ಎಷ್ಟೇ ಸಂಪತ್ತು, ಆಸ್ತಿ ಇದ್ದರೂ ಮಾನವೀಯತೆ ಇಲ್ಲದಿದ್ದರೆ ಎಲ್ಲವೂ ವ್ಯರ್ಥ: ವಜುಭಾಯಿ ವಾಲಾ

Update: 2018-02-04 15:49 GMT

ದಾವಣಗೆರೆ,ಫೆ.04 :ಪ್ರತಿಯೊಬ್ಬರ ಮನೋಮಂದಿರದಲ್ಲಿ ಮಾನವೀಯತೆ ಸದಾ ನೆಲೆಯಾಗಿರಬೇಕು. ವಸುದೈವ ಕುಟುಂಬಕಂ ಎನ್ನುವಂತೆ ಒಂದೇ ಕುಟುಂದವರಂತೆ ನಾವೆಲ್ಲ ಬಾಳಬೇಕೆಂದು ರಾಜ್ಯಪಾಲ ವಜುಭಾಯಿ ರುಡಾಭಾಯಿ ವಾಲಾ ಹೇಳಿದರು.

ಹರಿಹರ ತಾಲೂಕಿನ ಮಲೇಬೆನ್ನೂರಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಮಲೇಬೆನ್ನೂರಿನಲ್ಲಿ ನಿರ್ಮಿಸಲಾಗಿರುವ ರಾಜಯೋಗ ಭವನವನ್ನು ಉದ್ಘಾಟಿಸಿ, ನೀರಾವರಿ ಇಲಾಖೆ ಆವರಣದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಜಾಪಿತ ಬ್ರಹ್ಮಕುಮಾರಿಯರು ರಾಷ್ಟ್ರಾದ್ಯಂತ ಶಾಂತಿ ಸ್ಥಾಪನೆಗಾಗಿ ಕೆಲಸ ಮಾಡುತ್ತಿದ್ದಾರೆ. ಪ್ರತಿ ಮನೆಯನ್ನು ಮಂದಿರ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ. ಪ್ರತಿ ಹೃದಯಗಳಲ್ಲಿ ಆಧ್ಯಾತ್ಮಿಕತೆಯ ಹಣತೆ ಹಚ್ಚುವ ಕೆಲಸ ಅವರು ಮಾಡುತ್ತಿದ್ದಾರೆ. ಇದಕ್ಕೆ ಯಾವ ಜಾತಿ, ಧರ್ಮ ಬೇಧವಿಲ್ಲ. ಎಲ್ಲರೂ ಮಾನವರು. ಎಲ್ಲರಲ್ಲಿಯೂ ಮಾನವೀಯತೆ, ಸಂಸ್ಕಾರ ಇರಬೇಕು. ನಮ್ಮಲ್ಲಿ ಎಷ್ಟೇ ಸಂಪತ್ತು-ಆಸ್ತಿ ಇದ್ದು, ಮಾನವೀಯತೆ ಇಲ್ಲದ ಮೇಲೆ ಎಲ್ಲವೂ ವ್ಯರ್ಥ. ಉತ್ತಮ ದಾರಿ, ಮಾರ್ಗದರ್ಶನ, ಸಿದ್ದಾಂತಗಳು ಎಲ್ಲರಿಗೂ ಅವಶ್ಯಕ. ನಮ್ಮದು ವಸುದೈವ ಕುಟುಂಬಕಂ. ನಾವೆಲ್ಲಾ ಒಂದೇ ಕುಟುಂಬ ಎನ್ನುವಂತಿರುವುದು ನಮ್ಮ ಧರ್ಮ. ಸತ್ಯ, ನೀತಿಯಿಂದ ನಡೆಯುವುದೇ ಧರ್ಮ ಎಂದು ಹೇಳಿದರು.

ಎಷ್ಟೇ ಜ್ಞಾನವಿದ್ದರೂ ಕರ್ಮದಲ್ಲಿ ಅದು ಜಾರಿಯಾಗದಿದ್ದರೆ ವ್ಯರ್ಥ. ಹಸಿದವರಿಗೆ ಅನ್ನ ಹಾಕದಿದ್ದರೆ ಅದು ಸಂಸ್ಕೃತಿ ಅಲ್ಲ. ವಿಶ್ವದಲ್ಲೇ ಭಾರತೀಯ ಸಂತರನ್ನು ಅತಿ ಗೌರವದಿಂದ ಕಾಣಲಾಗುತ್ತದೆ. ಕೃಷ್ಣ ಪರಮಾತ್ಮರು ಭಗವದ್ಗೀತೆಯಲ್ಲಿ ಸಂತರು ಸರಳ ಜನರ ರಕ್ಷಣೆ ಮತ್ತು ದುಷ್ಟರ ಸಂಹಾರ ಮಾಡಬೇಕೆಂದು ಹೇಳುತ್ತಾರೆ. ನಾವು ಯಾರಿಗೂ ಛೇಡಿಸುವುದಿಲ್ಲ, ಆದರೆ ಹಾಗೆ ಮಾಡಿದವರ ಕುರಿತು ಸುಮ್ಮನಿರುವುದಿಲ್ಲವೆಂಬ ಮನಸ್ಥಿತಿ ಇರಬೇಕು. ಕೆಟ್ಟದನ್ನು ಸಹಿಸಿಕೊಳ್ಳುವುದು ಒಳ್ಳೆಯದಲ್ಲ. ಪ್ರಧಾನಿ, ರಾಷ್ಟ್ರಪತಿ, ರಕ್ಷಣಾ ವ್ಯವಸ್ಥೆ ಸೇರಿದಂತೆ ಅತ್ಯುನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಎಲ್ಲಿ ಮಹಿಳೆಯರನ್ನು ಪೂಜನೀಯ ಭಾವನೆಯಿಂದ ನೋಡಲಾಗುತ್ತದೋ ಅಲ್ಲಿ ದೇವರು ನೆಲೆಸಿರುತ್ತಾರೆ ಎಂದರು.

