ಮೂಡಿಗೆರೆ: ನಾಪತ್ತೆಯಾಗಿದ್ದ ಯುವಕರ ಶವ ಕೆರೆಯಲ್ಲಿ ಪತ್ತೆ
ಮೂಡಿಗೆರೆ, ಫೆ.4: ಶನಿವಾರ ಮಧ್ಯಾಹ್ನ ನಾಪತ್ತೆಯಾಗಿದ್ದ ಹದಿಹರೆಯದ ಬಾಲಕನ ಸಹಿತ ಯುವಕನ ಶವ ಬಣಕಲ್ ಬಳಿಯ ಮಾವಿನಗೂಡು ಕಬ್ಬಿನಗದ್ದೆ ಎಂಬಲ್ಲಿ ಕೆರೆಯೊಂದರಲ್ಲಿ ಪತ್ತೆಯಾಗಿದೆ.
ಕೆರೆಯಲ್ಲಿ ಪತ್ತೆಯಾದವರ ಶವವನ್ನು ಸಮೀಪದ ಬಾನಳ್ಳಿ ಗ್ರಾಮದ ರಮೇಶ್ (30), ಸಂದೇಶ್(14) ಎಂದು ಗುರುತಿಸಲಾಗಿದೆ. ಈ ಇಬ್ಬರು ಕೆರೆಯ ನೀರಿನಲ್ಲಿ ಮುಳಗಿ ಮೃತಪಟ್ಟಿದ್ದಾರೆ. ಕೆರೆ ನೀರಿಗೆ ಬಿದ್ದಿದ್ದ ಕ್ಯಾನ್ ತೆಗೆಯಲು ಹೋದಾಗ ಘಟನೆ ನಡೆದಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ನೀರಿನ ಕ್ಯಾನ್ ತೆಗೆಯಲು ಓರ್ವ ಕೆರೆಗೆ ಇಳಿದು ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ಇನ್ನೊಬ್ಬ ಆತನ ರಕ್ಷಣೆಗೆ ಇಳಿದು ಜೀವ ಕಳೆದುಕೊಂಡಿರುವ ಶಂಕೆ ಸ್ಥಳೀಯರಿಂದ ವ್ಯಕ್ತವಾಗಿದೆ.
ಶನಿವಾರ ಮಧ್ಯಾಹ್ನದಿಂದ ಈ ಇಬ್ಬರು ನಾಪತ್ತೆಯಾಗಿದ್ದರು. ಪೋಷಕರು ಅವರ ಹುಡುಕಾಟದಲ್ಲಿ ತೊಡಗಿದ್ದಾಗ ಮಾವಿನಗೂಡು ಕಬ್ಬಿನಗದ್ದೆ ಎಂಬಲ್ಲಿ ಕೆರೆಯ ಏರಿ ಮೇಲೆ ಯುವಕನೊಬ್ಬನ ಚಪ್ಪಲಿಯು ಇಂದು ಬೆಳಿಗ್ಗೆ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕೆರೆಯಲ್ಲಿ ಶೋಧ ಕಾರ್ಯ ನಡೆಸಲಾಗಿತ್ತು.
ಈ ವೇಳೆ ಯುವಕರಿಬ್ಬರ ಶವವು ಕೆರೆಯಲ್ಲಿ ಪತ್ತೆಯಾಗಿದೆ.
ಈ ಘಟನೆ ಕುರಿತು ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.