×
Ad

ಕೇಂದ್ರ ಸರಕಾರ ಉಳ್ಳವರ ಹಿತ ಕಾಯುತ್ತಿದೆ: ಪ್ರದೀಪ್ ಸಿಂಗ್ ಠಾಕೂರ್

Update: 2018-02-04 22:55 IST

ಮಡಿಕೇರಿ, ಫೆ.4 : ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಜನಸಾಮಾನ್ಯರು ಹಾಗೂ ರೈತರ ಹಿತ ಕಾಯದೆ ಉಳ್ಳವರ ಪರವಾಗಿ ಕೆಲಸ ಮಾಡುತ್ತಿದೆ ಎಂದು ಅಖಿಲ ಭಾರತ  ಕ್ರಾಂತಿಕಾರಿ ಕಿಸಾನ್ ಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಸಿಂಗ್ ಠಾಕೂರ್ ಆರೋಪಿಸಿದ್ದಾರೆ.

ನಗರದ ಕೂರ್ಗ್ ಕಮ್ಯೂನಿಟಿ ಸಭಾಂಗಣದಲ್ಲಿ ನಡೆದ ಅಖಿಲ ಭಾರತ ಕ್ರಾಂತಿಕಾರಿ ಕಿಸಾನ್ ಸಭಾ ಹಾಗೂ ರಾಜ್ಯ ರೈತ ಸಂಘದ ವತಿಯಿಂದ ನಡೆದ ರೈತರ 3ನೇ ರಾಜ್ಯ ಮಟ್ಟದ ಸಮ್ಮೇಳನವನ್ನು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರ ಸರ್ಕಾರ ತನ್ನ ಬಜೆಟ್ ಅನ್ನು ಲೋಕಸಭಾ ಅಧಿವೇಶನದಲ್ಲಿ ಒಮ್ಮತದಿಂದ ಚರ್ಚಿಸದೆ, ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಆರ್ಥಿಕ ಸಂಶೋಧನೆ ನಡೆಸದೆ ತುಘಲಕ್ ಮನೋಭಾವದಿಂದ ಏಕಾಏಕಿಯಾಗಿ ಮಂಡಿಸಿದೆ ಎಂದು ಆರೋಪಿಸಿದರು. ಆದರೆ, ದೇಶದ ರೈತರ ಮತ್ತು ಸಾಮಾನ್ಯ ಜನತೆಯ ಆರ್ಥಿಕ ಪರಿಸ್ಥಿತಿ ಹಾಗೆಯೇ ಉಳಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಸರಕಾರ ಮಂಡಿಸಿದ ಬಜೆಟ್ ಅನ್ನು ರೈತ ಪರ ಬಜೆಟ್ ಎಂದು ಕರೆಯಲಾಗುತ್ತಿದೆ. ಆದರೆ, ಬೆಂಬಲ ಬೆಲೆಯ ಬಗ್ಗೆ, ಸಾಲ ಮನ್ನಾ ಹಾಗೂ ಸಾಲ ವಿತರಣೆಯ ಪ್ರಸ್ತಾಪವೇ ಇಲ್ಲ. ಈ ಬಗ್ಗೆ ದೇಶದ ರೈತರು ಮತ್ತು ಸಾಮಾನ್ಯ ಜನತೆ ಅರ್ಥ ಮಾಡಿಕೊಳ್ಳಬೇಕೆಂದರು.
ಕೃಷಿ ಕ್ಷೇತ್ರದಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದಾಗಿ ಇಂದು ದೇಶದಲ್ಲಿ ಪ್ರತೀ ಅರ್ಧ ಗಂಟೆಗೊಬ್ಬ ರೈತ ಸಾವಿಗೀಡಾಗುತ್ತಿದ್ದು, ಸರಕಾರದ ಅಂಕಿ ಅಂಶಗಳ ಪ್ರಕಾರವೇ 1995ರಿಂದ ಈ ವರೆಗೆ ದೇಶಾದ್ಯಂತ ರೈತರ ಆತ್ಮಹತ್ಯೆಯ ಸಂಖ್ಯೆ 4ಲಕ್ಷಕ್ಕೂ ಅಧಿಕವಾಗಿದೆ. ಸ್ವತಂತ್ರ ಸಂಸ್ಥೆಗಳ ಅಧ್ಯಯನದ ಪ್ರಕಾರ ಇದು 10 ಲಕ್ಷಗಳನ್ನು ದಾಟಿದೆ. ಕರ್ನಾಟಕ ರಾಜ್ಯ ಒಂದರಲ್ಲೇ ಸರಕಾರಿ ದಾಖಲೆಗಳ ಪ್ರಕಾರ ಪ್ರತೀದಿನ ಮೂರು ಮಂದಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದು, ವಿಶ್ವ ವಾಣಿಜ್ಯ ಸಂಸ್ಥೆಯ ಆದೇಶಗಳೇ ಈ ವಿದ್ಯಮಾನಗಳಿಗೆ ನೇರ ಕಾರಣವಾಗಿದೆ ಎಂದು ಆರೋಪಿಸಿದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಂಪೆನಿ, ಕಾರ್ಪೋರೇಟರಿಗೆ ಅನುಕೂಲವಾಗುವಂತಹ ಕೃಷಿ ನೀತಿಗಳನ್ನು ಜಾರಿಗೊಳಿಸುತ್ತಿದ್ದು, 1960ರಲ್ಲಿ ಶೇ.50ಕ್ಕಿಂತ ಹೆಚ್ಚಿನ ರಾಷ್ಟ್ರೀಯ ಆದಾಯ ಕೃಷಿಯಿಂದ ಬರುತ್ತಿದ್ದರೆ, 2013ರ ಸಮೀಕ್ಷೆ ಪ್ರಕಾರ ಕೃಷಿಯ ಆದಾಯ  ಶೇ.13.17ಕ್ಕೆ ಕುಸಿದಿದೆ ಎಂದು ನುಡಿದ ಅವರು, ಶೇ.53.2ರಷ್ಟು ದುಡಿಯುವ ಜನರು ಕೃಷಿಯೊಂದಿಗೆ ನೇರ ಸಂಬಂಧ ಹೊಂದಿದ್ದಾರೆ ಎಂದು ಹೇಳಿದರು.

