×
Ad

ಪ್ರಧಾನಿ ಹೇಳಿಕೆಗೆ ಖಂಡನೆ: ಪಕೋಡ ಮಾರಾಟ ಮಾಡಿ ಪ್ರತಿಭಟಿಸಿದ ಎನ್‍ಎಸ್‍ಯುಐ ಕಾರ್ಯಕರ್ತರು

Update: 2018-02-03 22:19 IST

ಶಿವಮೊಗ್ಗ, ಫೆ.3: ವಿದ್ಯಾವಂತ ಯುವ ಜನರಿಗೆ ಉದ್ಯೋಗ ಸೃಷ್ಟಿ ಮಾಡುವಲ್ಲಿ ವಿಫಲವಾಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ, ವಿದ್ಯಾವಂತರು ಪಕೋಡ ಮಾರಾಟ ಮಾಡಿ ಜೀವನ ಸಾಗಿಸಬಹುದು ಎಂಬ ಹೇಳಿಕೆ ಖಂಡನೀಯವಾಗಿದೆ. ಸಮರ್ಥ ಆಡಳಿತ ನಡೆಸುವಲ್ಲಿ ವಿಫಲರಾಗಿರುವ ಅವರು ತಕ್ಷಣವೇ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಎನ್‍ಎಸ್‍ಯುಐ ಸಂಘಟನೆ ಆಗ್ರಹಿಸಿದೆ. 

ಪ್ರಧಾನಿ ಹೇಳಿಕೆ ಖಂಡಿಸಿ ಶನಿವಾರ ನಗರದ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಕಾರ್ಯಕರ್ತರು 'ಪಕೋಡ' ತಯಾರಿಸಿ ಸಾರ್ವಜನಿಕರಿಗೆ ಮಾರಾಟ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.

ಅಧಿಕಾರಕ್ಕೆ ಆಗಮಿಸುವ ಮುನ್ನ ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ, ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿ ಗೌರವಯುತ ಜೀವನ ನಡೆಸಲು ಅವಕಾಶ ಕಲ್ಪಿಸುತ್ತೇವೆ, ಅಚ್ಛೇ ದಿನ್ ತರಲಿದ್ದೇವೆ ಎನ್ನುವ ಭರವಸೆ ನೀಡಿದ್ದ ನರೇಂದ್ರ ಮೋದಿಯವರು, ಪ್ರಧಾನಿಯಾಗುತ್ತಿದ್ದಂತೆ ತಾವು ಕೊಟ್ಟ ಭರವಸೆಗಳನ್ನೆಲ್ಲ ಮರೆತ್ತಿದ್ದಾರೆ. ಅವರು ಪ್ರಧಾನಿಯಾದ ನಂತರ ದೇಶವಾಸಿಗಳು ಅತ್ಯಂತ ಕೆಟ್ಟ ದಿನಗಳನ್ನು ಎದುರಿಸುವಂತಾಗಿದೆ. ನೋಟ್ ಅಮಾನ್ಯೀಕರಣ, ಜಿಎಸ್‍ಟಿ ಅನುಷ್ಠಾನ, ಬಂಡವಾಳಶಾಹಿಗಳು, ಉದ್ಯಮಿಗಳಿಗೆ ಮಣೆ ಮೊದಲಾದ ಅವೈಜ್ಞಾನಿಕ ನೀತಿಗಳಿಂದ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ನಾಗರೀಕರು ನೆಮ್ಮದಿಯಾಗಿ ಜೀವನ ನಡೆಸದಂತಹ ಸ್ಥಿತಿ ಸೃಷ್ಟಿಸಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ. 

ಸರ್ಕಾರದ ಜನ ವಿರೋಧಿ ನೀತಿಗಳಿಂದ ಉದ್ಯೋಗ ಸೃಷ್ಟಿಯಾಗುವ ಬದಲು, ಈಗಿರುವ ಉದ್ಯೋಗಗಳು ಕಣ್ಮರೆಯಾಗುವಂತಾಗಿದೆ. ಇದರಿಂದ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ವಿದ್ಯಾವಂತ ಯುವ ಸಮೂಹ ಕೆಲಸವಿಲ್ಲದೆ ಕಾಲ ಕಳೆಯುವಂತಾಗಿದೆ. ಇಲ್ಲವೇ ಉದ್ಯೋಗ ಅರಸಿ ವಿದೇಶಗಳಿಗೆ ತೆರಳುವಂತಾಗಿದೆ. ಇದು ನಿಜಕ್ಕೂ ದೇಶದ ದುರಂತದ ಸಂಗತಿಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ತಕ್ಷಣವೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿಸುವ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಬೇಕು. ಸಾಧ್ಯವಾಗದಿದ್ದರೆ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಸಂಘಟನೆಯ ವತಿಯಿಂದ ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.

ಪ್ರತಿಭಟನೆಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಿ.ಜೆ.ಮಧುಸೂಧನ್, ಎನ್‍ಎಸ್‍ಯುಐ ರಾಜ್ಯ ಮುಖಂಡ ಕೆ. ಚೇತನ್, ಜಿಲ್ಲಾಧ್ಯಕ್ಷ ಬಾಲಾಜಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News