×
Ad

ಮಂಡ್ಯ: ಸಾಲ ನೀಡಲು ಒತ್ತಾಯಿಸಿ ಲೀಡ್‍ಬ್ಯಾಂಕ್‍ಗೆ ರೈತರ ಮುತ್ತಿಗೆ

Update: 2018-02-03 23:00 IST

ಮಂಡ್ಯ, ಫೆ.3: ಸಾಲ ನೀಡಿ, ಇಲ್ಲವೇ ಜೈಲಿಗೆ ಕಳುಹಿಸಿ ಎಂದು ಒತ್ತಾಯಿಸಿದ ರೈತಸಂಘದ ಕಾರ್ಯಕರ್ತರು, ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ನೇತೃತ್ವದಲ್ಲಿ ಶನಿವಾರ ನಗರದ ಲೀಡ್‍ಬ್ಯಾಂಕ್‍ಗೆ ಮುತ್ತಿಗೆ ಹಾಕಿದರು.

ಹಿಂಗಾರು ಬೆಳೆಗೆ ನೀರು ಬಿಡಲಾಗಿದ್ದು, ಬಿತ್ತನೆ ಬೀಜ ವಿತರಿಸಲು ಜಿಲ್ಲಾಡಳಿತ ಸಜ್ಜುಗೊಂಡಿದೆ. ಆದರೆ, ರೈತರು ಕೃಷಿ ಚಟುವಟಿಕೆ ಪ್ರಾರಂಭಿಸಲು ಆರ್ಥಿಕ ತೊಂದರೆ ಇದೆ ಎಂದು  ಹೇಳಿದರು.

ಈಗಾಗಲೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಹಲವು ಬಾರಿ ನಡೆದ ಸಭೆಯಲ್ಲಿ ರಿಸರ್ವ್ ಬ್ಯಾಂಕ್ ನಿರ್ದೇಶನದಂತೆ ಕೃಷಿ ಚಟುವಟಿಕೆಗೆ ಸಾಲ ನೀಡಲು ಸೂಚಿಸಿದ್ದರೂ, ಬ್ಯಾಂಕ್‍ಗಳು ಪಾಲಿಸುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಸತತ ಬರಗಾಲದಿಂದ ಜಿಲ್ಲೆಯಲ್ಲಿ ಒಂದು ಹಿಂಗಾರು, ಎರಡು ಮುಂಗಾರು ಬೆಳೆ ಕಳೆದುಕೊಂಡಿದ್ದೇವೆ. ಈಗಲಾದರೂ ಕೃಷಿ ಚಟುವಟಿಕೆಗೆ ಸಾಲ ನೀಡಲು ಬ್ಯಾಂಕ್‍ಗಳು ಮುಂದೆ ಬರುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಕೃಷಿ ಚಟುವಟಿಕೆಗೆ ಸಾಲ ವಿತರಿಸಲು ಕ್ರಮವಹಿಸಬೇಕು. ರೈತರ ಆಭರಣಗಳನ್ನು ಹರಾಜು ಹಾಕಬಾರದು ಎಂದು ಆಗ್ರಹಿಸಿದ ರೈತರು, ಅಲ್ಲಿವರೆಗೂ ಕದಲುವುದಿಲ್ಲವೆಂದು ಪಟ್ಟುಹಿಡಿದರು. ಈ ಸಂಬಂಧ ಮೇಲಾಧಿಕಾರಿಗಳ ಜತೆ ಚರ್ಚಿಸಿ ರೈತರ ಬೇಡಿಕೆಗೆ ಸ್ಪಂದಿಸುವುದಾಗಿ ಬ್ಯಾಂಕ್ ಹಿರಿಯ ಅಧಿಕಾರಿಗಳು ಭರವಸೆ ನೀಡಿದ ನಂತರ, ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ರಾಮಕೃಷ್ಣಯ್ಯ, ಲತಾ ಶಂಕರ್, ಶಂಭೂನಹಳ್ಳಿ ಸುರೇಶ್, ಬಿ.ಬೊಮ್ಮೇಗೌಡ, ಗದ್ದೇನಿಂಗೇಗೌಡ, ಜಿ.ಎಸ್.ಲಿಂಗಪ್ಪಾಜಿ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್ ಸೇರಿದಂತೆ ಹಲವು ಮುಖಂಡರು ಮುತ್ತಿಗೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News