ಇತಿಹಾಸ ಪರಂಪರೆ ಜೀವಂತವಾಗಿಡುವ ಕಲೆ ಕಲೆಗಾರನಿಗಿದೆ: ಡಾ. ಜೋಗನ್‍ಶಂಕರ್
ಶಿವಮೊಗ್ಗ,ಫೆ. 3: ನಮ್ಮ ನೆನಪುಗಳು ಮತ್ತು ಇತಿಹಾಸ ಪರಂಪರೆಯನ್ನು ಜೀವಂತವಾಗಿಡುವ ಪ್ರತಿಭೆ ಕಲೆಗಾರನಿಗಿದೆ ಎಂದು ಕುವೆಂಪು ವಿ.ವಿ.ಯ. ಕುಲಪತಿ ಡಾ.ಜೋಗನ್ ಶಂಕರ್ ಹೇಳಿದರು.
ಕುವೆಂಪು ವಿ.ವಿ.ಯ ಹಿರೇಮಠ ಸಭಾಂಗಣದಲ್ಲಿ ಕರ್ನಾಟಕ ಶಿಲ್ಪಾಕಲಾ ಅಕಾಡೆಮಿ, ಬೆಂಗಳೂರು, ಕುವೆಂಪು ವಿಶ್ವವಿದ್ಯಾಲಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸಮಕಾಲೀನ ಜನಪರ ಶಿಲಾ ಶಿಲ್ಪ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಿಲಾ ಶಿಲ್ಪ ಶಿಬಿರದಲ್ಲಿರುವ ಪ್ರತಿ ಶಿಲ್ಪವು ತನ್ನದೇ ವೈಶಿಷ್ಟ್ಯತೆ ಹೊಂದಿದೆ. ಕಲಾವಿದರ ಕೈಚಳಕ ಹಾಗೂ ದೃಷ್ಟಿಕೋನಗಳು ಅವರ ಶಿಲ್ಪಕಲೆಗಳಲ್ಲಿ ಅಡಗಿವೆ. ಸರಳವಾದರೂ ಪ್ರತಿ ಕೆತ್ತನೆಯು ದೀರ್ಘವಾದ ಸಂದೇಶವನ್ನು ಹೊತ್ತು ನಿಂತಿವೆ. ತಮ್ಮ ಚಿಂತನೆಗಳಿಗೆ ತಕ್ಕಂತೆ ಕಲ್ಲಿಗೆ ರೂಪ ನೀಡಿ ಮನಮುಟ್ಟುವಂತೆ ಸಮಾಜಕ್ಕೆ ಸಂದೇಶ ನೀಡಲು ಪ್ರಯತ್ನಿಸಿದ್ದಾರೆ. ಪ್ರತಿಯೊಂದು ಶಿಲ್ಪವು ಹೊಸ ಭಾವನೆಗಳನ್ನು ಸೃಷ್ಟಿ ಮಾಡುತ್ತವೆ ಎಂದರು.
ಸಮಕಾಲೀನ ಪರಿಸ್ಥಿತಿಗೆ ಅನುಗುಣವಾಗಿ ಪ್ರಚಲಿತ ಮಾನವನ ಜೀವನ, ಪರಿಸರ, ಯಾಂತ್ರೀಕರಣ ಹೀಗೆ ನಾನಾ ಪರಿಕಲ್ಪನೆಗಳನ್ನು ಕಲ್ಲಿನಲ್ಲಿ ಕೆತ್ತಿ ಕಲ್ಲಿಗೂ ಕಲೆಗಾರರು ಜೀವ ತುಂಬಿದ್ದಾರೆ. ಸುಮಾರು 15 ದಿನಗಳ ಕಾಲ ವಿವಿಯ ಕ್ಯಾಂಪಸ್‍ನಲ್ಲಿ ನೋಡುಗರ ಕೌತುಕವನ್ನು ಹೆಚ್ಚಿಸಿದ್ದರು. ಇಂದು ಶಿಲ್ಪಾಕಲೆ ಕೆತ್ತನೆ ಮೂಲಕ ಎಲ್ಲರ ನೀರಿಕ್ಷೆಗಳನ್ನು ಪರಿಪೂರ್ಣಗೊಳಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ರಿಜಿಸ್ಟ್ರಾರ್ ಹೆಚ್.ವಿ.ಇಂದ್ರಮ್ಮ , ಶಿಬಿರದಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆ ಹೊರಹಾಕಿರುವ ಎಲ್ಲಾ ಕಲಾವಿದರು ದೀರ್ಘವಾದ ಚಿಂತನೆ ಆಲೋಚನೆ ಒಳಗೊಂಡಿದ್ದಾರೆ ಎಂದು ಅವರ ಶಿಲ್ಪಗಳ ಮೂಲಕ ತಿಳಿಯಪಡಿಸಿದ್ದಾರೆ. ನೋಡುಗರನ್ನು ಚಿಂತನೆಗೆ ಒಳಪಡಿಸುವ ಶಿಲ್ಪಗಳು ವಿವಿಯ ಕ್ಯಾಂಪಸ್‍ಗೆ ಮೆರಗು ತಂದಿವೆ. ಪ್ರತಿ ಶಿಲ್ಪದಲ್ಲಿಯೂ ಹೊಸ ಆಲೋಚನೆಗಳು ಅಡಗಿವೆ. ಸಾಂಪ್ರಾದಾಯಿಕ ಶಿಲ್ಪಕಲೆ ಜೊತೆ ನವ್ಯಶಿಲ್ಪಕಲೆಗೂ ಆಧ್ಯತೆ ನೀಡಬೇಕು. ಎಂದರು.
ಸಮಾರಂಭದಲ್ಲಿ ಕು.ವಿ.ವಿ.ಯ ಕುಲಸಚಿವ ಡಾ.ಭೋಜ್ಯಾನಾಯ್ಕ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸಂಚಾಲಕ ಸುಕೇಶ್.ಬಿ.ಸಿ, ಪುರಾತತ್ವ ವಿದ್ವಾಂಸ ಶ್ರೀನಿವಾಸ ಪಾಡಿಗಾರ, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗದ ಮುಖ್ಯಸ್ಥರು ಡಾ.ರಾಜಾರಾಮ ಹೆಗಡೆ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ಶಿಲ್ಪಿ ರು.ಕಾಳಾಚಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.