ಕಿಸಾನ್ ಸಭಾದ ರಾಜ್ಯ ಕಾರ್ಯದರ್ಶಿ ಡಿ.ಎಸ್.ನಿರ್ವಾಣಪ್ಪ ಮಾತನಾಡಿ, ದೇಶ ಮತ್ತು ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಕೇವಲ ಮುಂಬರುವ ಚುನಾವಣೆಯನ್ನು ಮುಂದಿಟ್ಟುಕೊಂಡು ಕೋಟ್ಯಾಂತರ ಹಣ ವೆಚ್ಚ ಮಾಡಿ ಯಾತ್ರೆಗಳನ್ನು ಮಾಡುತ್ತ ಜನರ ದಾರಿ ತಪ್ಪಿಸುತ್ತಿದೆ. ಈ ಪಕ್ಷಗಳಿಗೆ ದೇಶದ ಅಭಿವೃದ್ಧಿ ಬಗ್ಗೆ, ರೈತರ, ವಸತಿಹೀನರ ಬಗ್ಗೆ ಕಿಂಚಿತ್ತೂ ಚಿಂತನೆ ಇಲ್ಲ ಎಂದು ಟೀಕಿಸಿದರು. 

ವೇದಿಕೆಯಲ್ಲಿ ಬಳ್ಳಾರಿ, ರಾಯಚೂರು, ಚಿಕ್ಕಮಗಳೂರು, ಕೊಪ್ಪಳ, ಕೊಡಗು, ಮೈಸೂರು ಜಿಲ್ಲೆಗಳ ಅಧ್ಯಕ್ಷರುಗಳು, ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

ಸಮ್ಮೇಳನದ ಹಿನ್ನೆಲೆಯಲ್ಲಿ ಸಭಾ ಕಾರ್ಯಕ್ರಮಕ್ಕೂ ಮುನ್ನ ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಕೇರಳದ ಅರ್ಥಶಾಸ್ತ್ರಜ್ಞ ಪಿ.ವಿ. ಜೇಮ್ಸ್, ಕೇರಳ ರಾಜ್ಯ ರೈತ ಸಂಘದ ಅಧ್ಯಕ್ಷ ಕುಂಞಕಣ್ಣನ್, ರಾಜ್ಯ ಸಮಿತಿ ಸದಸ್ಯ ಹಾಗೂ ಮೈಸೂರು ಜಿಲ್ಲಾಧ್ಯಕ್ಷ ಕಂದೆಗಾಲ ಶ್ರೀನಿವಾಸ್, ಆದಿವಾಸಿ ಮುಖಂಡ ಬಿ.ಕೆ.ಅಪ್ಪು, ರೈತ ಸಂಘದ ರಾಜ್ಯಾಧ್ಯಕ್ಷ ಡಿ.ಎಸ್.ಪೂಜಾರ, ಜಿಲ್ಲಾಧ್ಯಕ್ಷ ಎಸ್.ಆರ್.ಮಂಜುನಾಥ್, ಕಾರ್ಯದರ್ಶಿ ಕೆ.ಟಿ.ಆನಂದ್, ಪ್ರಮುಖರಾದ ಆರ್. ಮಾನಸಯ್ಯ, ಕೊಪ್ಪಳ ಜಿಲ್ಲೆಯ ರೈತ ಸಂಘದ ಅಧ್ಯಕ್ಷರಾದ ಹೇಮರಾಜು, ಆದಿವಾಸಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಅನಿತ, ಚಿಕ್ಕಮಗಳೂರು ರೈತ ಸಂಘದ ಜಿಲ್ಲಾಧ್ಯಕ್ಷ ಬಸವರಾಜು ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News