ಚಲನಚಿತ್ರ ಹಾಗೂ ರಂಗಭೂಮಿ ಒಂದೇ ನಾಣ್ಯದ ಎರಡು ಮುಖಗಳು: ರಂಗ ನಿರ್ದೇಶಕ ಜಯತೀರ್ಥ

Update: 2018-02-04 17:41 GMT

ಮೈಸೂರು,ಫೆ.4: ಚಲನಚಿತ್ರ ಹಾಗೂ ರಂಗಭೂಮಿ ಒಂದೇ ನಾಣ್ಯದ ಎರಡು ಮುಖಗಳು ಎಂದು ಚಲನಚಿತ್ರ ಹಾಗೂ ರಂಗ ನಿರ್ದೇಶಕ ಜಯತೀರ್ಥ ಅಭಿಪ್ರಾಯಪಟ್ಟರು.

ಕಲಾ ಮಂದಿರದ ಮನೆಯಂಗಳದಲ್ಲಿ ರವಿವಾರ ಆಯೋಜಿಸಿದ್ದ ರಾಷ್ಟ್ರೀಯ ರಂಗೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಚಲನಚಿತ್ರ ರಂಗವು ಡಿಜಿಟಲೀಕರಣಗೊಂಡಿದ್ದು, ಅದನ್ನು ಕುಳಿತಲ್ಲಿಯೇ ವೀಕ್ಷಿಸಬಹುದಾಗಿದೆ. ಆದರೆ ರಂಗಭೂಮಿಯಲ್ಲಿ ಪ್ರದರ್ಶಿತಗೊಳ್ಳುವ ನಾಟಕಗಳನ್ನು ಅವುಗಳು ನಡೆಯುವ ಸ್ಥಳಕ್ಕೆ ಹೋಗಿ ವೀಕ್ಷಿಸಬೇಕು. ಸಿನಿಮಾ ಹಾಗೂ ಟಿವಿ ಮಾದ್ಯಮಗಳು ಸಾಕಷ್ಟು ತಂತ್ರಜ್ಞಾನ ಅಳವಡಿಸಿಕೊಂಡು ಅಭಿವೃದ್ಧಿಯತ್ತ ಸಾಗುತ್ತಿವೆ. ಆದರೆ ರಂಗಭೂಮಿ ಅವನತಿಯತ್ತ ಸಾಗುತ್ತಿದ್ದು, ಹೊಸ ವಿನ್ಯಾಸವನ್ನು ನೀಡಿದಲ್ಲಿ ಆ ರಂಗವು ಸಹ ಚಲನಚಿತ್ರದಷ್ಟೇ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಪರಿಸ್ಥಿತಿ ಹೀಗಿದ್ದರೂ ಜನರು ಚಲನಚಿತ್ರ ಹಾಗೂ ರಂಗಭೂಮಿಯಲ್ಲಿ ಪ್ರದರ್ಶನಗೊಳ್ಳುತ್ತಿರುವ ವಿಷಯಗಳನ್ನು ವೀಕ್ಷಿಸುತ್ತಿರುವುದರಿಂದ ಅದೆರಡು ಒಂದೇ ನಾಣ್ಯದ ಎರಡು ಮುಖಂಗಳಿದ್ದಂತೆ ಎಂದರೆ ತಪ್ಪಾಗಲಾರದು ಎಂದು ಹೇಳಿದರು.

ರಂಗಭೂಮಿಯಲ್ಲಿ ಪ್ರದರ್ಶಿಸುವ ದೃಶ್ಯಗಳು ವ್ಯಕ್ತಿಗಳಿಗೆ ಸಹನೆ, ತಾಳ್ಮೆಗಳನ್ನು ಕಲಿಸುವುದರೊಂದಿಗೆ ಉತ್ತಮ ವ್ಯಕ್ತಿಗಳಾಗಿ ಪರಿವರ್ತನೆಯಾಗುವಂತೆ ಮಾಡುತ್ತವೆ. ಅದರಂತೆ ಚಲನಚಿತ್ರ ರಂಗಕ್ಕೂ ಇದೇ ಪರಿಸ್ಥಿತಿ ಇದ್ದು, ಡಾ. ರಾಜಕುಮಾರ್ ನಟಿಸಿರುವ ಬಂಗಾರದ ಮನುಷ್ಯ ಚಲನಚಿತ್ರವನ್ನು ವೀಕ್ಷಿಸಿದ ಹಲವಾರು ಮಂದಿ ನಗರವನ್ನು ತೊರೆದು ಗ್ರಾಮೀಣ ಪ್ರದೇಶಗಳಿಗೆ ತೆರಳಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಇದಕ್ಕೆ ಒಂದು ಉತ್ತಮ ನಿದರ್ಶನ ಎಂದು ಹೇಳಿದರು.

ನಾನು ಚಲನಚಿತ್ರ ನಿರ್ದೇಶಕನಾಗುವ ಮುನ್ನ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದೆನು. ಪ್ರೊ.ಜಿ.ಕೆ.ಗೋವಿಂದರಾವ್, ಅಶೋಕ್ ಬಾದರದಿನ್ನಿ ಅವರ ಸಲಹೆಯಂತೆ ಚಿತ್ರರಂಗಕ್ಕೆ ಪ್ರವೇಶಿಸಿದ ನನಗೆ ಖ್ಯಾತ ನಿರ್ದೇಶಕ ದಿ.ಪುಟ್ಟಣ್ಣ ಕಣಗಾಲ್ ಹಾಗೂ ಗಿರೀಶ್ ಕಾರ್ನಾಡ್ ರವರು ನಿರ್ಮಿಸಿದ ಚಲನಚಿತ್ರಗಳಿಂದ ನನ್ನ ಮನಸ್ಸು ಪರಿವರ್ತನೆಗೊಂಡು ಇಂದು ಈ ಸ್ಥಾನವನ್ನು ಅಲಂಕರಿಸಿರುವುದು ಹೆಮ್ಮೆ ತಂದಿದೆ ಎಂದು ತಿಳಿಸಿದರು. ಚಲನಚಿತ್ರ ಹಾಗೂ ರಂಗಭೂಮಿ ನಡುವೆ ಹೆಚ್ಚಿನ ಬಾಂಧವ್ಯ ಬೆಳೆಸಲು ಇಂದು ಆಯೋಜಿಸಿರುವ ಕಾರ್ಯಕ್ರಮವು ಶ್ಲಾಘನೀಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿಗಳಾದ ರಾಜಶೇಖರ ಕದಂಬ, ರಾಜೇಶ್ವರಿ ವರ್ಮ, ಮಂಡ್ಯ ರಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News