×
Ad

ಮೈಸೂರು: ರಾಜ್ಯ ಬಜೆಟ್ ನಲ್ಲಿ ವಿಶೇಷ ಯೋಜನೆಗಳನ್ನು ರೂಪಿಸಲು ಒತ್ತಾಯಿಸಿ ಧರಣಿ

Update: 2018-02-03 20:58 IST

ಮೈಸೂರು,ಫೆ.3: ದಲಿತರಿಗೆ, ಬಡವರಿಗೆ, ಅಸಹಾಯಕರಿಗೆ, ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ, ನಿರುದ್ಯೋಗಿಗಳಿಗೆ, ಬಡ ಹೆಣ್ಣುಮಕ್ಕಳಿಗೆ, ನಿರ್ಗತಿಕ ಅಲೆಮಾರಿ ಕುಟುಂಬಗಳಿಗೆ, ಪೌರಕಾರ್ಮಿಕರ ಅಭಿವೃದ್ಧಿಗೆ ಈ ಬಾರಿಯ ರಾಜ್ಯ ಬಜೆಟ್ ನಲ್ಲಿ ವಿಶೇಷ ಯೋಜನೆಗಳನ್ನು ರೂಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶನಿವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿಶ್ರಮದ ಫಲವಾಗಿ ದಲಿತರ, ಇತರೆ ಎಲ್ಲಾ ಜಾತಿಯ ಬಡವರ ಅಭಿವೃದ್ಧಿಗೆ ವಿಶೇಷ ಕಾನೂನುಗಳಿದ್ದರೂ, ದಲಿತರು, ಬಡವರು ಇಂದಿಗೂ ವಾಸಿಸಲು ನೆಲೆ ಇಲ್ಲದೇ ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದದೆ ತುಂಬಾ ಸಂಕಷ್ಟದ ಜೀವನ ಸಾಗಿಸುತ್ತಿದ್ದಾರೆ. ಸರ್ಕಾರಗಳು ದಲಿತರ, ಬಡವರ ಅಭಿವೃದ್ಧಿಗೆ ಬಜೆಟ್ ನಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದರೂ ಕೆಲವು ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳ ಬೇಜವ್ದಾರಿತನದಿಂದಾಗಿ ಈ ಯೋಜನೆಗಳು ಬಡವರ ಮನೆ ಬಾಗಿಲಿಗೆ ತಲುಪುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಮಾಜದಲ್ಲಿ ಬಡವ- ಶ್ರೀಮಂತರ ಅಂತರ ಹೆಚ್ಚಾಗಿ ವಾಸಿಸಲು ಮನೆ ಇಲ್ಲದೇ, ತಿನ್ನಲು ಸರಿಯಾಗಿ ಅನ್ನ ಇಲ್ಲದೇ, ಸರ್ಕಾರದ ಸೌಲಭ್ಯದಿಂದ ಕುಟುಂಬಗಳು ವಂಚಿತವಾಗಿ ಸಂಕಷ್ಟದ ಬದುಕನ್ನು ಸಾಗಿಸುತ್ತಿದ್ದಾರೆ. ಅದಕ್ಕಾಗಿ ಈ ಬಾರಿ ಬಜೆಟ್ ನಲ್ಲಿ ಅಂಬೇಡ್ಕರ್ ನಿಗಮದಿಂದಲೇ ದಲಿತರಿಗೆ ನೇರ ಸಾಲ ಮಂಜೂರು ಮಾಡಬೇಕು. ಸಾಮಾಜಿಕ ಭದ್ರತಾ ಯೋಜನೆಗಳಾದ ವೃದ್ಧಾಪ್ಯ, ವಿಧವಾ ವೇತನ, ಅಂಗವಿಕಲರ ವೇತನಗಳನ್ನು ಪಡೆಯುತ್ತಿರುವ ನಿರ್ಗತಿಕರಿಗೆ ಮಾಸಾಶನವನ್ನು ತಲಾ 2ಸಾವಿರದವರೆಗೆ ಹೆಚ್ಚಳ ಮಾಡಬೇಕು. ವಸತಿಯಿಲ್ಲದ ಬಡಕುಟುಂಬಗಳಿಗೆ ನಿವೇಶನ, ಮನೆ, ಇತರ ಸೌಲಭ್ಯಗಳನ್ನು ಕಲ್ಪಿಸಲು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ  ನಿಂಗರಾಜ್ ಮಲ್ಲಾಡಿ,ಹೆಚ್.ಬಿ.ದಿವಾಕರ್, ಕಾರ್ಯಬಸವಣ್ಣ, ದೊಡ್ಡಸಿದ್ಧು, ವೆಂಕಟೇಶ್, ನಾರಾಯಣ,ಟೈಲರ್ ಮಾದೇಶ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News