ಸದಾಶಿವ ಆಯೋಗ ವರದಿ: ಯಥಾವತ್ ಶಿಫಾರಸ್ಸಿಗೆ ಆಗ್ರಹಿಸಿ ಮಾದಿಗ ಸಮುದಾಯದಿಂದ ಪ್ರತಿಭಟನೆ

Update: 2018-02-03 16:52 GMT

ಶಿವಮೊಗ್ಗ, ಫೆ. 3: ಒಳ ಮೀಸಲಾತಿ ಕಲ್ಪಿಸುವುದಕ್ಕೆ ಸಂಬಂಧಿಸಿ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಯಥಾವತ್ ಆಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಆಗ್ರಹಿಸಿ ಶನಿವಾರ ಕರ್ನಾಟಕ ಮಾದಿಗರ ಸಂಘಟನೆಗಳ ಸ್ವಾಭಿಮಾನದ ಒಕ್ಕೂಟವು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿತು. 

ಮಾದಿಗ ಸಮುದಾಯದ ಹಲವು ವರ್ಷಗಳ ಹೋರಾಟದ ಫಲವಾಗಿ ಆಯೋಗ ರಚನೆ ಮಾಡಲಾಗಿತ್ತು. ಎ.ಜೆ.ಸದಾಶಿವ ಆಯೋಗವು ರಾಜ್ಯಾದ್ಯಂತ ಸಂಚರಿಸಿ ವರದಿ ಸಿದ್ದಪಡಿಸಿದೆ. ಇದು ಪರಿಶಿಷ್ಟ ಜಾತಿಯಲ್ಲಿನ ಎಡ ಮತ್ತು ಬಲ ವರ್ಗಗಳಿಗೆ ಮಾತ್ರ ಸೀಮಿತವಾಗಿಲ್ಲ. ಎಲ್ಲ ಶೋಷಿತ ಜಾತಿ, ಅಲೆಮಾರಿ ಸಮುದಾಯಗಳ ಸ್ಥಿತಿಗತಿ ಒಳಗೊಂಡಂತೆ ಸಮೀಕ್ಷೆ ನಡೆಸಿ ಸಿದ್ದಪಡಿಸಿದ ಆಮೂಲಾಗ್ರ ವರದಿಯಾಗಿದೆ. ಸಮಾಜದ ಮುಖ್ಯವಾಹಿನಿಗೆ ಆಗಮಿಸದ ವರ್ಗಗಳಿಗೆ ಒಳ ಮೀಸಲು ಕಲ್ಪಿಸುವುದು ಸೇರಿದಂತೆ ಹಲವು ಶಿಫಾರಸ್ಸುಗಳನ್ನು ವರದಿಯಲ್ಲಿ ನೀಡಲಾಗಿದೆ. ಆಯೋಗವು ಸರ್ಕಾರಕ್ಕೆ ಶಿಫಾರಸ್ಸು ವರದಿ ಸಲ್ಲಿಸಿ ಹಲವು ವರ್ಷಗಳಾಗುತ್ತಾ ಬಂದರೂ ಇಲ್ಲಿಯವರೆಗೂ ವರದಿಯ ಅನುಷ್ಠಾನಕ್ಕೆ ಕ್ರಮಕೈಗೊಂಡಿಲ್ಲ. ಇದೀಗ ಮುಂಬರುವ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ವರದಿಯ ಕೆಲ ಅಂಶಗಳನ್ನು ಮಾತ್ರ, ತರಾತುರಿಯಲ್ಲಿ ಕೇಂದ್ರಕ್ಕೆ ಶಿಫಾರಸ್ಸು ಮಾಡಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಸರಿಯಲ್ಲವಾಗಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಈ ಕಾರಣದಿಂದ ಆಯೋಗದ ವರದಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ, ಪೂರ್ಣ ಪ್ರಮಾಣದ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು. ಈ ಕುರಿತಂತೆ ಈಗಾಗಲೇ ರಾಜ್ಯ ಸರ್ಕಾರಕ್ಕೆ ಮಾದಿಗ ಸಮುದಾಯವು ಸ್ಪಷ್ಟವಾಗಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ. ಆದರೆ ಇದಕ್ಕೆ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಈ ಕಾರಣದಿಂದ ಇದೇ ತಿಂಗಳು 22 ರಿಂದ 22 ರವರೆಗೆ ಬೆಂಗಳೂರಿನಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

ಪ್ರತಿಭಟನೆಯಲ್ಲಿ ಸಂಘಟನೆಯ ಮುಖಂಡರಾದ ಭಾನುಪ್ರಸಾದ್, ಮಂಜುನಾಥ್, ವೆಂಕಟೇಶ್, ಸಿ.ಮೂರ್ತಿ ಸೇರಿದಂತೆ ಮೊದಲಾದವರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News