ಪ್ರತಿ ಗಂಟೆಗೆ 2 ಲಕ್ಷ ರೂ. ಬ್ಯಾಂಕಿಂಗ್ ವಂಚನೆ: ಕನ್ನಡಿಗರಿಗೆ ಶಾಕಿಂಗ್ ನ್ಯೂಸ್

Update: 2018-02-04 05:58 GMT

ಬೆಂಗಳೂರು, ಫೆ.4: ಕೇಂದ್ರ ಸರ್ಕಾರ ಡಿಜಿಟಲ್ ವಹಿವಾಟಿಗೆ ಉತ್ತೇಜನ ನೀಡುತ್ತಿರುವುದು ಸೈಬರ್ ಅಪರಾಧಿಗಳ ಪಾಲಿಗೆ ವರದಾನವಾಗಿದೆ. ಕ್ರೆಡಿಟ್ ಕಾರ್ಡ್. ಡೆಬಿಟ್ ಕಾರ್ಡ್ ಮತ್ತು ಇಂಟರ್‌ನೆಟ್ ಮೂಲಕ ಪ್ರತೀ ಗಂಟೆಗೆ ಎರಡು ಲಕ್ಷ ರೂ. ವಂಚಿಸಲಾಗುತ್ತಿದೆ ಎಂಬ ಆತಂಕಕಾರಿ ಅಂಶ ಬಹಿರಂಗವಾಗಿದೆ. ಸೈಬರ್ ಹಣಕಾಸು ವಂಚನೆಯಲ್ಲಿ ಹಣ ಕಳೆದುಕೊಂಡ ರಾಜ್ಯಗಳ ಪೈಕಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ.

ಸೈಬರ್ ಹಣಕಾಸು ವಂಚನೆ ತಡೆಗೆ ಎಲ್ಲ ಪ್ರಯತ್ನಗಳು ನಡೆದಿರುವ ಮಧ್ಯೆಯೇ, ದೇಶಾದ್ಯಂತ 2017ರಲ್ಲಿ 178 ಕೋಟಿ ರೂಪಾಯಿಗಳನ್ನು ಸೈಬರ್ ವಂಚಕರು ಕದ್ದಿರುವುದು ಬೆಳಕಿಗೆ ಬಂದಿದೆ. ಇದುವರೆಗೆ ನಡೆದಿರುವ ಬ್ಯಾಂಕಿಂಗ್ ವಂಚನೆಗಳಲ್ಲಿ ವರ್ಷವೊಂದರಲ್ಲಿ ಗರಿಷ್ಠ ವಂಚನೆ ಇದಾಗಿದೆ. ದಿನಕ್ಕೆ 48 ಲಕ್ಷ ರೂಪಾಯಿಗಳನ್ನು ಹೀಗೆ ವಂಚಿಸಲಾಗುತ್ತಿದೆ ಎನ್ನುವುದು ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಂಕಿಅಂಶಗಳಿಂದ ತಿಳಿದುಬಂದಿದೆ. 2017ರ ಡಿಸೆಂಬರ್ 21ರವರೆಗೆ ಸಚಿವಾಲಯಕ್ಕೆ ಬ್ಯಾಂಕುಗಳು ಸಲ್ಲಿಸಿದ ವಂಚನೆ ಮತ್ತು ಹಣ ದುರುಪಯೋಗ ಕುರಿತ ವರದಿಯನ್ನು ಕ್ರೋಢೀಕರಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.

ಆರ್‌ಬಿಐ ವರದಿಯ ಪ್ರಕಾರ, ಸೈಬರ್ ಹಣಕಾಸು ಅಪರಾಧಗಳಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಈ ಸಂಬಂಧ 2016-17ರಲ್ಲಿ ಒಟ್ಟು 221 ಪ್ರಕರಣಗಳು ದಾಖಲಾಗಿದ್ದು, 9.16 ಕೋಟಿ ರೂ. ವಂಚನೆಯಾಗಿದೆ. 12.10 ಕೋಟಿ ರೂ. ವಂಚನೆ ನಡೆದಿರುವ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಈ ವರದಿ ಒಂದು ಲಕ್ಷ ರೂಪಾಯಿಗಿಂತ ಅಧಿಕ ಕಳೆದುಕೊಂಡ ಪ್ರಕರಣಗಳನ್ನು ಮಾತ್ರ ಉಲ್ಲೇಖಿಸಿದ್ದು, ಕಡಿಮೆ ಮೊತ್ತದ ವಂಚನೆಗಳು ಇದರಲ್ಲಿ ಸೇರಿಲ್ಲ.

ಕಳೆದ ಒಂದು ತಿಂಗಳಲ್ಲೇ ಬೆಂಗಳೂರು ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಇಂಥ 250 ಪ್ರಕರಣಗಳು ದಾಖಲಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News