ಯಾಸಂಗವನ್ನು ಬೇಡ ಎನ್ನುವುದು ತಾಯಿಯನ್ನು ಬೇಡವೆಂದು ಹೇಳಿದಂತೆ ಎಂದು ಚಿಂತಕ ಪ್ರೊ.ಜಿ.ಕೆ.ಗೋವಿಂದರಾವ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಗಾಜಿನಮನೆಯಲ್ಲಿ ನಡೆದ 13ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ತಾಯಿಯ ಹಾಲು, ತಾಯಿ ಭಾಷೆ ಎರಡು ಒಂದೇ ಆಗಿದ್ದು, ತಾಯಿ ಭಾಷೆಯನ್ನು ಬೇಡ ಎನ್ನುವವರು ತಾಯಿಯ ಹಾಲನ್ನು ಬೇಡ ಎನ್ನುತ್ತಾರೆ. ಇಂಗ್ಲೀಷ್ ಭಾಷೆಯ ವ್ಯಾಮೋಹಕ್ಕೆ ಸಿಲುಕಿರುವ ಪೋಷಕರು ತಾಯಿ ಭಾಷೆಯನ್ನು ಬೇಡ ಎನ್ನುತ್ತಿರುವುದು ಎಷ್ಟು ಸರಿ ಎಂದು ಆತಂಕ ವ್ಯಕ್ತಪಡಿಸಿದರು.

ತಾಯಿಭಾಷೆಯ ಮಹತ್ವ ಸುಪ್ರೀಂಕೋರ್ಟ್ ನ್ಯಾಯಾಧೀಶರಿಗೆ ಅರಿವಿಲ್ಲ. ಹಾಗಾಗಿಯೇ ಭಾಷೆಯ ಆಯ್ಕೆಯ ಜವಾಬ್ದಾರಿಯನ್ನು ಪೋಷಕರಿಗೆ ನೀಡಿದ್ದಾರೆ. ಭಾಷೆಯ ಆಯ್ಕೆ ಮಗುವಿನದ್ದು, ಮಗುವಿಗೆ ಆಪ್ತವಾದ ಭಾಷೆಯಲ್ಲಿ ಕಲಿಯುವುದು ಸುಲಭವಾಗುತ್ತದೆ ಎನ್ನುವುದನ್ನು ಪೋಷಕರು ಅರಿತುಕೊಳ್ಳಬೇಕಿದೆ. ಮಾನಸಿಕ ಅನಾಗರೀಕತೆ ಕಡೆಗೆ ಇಂದಿನ ನಾಗರೀಕತೆ ಸಾಗುತ್ತಿದ್ದು, ಏಕ ಆಯಾಮದ ಬದುಕಿನಿಂದಾಗಿ ಜೀವನ ಸಂಕೀರ್ಣಗೊಳ್ಳುತ್ತಿದೆ ಎಂದರು.

ಪ್ರಕೃತಿಯೊಂದಿನ ಸಂಬಂಧವನ್ನು ಇಂದಿನ ಯುವಕರು ಕಳೆದುಕೊಂಡಿದ್ದಾರೆ. ಹಣ, ಆಡಂಬರದ ಜೀವನದ ಕಡೆಗೆ ಹೆಚ್ಚು ಗಮನ ಹರಿಸುತ್ತಿರುವುದರಿಂದಲೇ ಕಲೆ,ಸಾಹಿತ್ಯ ನಂಟು ಯುವ ಸಮೂಹದಲ್ಲಿಲ್ಲ. ಮಕ್ಕಳಿಗೆ ಕಲೆ, ಸಾಹಿತ್ಯದಲ್ಲಿ ಆಸಕ್ತಿಯನ್ನು ಮೂಡಿಸುವಂತೆ ಮಾಡಬೇಕಾದ ಜವಾಬ್ದಾರಿ ಪೋಷಕರ ಮೇಲಿದೆ. ಪೋಷಕರು ತಮ್ಮ ದುಡಿಮೆಯಲ್ಲಿ ಶೇಕಡಾ 5ರಷ್ಟನ್ನು ಸಾಹಿತ್ಯಕ್ಕಾಗಿ ಖರ್ಚು ಮಾಡುವಂತಾದರೆ ಕನ್ನಡ ಭಾಷೆ, ಸಾಹಿತ್ಯ ಹೆಮ್ಮರವಾಗುತ್ತದೆ ಎಂದು ತಿಳಿಸಿದರು.

ಹುಟ್ಟಿದ ನಂತರ ಎಲ್ಲರು ಸಾಯಲೇಬೇಕು. ಆದರೆ ಹುಟ್ಟಿದ ನಂತರ ಬದುಕಿದ್ದು ಬುದ್ಧ, ಬಸವ, ಕ್ರಿಸ್ತರು ಮಾತ್ರ. ಪ್ರಶ್ನೆಗಳಿಗೆ ಉತ್ತರ ನೀಡುವವರು ಸಾಹಿತಿಯೇ ಅಲ್ಲ. ಸಾಹಿತಿಗಳಿಗೆ ಉತ್ತರವೇ ಇರುವುದಿಲ್ಲ. ಅವರು ಅನುಭವಿಸಿದ ಸಂಗತಿಗಳನ್ನು ಪ್ರಕೃತಿಯೊಂದಿಗಿನ ಅನುಭವವನ್ನು ಬಿಡಿಸುವವರು ಅಷ್ಟೇ. ಬುದ್ಧ, ಬಸವ, ಕ್ರಿಸ್ತರ ಧರ್ಮವೂ ಮಠ ಧರ್ಮವಾಗಿದೆ. ಮಠ ಧರ್ಮವಾದ ಯಾವುದೇ ಧರ್ಮವು ಬದುಕುವುದಿಲ್ಲ ಎಂದರು.

