×
Ad

ಚದುರಂಗದಾಟದ ಬಗ್ಗೆ ತಿಳಿದಿದ್ದರೆ ಜೀವನದಲ್ಲಿ ಮುಂದೆ ಸಾಗಲು ಸಾಧ್ಯ: ಬಿ.ಬಿ.ನಿಂಗಯ್ಯ

Update: 2018-02-04 19:03 IST

ಮೂಡಿಗೆರೆ, ಫೆ.4: ಅಪ್ಪಟ ಭಾರತೀಯರ ಚದುರಂಗವೆಂಬ ಬುದ್ಧಿವಂತರ ಆಟ, ಹಿಂದಿನ ಮಹಾರಾಜರ ಕಾಲದಿಂದಲೂ ದೇಶದ ಪರಂಪರೆ ಎತ್ತಿ ಹಿಡಿದು, ಗೆಲುವು ಪಡೆದಾಗ ರಾಜ್ಯವನ್ನೇ ಗೆದ್ದ ಅನುಭವಕ್ಕೆ ಮುನ್ನುಡಿ ಬರೆಯುವ ದೇಶಿ ಆಟವಾಗಿದೆ ಎಂದು ಶಾಸಕ ಬಿ.ಬಿ.ನಿಂಗಯ್ಯ ಅಭಿಪ್ರಾಯಪಟ್ಟರು. 

ಅವರು ರವಿವಾರ ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಮಾಂಗಲ್ಯ ಮಂಟಪದಲ್ಲಿ ಜಿಲ್ಲಾ ಚೆಸ್ ಅಸೋಸಿಯೇಷನ್, ಜಿಲ್ಲಾ ಮತ್ತು ತಾಲೂಕು ಪತ್ರಕರ್ತರ ಸಂಘ, ಯುವಜನ ಮತ್ತು ಕ್ರೀಡಾ ಇಲಾಖೆ ಸಹಯೋಗದಿಂದ ಎರಡು ದಿನ ನಡೆದ ರಾಜ್ಯಮಟ್ಟದ ಚೆಸ್ ಪಂದ್ಯಾವಳಿಯ ಸಮಾರೋಪದಲ್ಲಿ ಮಾತನಾಡಿದರು. 

ವಿಶ್ವದ ಗಮನ ಸೆಳೆದಿರುವ ಕಳಸ ಹೋಬಳಿಯ ಪವಿತ್ರ ಕ್ಷೇತ್ರ ಹೊರನಾಡಿನಲ್ಲಿ ಪಂದ್ಯಾವಳಿ ಆಯೋಜಿಸಿರುವುದು, ಕಳಸ ಹೋಬಳಿಯನ್ನು ತಾಲೂಕು ಕೇಂದ್ರವಾಗಿ ಸರಕಾರ ಘೋಷಿಸಲು ಈ ಭಾಗದಿಂದ ಪ್ರಭಲವಾದ ಒತ್ತಡ ಹೇರಲು ಅನುಕೂಲಕರವಾದ ವಾತಾವರಣವಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಪ್ರಭಾವಿ ಆಟಗಾರರು ಕಳಸ ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿ ಮಾಡಲು ಸರಕಾರಕ್ಕೆ ಒತ್ತಾಯ ಸಲ್ಲಿಸಬೇಕಾಗಿದೆ ಎಂದು ತಿಳಿಸಿದರು. 

ವಿಜೇತರಿಗೆ ಬಹುಮಾನ ವಿತರಿಸಿ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತ ಡಾ.ಜಿ.ಭೀಮೇಶ್ವರ ಜೋಷಿ ಮಾತನಾಡಿ, 4 ವರ್ಷದ ಮಗು 75 ವಯಸ್ಸಿನ ಪ್ರತಿಸ್ಪರ್ಧಿಯೊಂದಿಗೆ ಚದುರಂಗದಾಟದಲ್ಲಿ ಸೆಣಸಾಡುತ್ತಿದಿದ್ದು, ನೋಡಿದಾಗ ಆಟಕ್ಕೆ ವಯಸ್ಸಿನ ಅಂತರವಿಲ್ಲ ಎಂಬುದು ಖಾತ್ರಿಯಾಗುತ್ತದೆ. ಈ ಚದುರಂಗದಾಟಕ್ಕೂ ಜೀವನದ ಅಂತರಂಗಕ್ಕೂ ವ್ಯತ್ಯಾಸವೇನಿಲ್ಲ. ಜೀವನ ಪದ್ಧತಿಗೆ ಚೈತನ್ಯ ತುಂಬಬಲ್ಲ ಬುದ್ಧಿವಂತಿಕೆಯ ಆಟವಾಗಿದೆ. ಈ ಪಂದ್ಯಾವಳಿಯನ್ನು ತಮ್ಮ ಕ್ಷೇತ್ರದಲ್ಲಿ ಆಯೋಜಿಸಿರುವುದು ಸಂತಸ ತಂದಿದೆ ಎಂದು ತಿಳಿಸಿದರು. 

ಸಮಾರೋಪದ ಅಧ್ಯಕ್ಷತೆಯನ್ನು ಜಿಲ್ಲಾ ಚೆಸ್ ಅಸೋಸಿಯೇಷನ್ ಅಧ್ಯಕ್ಷ ನಯನ ತಳವಾರ ವಹಿಸಿದ್ದರು. ಡಾ.ಜಿ.ಭೀಮೇಶ್ವರ ಜೋಷಿ ಅವರ ಧರ್ಮಪತ್ನಿ ರಾಜಲಕ್ಷ್ಮಿಜೋಷಿ, ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ನಯನ, ಮಾಜಿ ಜಿಪಂ ಸದಸ್ಯೆ ಆಶಾಲತಾ ಜೈನ್, ಅಂತರ್ ರಾಷ್ಟ್ರೀಯ ತೀರ್ಪುಗಾರ ವಸಂತ್, ಗಿರೀಶ್ ಜನ್ನಾಪುರ, ಪತ್ರಕರ್ತರಾದ ಪ್ರಸನ್ನ ಗೌಡಹಳ್ಳಿ, ಸುಧೀರ್, ಅಬ್ಬಾಸ್ ಕಿರುಗುಂದ, ಉದಯಶಂಕರ್, ಆನಂದ್, ಶಿವಕಾಶಿ ನಾಗೇಶ್ ಹೆಬ್ಬಾರ್, ಸಂತೋಷ್, ರಫೀಕ್ ಕಿರುಗುಂದ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News