ಬಿಜೆಪಿ- ಟಿಡಿಪಿ ಮೈತ್ರಿ ಖತಂ?

Update: 2018-02-03 03:51 GMT

ಹೈದರಾಬಾದ್/ ಹೊಸದಿಲ್ಲಿ, ಫೆ.3: ಬಿಜೆಪಿ ಜತೆ ಮೈತ್ರಿ ಮುರಿದುಕೊಂಡು ಎನ್‌ಡಿಎಯಿಂದ ಹೊರಬನ್ನಿ- ದಕ್ಷಿಣ ಭಾರತದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ರಂಗದ ಅತಿದೊಡ್ಡ ಪಾಲುದಾರ ಪಕ್ಷವಾಗಿರುವ ತೆಲುಗುದೇಶಂ ಪಾರ್ಟಿ ಮುಖಂಡರ ಸ್ಪಷ್ಟ ನುಡಿ ಇದು.

ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಆಪಾದಿಸಿರುವ ಮುಖಂಡರು, ಬಿಜೆಪಿ ಜತೆ ಮೈತ್ರಿ ಮುರಿದುಕೊಳ್ಳುವಂತೆ ಪಕ್ಷದ ಮುಖಂಡ ಚಂದ್ರಬಾಬು ನಾಯ್ಡು ಅವರನ್ನು ಆಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ. ನಾಯ್ಡು ಆಯೋಜಿಸಿದ್ದ ಪಕ್ಷದ ಸಂಸದರ ಸಭೆಯಲ್ಲಿ ಈ ಸ್ಪಷ್ಟ ಅಭಿಪ್ರಾಯ ವ್ಯಕ್ತವಾಗಿದ್ದು, ಟಿಡಿಪಿಯ ಒತ್ತಡ ತಂತ್ರ ಆಡಳಿತಾರೂಢ ಪಕ್ಷದಲ್ಲಿ ಕಳವಳಕ್ಕೆ ಕಾರಣವಾಗಿದೆ.

ಪಕ್ಷದ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚಿಸಲು ಟಿಡಿಪಿ ಅಧ್ಯಕ್ಷ ಹಾಗೂ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಪಕ್ಷದ ಹಿರಿಯ ಮುಖಂಡರ ಜತೆ ಸುದೀರ್ಘ ಚರ್ಚೆ ನಡೆಸಿದರು.

ತೆಲುಗುದೇಶಂ ಎನ್‌ಡಿಎ ಕೂಟದಿಂದ ಹೊರಬರಬೇಕು ಎಂದು ಬಹುತೇಕ ಎಲ್ಲ ಮುಖಂಡರು ಸಲಹೆ ಮಾಡಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ. ಕೇಂದ್ರದಿಂದ ಆಗಿರುವ ಅವಮಾನವನ್ನು ತಾಳಿಕೊಂಡು ಮೈತ್ರಿಕೂಟದಲ್ಲಿ ಮುಂದುವರಿದರೆ, ಇದು ಪಕ್ಷದ ಕಾರ್ಯಕರ್ತರಿಗೆ ಮತ್ತು ರಾಜ್ಯದ ಜನರಿಗೆ ತಪ್ಪು ಸಂದೇಶ ರವಾನಿಸುತ್ತದೆ ಎನ್ನುವುದು ಪಕ್ಷದ ಮುಖಂಡರ ಒಕ್ಕೊರಳ ಅಭಿಪ್ರಾಯ.

ಸರ್ಕಾರದಿಂದ ತೆಗುಲು ದೇಶಂನ ಸಚಿವರನ್ನು ವಾಪಸ್ ಕರೆಸಿಕೊಳ್ಳುವುದು, ಎಲ್ಲ ಸಂಸದರು ರಾಜೀನಾಮೆ ನೀಡುವುದು ಹಾಗೂ ಎನ್‌ಡಿಎಯಿಂದ ಹೊರಬರುವುದು ಹೀಗೆ ಮೂರೂ ಸಾಧ್ಯತೆಗಳ ಬಗ್ಗೆ ಚರ್ಚಿಸಲಾಗಿದೆ. "ನಾವು ಬಿಜೆಪಿ ವಿರುದ್ಧ ಸಮರ ಸಾರುತ್ತಿದ್ದೇವೆ" ಎಂದು ಪಕ್ಷದ ರಾಜ್ಯಸಭಾ ಸದಸ್ಯ ಟಿ.ಜಿ.ವೆಂಕಟೇಶ್ ಘೋಷಿಸಿದ್ದಾರೆ. ಈ ಬಗ್ಗೆ ಭಾರತೀಯ ಜನತಾ ಪಕ್ಷದ ವಕ್ತಾರರನ್ನು ಸಂಪರ್ಕಿಸಿದಾಗ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಆಂಧ್ರದಲ್ಲಿ 2014ರಲ್ಲಿ ರಾಜ್ಯ ವಿಧಾನಸಭೆ ಹಾಗೂ ಲೋಕಸಭೆಗೆ ಏಕಕಾಲಕ್ಕೆ ಚುನಾವಣೆ ನಡೆದಿತ್ತು. ಬಿಜೆಪಿ ಮೈತ್ರಿಕೂಟ ಲೋಕಸಭೆಯ 25 ಸ್ಥಾನಗಳ ಪೈಕಿ 18 ಹಾಗೂ ವಿಧಾನಸಭೆಯ 175 ಸ್ಥಾನಗಳ ಪೈಕಿ 103ನ್ನು ಬಗಲಿಗೆ ಹಾಕಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News