ಇಂದು ದೇಶಕ್ಕಿಂತ ಜಾತಿ ಉದ್ಧಾರ ಮಾಡುವುದು ಎಲ್ಲರಿಗೂ ಮುಖ್ಯವಾಗಿದೆ. ಬಸವಣ್ಣನವರು ಹೇಳಿದ ಇವ ನಮ್ಮವ ಇವ ನಮ್ಮವ ಮಾತು ಇಂದು ಜಾತಿ, ಒಳಜಾತಿ ಸೂಚಕವಾಗಿ ಬಳಕೆಯಾಗುತ್ತಿದೆ. ಬುದ್ಧ, ಬಸವಣ್ಣನವರ ಧರ್ಮದಂತೆ ಇಂದು ಪ್ರಜಾಪ್ರಭುತ್ವ ಧರ್ಮವೂ ಮಠದ ಧರ್ಮವಾಗಿ ಅವನತಿ ಹೊಂದುತ್ತಿದೆ. ಪ್ರಜಾಪ್ರಭುತ್ವದಲ್ಲಿ ರಾಜಕೀಯ ಜೀವನದ ಒಂದು ಭಾಗವಾಗಿದ್ದು, ರಾಜಕೀಯ ಬೇಡ ಎನ್ನುವುದು ಅಪರಾಧವಾಗುತ್ತದೆ. ಮತದಾನ ನಮ್ಮ ಅಸ್ತ್ರ. ಅದನ್ನು ಸರಿಯಾದ ರೀತಿ ಪ್ರಯೋಗಿಸಿದಾಗ ಮಾತ್ರ ಸತ್ಯ ಮತ್ತು ಸೌಂದರ್ಯದ ದರ್ಶನವಾಗುತ್ತದೆ. ಅಂದು ಮಹಾತ್ಮಗಾಂಧೀಜಿ ಸತ್ಯವೇ ದೇವರು ಎಂದು ಹೇಳಿದರು. ಆದರೆ ಇಂದು ಗಾಂಧೀಜಿ ಲೆಕ್ಕಕ್ಕೆ ಇಲ್ಲದಂತೆ ಆಗಿದ್ದಾರೆ. ಯಾಕಂದರೆ ಅವರಿಗೆ ಜಾತಿ, ಜಾತಿ ಇಲ್ಲದವನು ಗೌಣವಾಗುವಂತಹ ಪರಿಸ್ಥಿತಿಗೆ ನಾವು ತಲುಪಿದ್ದೇವೆ. 6 ವರ್ಷದ ನಂತರ ಮಗು ಜಾತಿಯಿಂದ ಗುರುತಿಸಿಕೊಳ್ಳುತ್ತದೆ. ಮಕ್ಕಳಿಗೆ ಪೋಷಕರು ಸಣ್ಣತನಗಳನ್ನು ಕಲಿಸುವುದನ್ನು ಬಿಟ್ಟು ಸ್ವತಂತ್ರ ಚಿಂತನೆಗಳಿಂದ ಬೆಳೆಸುವಂತೆ ಸಲಹೆ ನೀಡಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಸಮ್ಮೇಳನಾಧ್ಯಕ್ಷರು ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ತುಮಕೂರು ಜಿಲ್ಲೆ ಸಾಂಸ್ಕೃತಿಕ, ಸಾಹಿತ್ಯದ ತವರೂರು. ಶರಣ ಸಿದ್ದರಾಮಣ್ಣ ಅವರು 12ನೇ ಶತನಮಾನದಲ್ಲಿ ಶ್ರೀ ಶೈಲದಿಂದ ಹೊರಟು ಕರ್ನಾಟಕದಲ್ಲಿಯೇ 77 ಕಡೆ ಲಿಂಗದೀಕ್ಷೆ ನೀಡುವ ಮೂಲಕ ಧರ್ಮ ಸಾಹಿತ್ಯವನ್ನು ಪಸರಿಸಿದರು ಎಂದರು. ತುಮಕೂರು ಜಿಲ್ಲೆಯ ಎಲ್ಲಾ ಶ್ರೇಷ್ಠ ಸಾಹಿತಿಗಳಿಗೂ ಹಾಗೂ ಯುವ ಬರಹಗಾರರಿಗೂ ಧನ್ಯವಾದವನ್ನು ಸಲ್ಲಿಸಿದರು.

ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷ ಮುರುಳೀಧರ್ ಹಾಲಪ್ಪ, ಜಿಲ್ಲಾಧಿಕಾರಿ ಕೆ.ಪಿ.ಮೋಹನ್‍ರಾಜ್ ಮಾತನಾಡಿದರು. ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News