×
Ad

ಮಡಿಕೇರಿ: ಅಲ್ಪಸಂಖ್ಯಾತರ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಕೇಂದ್ರದ ಮೂಲಕ ಜಾಗೃತಿ ಮೂಡಿಸಿ; ನಸೀರ್ ಅಹ್ಮದ್

Update: 2018-02-03 22:28 IST

ಮಡಿಕೇರಿ, ಫೆ.3 :ಅಲ್ಪಸಂಖ್ಯಾತರಿಗಾಗಿ ಸರ್ಕಾರ ಜಾರಿಗೊಳಿಸಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಪ್ರತಿ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಮಾಹಿತಿ ಕೇಂದ್ರ ಆರಂಭಿಸಲಾಗಿದ್ದು, ಈ ಕೇಂದ್ರಗಳ ಮೂಲಕ ಗ್ರಾಮ ಮಟ್ಟದಲ್ಲಿ ಹೆಚ್ಚಿನ ಜಾಗೃತಿ ಅಭಿಯಾನ ಆಯೋಜಿಸುವಂತೆ ಬಿಸಿಎಂ ಇಲಾಖೆ ಅಧಿಕಾರಿಗೆ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ನಸೀರ್ ಅಹ್ಮದ್ ಅವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ.   

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಧಾನಮಂತ್ರಿ ಅವರ ಹೊಸ 15 ಅಂಶಗಳ ಕಾರ್ಯಕ್ರಮ ಹಾಗೂ ವಿವಿಧ ಫಲಾನುಭವಿಗಳ ಆಧಾರಿತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಾಹಿತಿ ಕೇಂದ್ರದ ಮೂಲಕ ಪ್ರತಿ ಶುಕ್ರವಾರ ಮಸೀದಿಗಳಲ್ಲಿ ಹಾಗೂ ಭಾನುವಾರ ಚರ್ಚ್‍ಗಳಲ್ಲಿ ಅಲ್ಪಸಂಖ್ಯಾತರಿಗೆ  ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಕರಪತ್ರದ ಮೂಲಕ ಮಾಹಿತಿ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರು ನಿರ್ದೇಶನ ನೀಡಿದರು.   
ಸರ್ಕಾರ ಅಲ್ಪಸಂಖ್ಯಾತರಿಗಾಗಿ 15 ಅಂಶಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಅಲ್ಪಸಂಖ್ಯಾತರಿಗೆ ಸರಿಯಾದ ರೀತಿಯಲ್ಲಿ ತಲುಪಿಸುವಂತಾಗಬೇಕು. ಅಲ್ಪಸಂಖ್ಯಾತರು ಶಿಕ್ಷಣ ಸೇರಿದಂತೆ ಹಲವು ರಂಗಗಳಲ್ಲಿ ಹಿಂದುಳಿದಿದ್ದು, ಮುಖ್ಯವಾಹಿನಿಗೆ ತರಲು ಪ್ರಯತ್ನಿಸಬೇಕಿದೆ ಎಂದು ಅವರು ತಿಳಿಸಿದರು.     

ಶಾದಿಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಕಾಲ ಮಿತಿಯೊಳಗೆ ಅರ್ಜಿ ಸಲ್ಲಿಸುವುದು ಮತ್ತಿತರ ಬಗ್ಗೆ ಅರಿವು ಮೂಡಿಸುವಂತೆ ಸೂಚನೆ ನೀಡಿದರು. 
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಅಲ್ಪಸಂಖ್ಯಾತರಿಗಾಗಿ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಅವುಗಳ ಶೇಕಡವಾರು ಪ್ರಗತಿ ಸಾಧಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರು ನಿರ್ದೇಶನ ನೀಡಿದರು. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ವತಿಯಿಂದ ಅರಿವು ಯೋಜನೆ, ಗಂಗಾಕಲ್ಯಾಣ ಯೋಜನೆ ಇವುಗಳ ಪ್ರಗತಿ ಕುಂಠಿತಗೊಂಡಿದ್ದು, ಫೆಬ್ರುವರಿ ತಿಂಗಳ ಅಂತ್ಯದೊಳಗೆ ಪ್ರಗತಿ ಸಾದಿಸುವಂತೆ ಸ್ಪಷ್ಟ ಸೂಚನೆ ನೀಡಿದರು.  

