ಮಾನವೀಯತೆ ಮರೆಯಾಗಲು ನಾವು ಮಕ್ಕಳನ್ನು ಬೆಳೆಸುತ್ತಿರುವ ರೀತಿ ಮೂಲ ಕಾರಣ: ಡಿ.ಕೆ.ತಾರದೇವಿ
ಚಿಕ್ಕಮಗಳೂರು, ಫೆ.4: ಮನುಷ್ಯ ಮನುಷ್ಯರ ನಡುವೆ ಇಂದು ಪ್ರೀತಿ, ವಿಶ್ವಾಸ, ಅನುಕಂಪ, ಕರುಣೆ, ಸಂಬಂಧ, ಮಾನವೀಯತೆ ಮರೆಯಾಗುತ್ತಿರುವುದಕ್ಕೆ ನಾವು ಮಕ್ಕಳನ್ನು ಬೆಳೆಸುತ್ತಿರುವ ರೀತಿ ಮೂಲ ಕಾರಣ ಎಂದು ಕೇಂದ್ರದ ಮಾಜಿ ಸಚಿವೆ ಡಿ.ಕೆ.ತಾರಾದೇವಿ ಹೇಳಿದ್ದಾರೆ.
ಅವರು ಭಾನುವಾರ ನಗರದ ಶ್ರೀ ಬೋಳರಾಮೇಶ್ವರ ದೇವಾಲಯದ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ತಾಲೂಕು ಘಟಕ ಮತ್ತು ಜಿಲ್ಲಾ ಜನಜಾಗೃತಿ ವೇದಿಕೆ ಏರ್ಪಡಿಸಿದ್ದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಇಂದು ಕೂಡು ಕುಟುಂಬಗಳಿಲ್ಲ, ಮನೆಯಲ್ಲಿ ಹೆತ್ತವರು ಮಕ್ಕಳನ್ನು ಕೇವಲ ಅಂಕ ಗಳಿಸುವ ಯಂತ್ರಗಳನ್ನಾಗಿ ಮಾತ್ರ ಮಾಡುತ್ತಿದ್ದಾರೆ. ಅವರಲ್ಲಿ ಪ್ರೀತಿ, ವಿಶ್ವಾಸ, ಅನುಕಂಪ, ಮಾನವೀಯ ಮೌಲ್ಯಗಳು ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಕಲಿಸುತ್ತಿಲ್ಲ ಎಂದು ನುಡಿದರು.
ಇದರಿಂದಾಗಿ ಇಂದಿನ ಯುವಜನತೆ ಸಮಾಜ ಘಾತಕರಾಗಿ ಬೆಳೆಯುತ್ತಿದ್ದಾರೆ. ಪ್ರೀತಿ, ವಿಶ್ವಾಸ, ಕರುಣೆ, ಮಾನವೀಯ ಮೌಲ್ಯಗಳು ಸಮಾಜದಲ್ಲಿ ಮರೆಯಾಗಿವೆ, ದಾಂಪತ್ಯದಲ್ಲಿ, ಸಂಬಂಧಗಳಲ್ಲಿ ಬಿರುಕು ಉಂಟಾಗುತ್ತಿವೆ, ಹೆತ್ತವರನ್ನು ವೃದ್ದಾಶ್ರಮಕ್ಕೆ ಅಟ್ಟುವ ಪರಿಪಾಠ ದಿನೇದಿನೇ ಹೆಚ್ಚುತ್ತಿದೆ. ಹೆತ್ತವರು ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ತಮ್ಮ ಮಕ್ಕಳನ್ನು ಎಳೆ ವಯಸ್ಸಿನಲ್ಲೇ ತಿದ್ದಬೇಕು. ಅವರಲ್ಲಿ ಪ್ರೀತಿ, ವಿಶ್ವಾಸ, ಕರುಣೆ, ಮಾನವೀಯ ಮೌಲ್ಯಗಳು, ಸಂಸ್ಕೃತಿ, ಸಂಸ್ಕಾರವನ್ನು ಬೆಳೆಸಬೇಕು ಎಂದರು.
ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಪ್ರಶಾಂತ್ ಚಿಪ್ರಗುತ್ತಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸದಸ್ಯರು ತಮ್ಮ ನಡೆ ನುಡಿಯ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.
ಯೋಜನೆಯ ಜಿಲ್ಲಾ ನಿರ್ದೇಶಕಿ ಗೀತಾ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕಳೆದ 11 ವರ್ಷಗಳಲ್ಲಿ ಜಿಲ್ಲೆಯಲ್ಲಿ 8 ಲಕ್ಷಕ್ಕೂ ಅಧಿಕ ಮಹಿಳೆಯರಿಗೆ ಆರ್ಥಿಕ ಸಹಾಯ ಒದಗಿಸುವ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಿದೆ. ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಜೊತೆಗೆ ಸಮಾಜದಲ್ಲಿ ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬೆಳೆಸಲಾಗುತ್ತಿದೆ. ಸ್ವಚ್ಚತೆ ಮತ್ತು ಸಮಾಜ ಸುಧಾರಣೆಗಾಗಿ ಈ ಸಂಸ್ಥೆ ದುಡಿಯುತ್ತಿದೆ ಎಂದು ಹೇಳಿದರು.
ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ನಿಕಟ ಪೂರ್ವ ಪದಾಧಿಕಾರಿಗಳು ನೂತನ ಪದಾಧಿಕಾರಿಗಳಿಗೆ ಅಧಿಕಾರವನ್ನು ಹಸ್ತಾಂತರಿಸಿದರು. ನಂತರ ನೂತನ ಪದಾಧಿಕಾರಿಗಳಿಂದ ಪದಗ್ರಹಣ ನೆರವೇರಿತು. ಇದೇ ವೇಳೆ ಲೋಕಕಲ್ಯಾಣಾರ್ಥವಾಗಿ ಶ್ರೀ ಬೋಳರಾಮೇಶ್ವರ ಸ್ವಾಮಿಗೆ, ಹಾಗೂ ಶ್ರೀ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಮಾತೃ ಪೂಜೆ ನೆರವೇರಿಸಲಾಯಿತು.
ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ತೇಗೂರು ಜಗಧೀಶ್ ಅಧ್ಯಕ್ಷತೆ ವಹಿಸಿದ್ದರು, ನಿರ್ದೇಶಕ ಶ್ರೀದೇವಿ ಮೋಹನ್, ಮಲ್ಲೇಶ್ ಕೋಟೆ, ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಬೇಬಿ, ಮೇಲ್ವಿಚಾರಕ ಎಸ್.ಶಿವಣ್ಣ ಉಪಸ್ಥಿತರಿದ್ದರು.
‘ನಮ್ಮ ಹಿರಿಯರ ಕಾಲದಲ್ಲಿ ಕೂಡು ಕುಟುಂಬಗಳಿದ್ದವು. ಅಲ್ಲಿ ಅಜ್ಜ ಅಜ್ಜಿ, ಚಿಕ್ಕಪ್ಪ ಚಿಕ್ಕಮ್ಮ, ಅತ್ತೆ, ಮಾವ ಸೇರಿದಂತೆ ಅನೇಕ ಭಾಂದವ್ಯಗಳಿರುತ್ತಿದ್ದವು. ಮಕ್ಕಳಿಗೆ ಎಳೆಯ ವಯಸ್ಸಿನಲ್ಲೇ ಶಿಕ್ಷಣದ ಜೊತೆಜೊತೆಗೆ ಹಿರಿಯರು ಪ್ರೀತಿ, ವಿಶ್ವಾಸ, ಮಾನವೀಯ ಮೌಲ್ಯಗಳು, ಕರುಣೆ, ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಕಲಿಸುತ್ತಿದ್ದರು. ಇದರಿಂದಾಗಿ ಮನುಷ್ಯ ಮನುಷ್ಯರ ನಡುವೆ ಅಂದು ಪ್ರೀತಿ, ವಿಶ್ವಾಸ ನೆಲೆಸಿದ್ದವು’
- ಡಿ.ಕೆ.ತಾರದೇವಿ ಸಿದ್ದಾರ್ಥ, ಕೇಂದ್ರ ಮಾಜಿ ಸಚಿವೆ