ಸಿರಿಗೆರೆಯ ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಜಗತ್ತಿನ ಹಿತಕ್ಕಾಗಿ ಆಧ್ಯಾತ್ಮಿಕ ನೆಲೆಗಟ್ಟಿನ ಮೇಲೆ ರೂಪಿತಗೊಂಡ ಸಂಸ್ಥೆಯಾಗಿದೆ ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯ. ಪ್ರತಿ ಬ್ರಹ್ಮಕುಮಾರಿಯರು ಒಂದೇ ಕುಟುಂಬದವರಂತೆ ಜಗತ್ತಿಗೇ ಶಾಂತಿ ಮಂತ್ರ ಸಾರುವ ಕೆಲಸ ಮಾಡುತ್ತಿದ್ದಾರೆ. ವೇದೋಪನಿಷತ್ತು ಕಾಲದಿಂದಲೂ ಭಾರತೀಯ ಋಷಿಮುನಿಗಳು ಶಾಂತಿ ಮಂತ್ರ ಸಾರುತ್ತಿದ್ದಾರೆ. ಸಹಬಾಳ್ವೆ ನಮ್ಮ ಧರ್ಮ. ಆದರೂ ಶಾಂತಿ ಮರೀಚಿಕೆಯಾಗಿದೆ. ಕಾರಣ ಮನಸ್ಸು ಹಿಡಿತಕ್ಕೆ ಸಿಗದೆ ಚಂಚಲಿತವಾಗುತ್ತಿರುವುದು. ಮನಸ್ಸಿನ ದಿವ್ಯ ಶಕ್ತಿಯನ್ನು ಒಳ್ಳೆಯ ಕೆಲಸಗಳಿಗೆ ಉಪಯೋಗಿಸಬೇಕು. ಬಂಧನಕ್ಕೊಳಗಾಗುವ ಮನಸ್ಸು ಆಧ್ಯಾತ್ಮಿಕ ಸಾಧನೆ-ಪ್ರಸಾದನೆಗಳಿಂದ ಮುಕ್ತಿಗೂ ಕಾರಣವಾಗುತ್ತದೆ. ಆದರೆ ಈ ನಿಟ್ಟಿನಲ್ಲಿ ಸಾಧನೆ ಮುಖ್ಯ ಎಂದು ನುಡಿದರು.

ಸಚಿವರಾದ ರುದ್ರಪ್ಪ ಮಾನಪ್ಪ ಲಮಾಣಿ ಮಾತನಾಡಿ, 130 ದೇಶಗಳಲ್ಲಿ ಪ್ರಜಾಪತಿ ಬ್ರಹ್ಮಕುಮಾರಿಯರು ಶಾಂತಿ ಸ್ಥಾಪನೆಗಾಗಿ ಶ್ರಮಿಸುತ್ತಿದ್ದಾರೆ. ಗ್ರಾಮ ಗ್ರಾಮಗಳಾದಿಯಾಗಿ ಸಂಚರಿಸಿ ಶಾಂತಿ ಬೋಧನೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಈಶ್ವರೀಯ ವಿಶ್ವವಿದ್ಯಾಲಯದ ಹುಬ್ಬಳ್ಳಿ ಉಪ ವಲಯದ ನಿರ್ದೇಶಕರಾದ ರಾಜಯೋಗಿ ಬ್ರಹ್ಮಕುಮಾರ ಡಾ. ಬಸವರಾಜ ರಾಜಋಷಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಂಡಿದ್ದ ಹರಿಹರ ವಿಧಾನ ಸಭಾ ಕ್ಷೇತ್ರದ ಶಾಸಕ ಹೆಚ್.ಎಸ್. ಶಿವಶಂಕರ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಲೆಬೆನ್ನೂರು ಪುರಸಭಾಧ್ಯಕ್ಷೆ ಅಂಜಿನಮ್ಮ, ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಡಾ.ಭೀಮಾಶಂಕರ್ ಎಸ್. ಗುಳೇದ್ ಹಾಜರಿದ್ದರು.

ಈಶ್ವರೀಯ ವಿವಿ ಹುಬ್ಬಳ್ಳಿ ಸಂಚಾಲಕರಾದ ಬ್ರಹ್ಮಕುಮಾರಿ ನಿರ್ಮಲಾಜಿ ನಿರೂಪಿಸಿದರು. ಸಂಚಾಲಕರಾದ ಬ್ರಹ್ಮಕುಮಾರಿ ವೀಣಾಜಿ ಸಂಸ್ಥೆಯ ಕುರಿತು ಪರಿಚಯಿಸಿದರು. ರಾಜಯೋಗ ಶಿಕ್ಷಕ ಬ್ರಹ್ಮಕುಮಾರಿ ರವಿಕಲಾಜಿ ಈಶ್ವರೀಯ ಸಂದೇಶ ನೀಡಿದರು. ದಾವಣಗೆರೆ ಸಂಚಾಲಕರಾದ ಲೀಲಾಜಿ ಸ್ವಾಗತಿಸಿದರು. ಸಂಚಾಲಕರಾದ ಬ್ರಹ್ಮಕುಮಾರಿ ಮಂಜುಳಾಜಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News