ಶಿವಮೊಗ್ಗ: ಕೊಲೆಗೀಡಾದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಶಿವಮೊಗ್ಗ, ಫೆ. 4: ಜಿಲ್ಲೆಯ ಹೊಸನಗರ ತಾಲೂಕಿನ ಬೈಸೆ ಗ್ರಾಮದ ಹೂಕೊಪ್ಪಲು ಅರಣ್ಯ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯೊರ್ವರ ಶವ ಪತ್ತೆಯಾಗಿದೆ.
ಮೃತ ವ್ಯಕ್ತಿಯ ಹೆಸರು, ವಿಳಾಸ ಸೇರಿದಂತೆ ಇತರೆ ಯಾವುದೇ ಮಾಹಿತಿಗಳು ತಿಳಿದಿಲ್ಲ. ಶವ ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದು, ನಂತರ ಸ್ಥಕ್ಕಾಗಮಿಸಿ ಕೊಳೆತ ಸ್ಥಿತಿಯಲ್ಲಿದ್ದ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ಪ್ರಾವಿಜನಲ್ ವರದಿಯಲ್ಲಿ, ಯಾವುದೋ ಆಯುಧದಿಂದ ಇರಿದು ವ್ಯಕ್ತಿಯ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ವ್ಯಕ್ತಿಯ ಹತ್ಯೆ ಮಾಡಿರುವ ದುಷ್ಕರ್ಮಿಗಳು ಗುರುತು ಸಿಗಬಾರದೆಂಬ ಕಾರಣಕ್ಕಾಗಿ ತಲೆ, ಮುಖ ಹಾಗೂ ಬೆನ್ನಿನ ಭಾಗ ಸುಟ್ಟು ಹಾಕಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಹತ್ಯೆ ಪ್ರಕರಣ ಸಂಪೂರ್ಣ ನಿಗೂಢವಾಗಿದೆ. ಕೊಲೆಗೀಡಾದ ವ್ಯಕ್ತಿ , ಹಂತಕ, ಮತ್ತು ಹತ್ಯೆಗೆ ಕಾರಣವೇನು ಎಂಬುವುದು ಪೊಲೀಸರ ತನಿಖೆಯ ನಂತರವಷ್ಟೆ ತಿಳಿದು ಬರಬೇಕಾಗಿದೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.