ಚಾಮರಾಜನಗರ ಶಾಸಕರಿಂದ ತಾಲೂಕು ಪಂಚಾಯತ್ ಉಪಾಧ್ಯಕ್ಷರಿಗೆ ಜೀವ ಬೆದರಿಕೆ: ಆರೋಪ

Update: 2018-02-04 14:47 GMT

ಚಾಮರಾಜನಗರ,ಫೆ.04: ಮುಖ್ಯಮಂತ್ರಿ ಭಾಷಣಕ್ಕೆ ಅಡ್ಡಿ ಪಡಿಸಿದ್ದ ಬಿಜೆಪಿ ಪಕ್ಷದ ತಾಲೂಕು ಪಂಚಾಯತ್ ಉಪಾಧ್ಯಕ್ಷರಿಗೆ ಶಾಸಕರೊಬ್ಬರು ಬೆದರಿಕೆ ಹಾಕಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಚಾಮರಾಜನಗರ ತಾಲೂಕು ಪಂಚಾಯತ್ ಉಪಾಧ್ಯಕ್ಷ ಬಿಜೆಪಿಯ ದಯಾನಿಧಿರವರಿಗೆ ಶನಿವಾರ ಸಂಜೆ ತಾಲೂಕು ಪಂಚಾಯತ್ ಆವರಣದಲ್ಲಿ ಕ್ಷೇತ್ರದ ಶಾಸಕ ಸಿ. ಪುಟ್ಟರಂಗಶೆಟ್ಟಿ, ನಿನ್ನ ಮುಗಿಸೋದು ಹೇಗೆ ಅಂತ ಗೊತ್ತಿದೆ ಎಂದು ಬೆದರಿಕೆ ಹಾಕಿದ ಪ್ರಕರಣದ ವೀಡಿಯೋ ಇದೀಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.

ಶನಿವಾರ ಚಾಮರಾಜನಗರ ತಾಲೂಕು ಪಂಚಾಯತ್ ಆವರಣದಲ್ಲಿ ರಾಜೀವ್‍ಗಾಂಧಿ ಸೇವಾ ಕೇಂದ್ರದ ಉದ್ಘಾಟನಾ ಸಮಾರಂಭದ ಬಳಿಕ ಶಾಸಕ ಸಿ.ಪುಟ್ಟರಂಗಶೆಟ್ಟಿ ತಾಲೂಕು ಪಂಚಾಯತ್ ಉಪಾಧ್ಯಕ್ಷ ದಯಾನಿಧಿಯವರನ್ನು ಉದ್ದೇಶಿಸಿ, ಮುಖ್ಯಮಂತ್ರಿಗಳ ಭಾಷಣಕ್ಕೆ ಅಡ್ಡಿ ಪಡಿಸುತ್ತೀಯಾ, ನನ್ನ ವಿರುದ್ದವಾಗಿ ಗ್ರಾಮ ಪಂಚಾಯತ್ ಸದಸ್ಯರ ಮೂಲಕ ಹೇಳಿಕೆ ಕೊಡಿಸ್ತೀಯಾ, ಇದಕ್ಕೆಲ್ಲಾ ನೀನೇ ಕಾರಣ, ನಿನ್ನ ಹೇಗೆ ಮುಗಿಸಬೇಕು ಎಂಬುದು ನನಗೆ ಗೊತ್ತು ಎಂದು ಬೆದರಿಕೆ ಹಾಕಿದ್ದಾಗಿ ತಿಳಿದು ಬಂದಿದೆ.

ಶಾಸಕರ ಬೆದರಿಕೆ ಬಗ್ಗೆ ದಯಾನಿಧಿ ಸ್ಥಳದಲ್ಲೇ, ಮೋಟರ್ ಕಳ್ಳತನ, ಇಸ್ಟೀಟ್ ಆಡುವ ನಿಮ್ಮ ಬಗ್ಗೆ ಜನತೆಗೆ ಗೊತ್ತಾಗಿದೆ ಎಂದು ತಿರುಗೇಟು ನೀಡಿದರು.

ನಂತರ ದಯಾನಿಧಿ ತಮ್ಮ ಬೆಂಬಲಿಗರೊಂದಿಗೆ ನೇರವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧಮೇಂದ್ರ ಕುಮಾರ್‍ರವರನ್ನು ಭೇಟಿ ಮಾಡಿ, ಶಾಸಕ ಸಿ.ಪುಟ್ಟರಂಗಶೆಟ್ಟಿರವರಿಂದ ನನಗೆ ಪ್ರಾಣ ಬೆದರಿಕೆ ಇದೆ ಎಂದು ದೂರು ನೀಡಿದರು.

ಬಳಿಕ ಮಾತನಾಡಿದ ಧಯಾನಿಧಿ, ನಾನು ಪ್ರತಿನಿಧಿಸುವ ನಾಗವಳ್ಳಿ ಕ್ಷೇತ್ರದಲ್ಲಿ ಜನವರಿ 10 ರಂದು ಸಿದ್ದರಾಮಯ್ಯರವರು ಸರ್ಕಾರದ ಸಾಧನಾ ಸಮಾವೇಶದಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರ ಮೇಲೆ ವಾಗ್ದಾಳಿ ನಡೆಸುವಾಗ, ನಾನು ಬಿಜೆಪಿ ಪಕ್ಷದ ಜನಪ್ರತಿನಿಧಿಯಾಗಿ ವೇದಿಕೆಯಲ್ಲೇ ಪ್ರತಿಭಟಿಸಿದೆ. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡ ಶಾಸಕ ಸಿ.ಪುಟ್ಟರಂಗ ಶೆಟ್ಟಿರವರು ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News