×
Ad

ಮಂಡ್ಯ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪತ್ರಿಕಾ ವಿತರಕರ ಧರಣಿ

Update: 2018-02-03 22:04 IST

ಮಂಡ್ಯ, ಫೆ.3: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ಬಜೆಟ್‍ನಲ್ಲಿ ಪತ್ರಿಕಾ ವಿತರಕರು ಹಾಗೂ ಸಹಾಯಕರ ಕಲ್ಯಾಣಕ್ಕಾಗಿ ಕಾರ್ಯಕ್ರಮ ರೂಪಿಸುವಂತೆ ಒತ್ತಾಯಿಸಿ ಜಿಲ್ಲಾ ಪತ್ರಿಕಾ ವಿತರಕರು(ಏಜೆಂಟರು) ಹಾಗೂ ಸಹಾಯಕರು ಶನಿವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೌನ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಿದರು. ಇದಕ್ಕೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು, ಪತ್ರಕರ್ತರು, ರೈತಸಂಘ ಬೆಂಬಲ ಸೂಚಿಸಿದವು.

ಪತ್ರಿಕಾ ವಿತರಕರು ಆರ್ಥಿಕವಾಗಿ ಹಿಂದುಳಿದ ಕುಟುಂಬದ ಹಿನ್ನಲೆಯುಳ್ಳವರಾಗಿದ್ದು, ಹಲವು ಮಂದಿ ವಿದ್ಯಾರ್ಥಿಗಳು ಪ್ರತಿನಿತ್ಯ ಸೂರ್ಯ ಉದಯಿಸುವ ಮೊದಲೇ ಚಳಿ, ಮಳೆ ಎನ್ನದೆ ಪತ್ರಿಕೆಯನ್ನು ಹೊತ್ತು ಮನೆಮನೆಗೆ ತಲುಪಿಸುವ ಕಾರ್ಯ ಮಾಡುತ್ತಿದ್ದೇವೆ. ಕಷ್ಟದ ಬದುಕು ತಮ್ಮದು ಎಂದು ಅಳಲು ತೋಡಿಕೊಂಡರು.

ಪತ್ರಿಕೆ ವಿತರಕರ ಸಮಗ್ರ ಕಲ್ಯಾಣಕ್ಕೆ ಪ್ರತ್ಯೇಕ ನಿಧಿ ಸ್ಥಾಪನೆ ಮಾಡಬೇಕು. ಉಚಿತ ಪಡಿತರ, ವಿದ್ಯಾರ್ಥಿ ವೇತನ ನೀಡಬೇಕು. ಜೀವವಿಮೆ, ಹೆಲ್ತ್ ಕಾರ್ಡ್ ನೀಡಬೇಕು. ಬೈಕ್ ಖರೀದಿಸಲು ಶೇ.50ರಷ್ಟು ಸಬ್ಸಿಡಿ ನೀಡಬೇಕು. ರಾಜ್ಯದ ಎಲ್ಲ ವಿತರಕರಿಗೂ ಗುರುತಿನ ಚೀಟಿ ಮತ್ತು ಝರ್ಕಿನ್ ವಿತರಿಸಬೇಕು ಎಂದು ಅವರು ಒತ್ತಾಯಿಸಿದರು.

ಸದನದಲ್ಲಿ ಹೋರಾಟ:
ಪತ್ರಿಕಾ ವಿತರಕರಿಗೆ ಬೆಂಬಲ ನೀಡಿದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಮಾತನಾಡಿ, ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಇದರ ಬಗ್ಗೆ ಗಮನ ಸೆಳೆಯುಲು ಹೋರಾಟ ನಡೆಸಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆರಗೋಡು ಸೋಮಶೇಖರ್, ರಾಜ್ಯ ಉಪಾಧ್ಯಕ್ಷ ಮತ್ತೀಕೆರೆ ಜಯರಾಂ, ಮಾಜಿ ಅಧ್ಯಕ್ಷರಾದ ಎ.ಎಲ್.ಬಸವೇಗೌಡ, ಕೆ.ಎನ್.ರವಿ, ಪತ್ರಿಕಾ ವಿತರಕರಾದ ಪವನ್ ಯತೀಶ್, ಗಿರೀಶ್, ಜಗದೀಶ್, ಮಂಜುನಾಥ್, ದರ್ಶನ್, ಮುನೇಶ್, ಸಾಗರ್, ಮಹಾಲಿಂಗು, ನಾರಾಯಣಸ್ವಾಮಿ, ಶಿವಲಿಂಗಯ್ಯ, ವಿನಯ್‍ಗೌಡ, ಶಿವಕುಮಾರ್, ರೇವಣ್ಣ, ರಾಘವ, ಆದಿತ್ಯ, ವೆಂಕಟೇಶ್, ಸುಮಂತ್, ರವಿ, ಬಿ.ಕೆ.ಸತೀಶ್, ಗೋವಿಂದಸ್ವಾಮಿ, ಕಿರಣ್, ರವಿಕುಮಾರ್ ಹಾಗೂ ಇತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News