ಪೊಲೀಸರು ಅಮಾಯಕ ಅಲ್ಪಸಂಖ್ಯಾತರ ಮೇಲೆ ದೂರು ದಾಖಲಿಸುವುದು ತಪ್ಪಬೇಕು. ಈ ಬಗ್ಗೆ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುವಂತಾಗಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಜಿಲ್ಲಾ ಪಂಚಾಯತ್, ಕೈಗಾರಿಕಾ ಕೇಂದ್ರ, ಅಲ್ಪಸಂಖ್ಯಾತರ ನಿಗಮ, ಹೀಗೆ ನಾನಾ ಇಲಾಖೆಗಳು ಅಭಿವೃದ್ಧಿ ಸಾಧಿಸಲು ಶ್ರಮಿಸಬೇಕಿದೆ ಎಂದು ಹೇಳಿದರು. 

ಜಿ.ಪಂ.ಸದಸ್ಯರಾದ ಅಬ್ದುಲ್ ಲತೀಫ್ ಅವರು ಮಾತನಾಡಿ, ಶಾದಿಮಹಲ್ ಭವನ ನಿರ್ಮಾಣ ಸಂಬಂಧಿಸಿದಂತೆ ಏಜೆನ್ಸಿಗೆ ನೀಡುವುದುರ ಬದಲಾಗಿ ಹಿಂದೆ ಇದ್ದ ಪದ್ಧತಿಯಂತೆ ನಿರ್ವಹಿಸಬೇಕು ಎಂದು ಸಲಹೆ ನೀಡಿದರು. 

ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾಮಾತನಾಡಿ, ಜಿಲ್ಲೆಯಲ್ಲಿ 94ಸಿ, 94 ಸಿಸಿ ರಡಿ ಬಾಕಿ ಇರುವ ಅರ್ಜಿಗಳನ್ನು ವಿಲೇವಾರಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು. 

ಆಯೋಗದ ಸದಸ್ಯರಾದ ಅಬ್ದುಲ್ ಹಮೀದ್, ರಫಿ ಭಂಡಾರಿ, ಮಾರ್ಷಲ್ ಮಂತೇರೋ, ಆರ್. ಅಬ್ದುಲ್ ಹಮೀದ್, ಮೊಹಮದ್ ಪಟೇಲ್, ಜಲ್ಜೀದ್ ಸಿಂಗ್, ಮಜ್ ಅಹ್ಮದ್ ಷರೀಫ್, ಮಹೇಂದ್ರ ಜೈನ್, ಡಾ.ಮತಿಲ್ಡಾ ಡಿಸೋಜಾ, ಅಖಿಲ್ ಅಹಮ್ಮದ್, ಜಿ.ಪಂ.ಸದಸ್ಯರಾದ ಅಹ್ಮದ್ ಪಟೇಲ್, ಅಬ್ದುಲ್ ಲತೀಫ್, ನಗರಸಭೆ ಸದಸ್ಯರಾದ ಪೀಟರ್ ಅವರು ಅಲ್ಪಸಂಖ್ಯಾತರಿಗಾಗಿ ಅಭಿವೃದ್ಧಿ ಸಂಬಂಧ ಹಲವು ಮಾಹಿತಿ ಪಡೆದರು.   

ಬಿಸಿಎಂ ಇಲಾಖೆ ಅಧಿಕಾರಿ ಕೆ.ವಿ.ಸುರೇಶ್, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ವ್ಯವಸ್ಥಾಪಕರಾದ ನಾಗೇಂದ್ರ, ಉಪ ಪೊಲೀಸ್ ವರಿಷ್ಠಾಧಿಕಾರಿ ಸುಂದರ್‍ರಾಜ್, ಆಹಾರ ಇಲಾಖೆ ಉಪ ನಿರ್ದೇಶಕರಾದ ಪುಟ್ಟಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಭಾಗ್ಯ, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಸಿ. ಜಗನಾಥ್, ನಗರಾಭಿವೃದ್ಧಿ ಕೋಶದ ಎಂಜಿನಿಯರ್ ಸ್ವಾಮಿ ಇತರರು ಹಲವು ಮಾಹಿತಿ ನೀಡಿದರು. ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News