×
Ad

ಪರವಾನಿಗೆ ರಹಿತ ಕ್ಲಬ್: ಅಧೀನ ನ್ಯಾಯಾಲಯದ ವಿಚಾರಣೆಗೆ ಹೈಕೋರ್ಟ್ ತಡೆ

Update: 2018-02-05 21:16 IST

ಬೆಂಗಳೂರು, ಫೆ.5: ಪರವಾನಿಗೆ ಇಲ್ಲದೆ ಕ್ಲಬ್ ನಡೆಸುತ್ತಿದ್ದ ಆರೋಪದ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ಅತ್ತಾವರದ ನ್ಯೂ ಮೆಂಬರ್ರ್ಸ್‌ ಸಿಲ್ಕ್ ಲಾಂಜ್ ಕ್ಲಬ್ ಮಾಲಕರಾದ ಸುಜಿತಾ ರೈ ವಿರುದ್ಧದ ಅಧೀನ ನ್ಯಾಯಾಲಯದ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧ ದಾಖಲಿಸಿರುವ ಎಫ್‌ಐಆರ್ ಮತ್ತು ಅಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿ ಸುಜಿತಾ ರೈ ಅರ್ಜಿ ಸಲ್ಲಿಸಿದ್ದರು.

ಸೋಮವಾರ ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರಿದ್ದ ಏಕಸದಸ್ಯ ಪೀಠವು ಅರ್ಜಿದಾರರ ವಿರುದ್ಧದ ಮಂಗಳೂರು 2ನೆ ಹೆಚ್ಚುವರಿ ಜೆಎಂಎಫ್‌ಸಿ ಕೋರ್ಟ್ ವಿಚಾರಣೆಗೆ ತಡೆಯಾಜ್ಞೆ ನೀಡಿತು.

ಅಲ್ಲದೆ, ಅರ್ಜಿ ಸಂಬಂಧ ಉತ್ತರಿಸಲು ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು, ಮಂಗಳೂರು ನಗರ ಮೇಯರ್ ಕವಿತಾ, ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್, ಆರೋಗ್ಯಾಧಿಕಾರಿ ಎ.ಮಂಜಯ್ಯ ಶೆಟ್ಟಿ ಮತ್ತು ಮಂಗಳೂರು ದಕ್ಷಿಣ ಠಾಣಾ ಇನ್ಸ್‌ಪೆಕ್ಟರ್ ಕೆ.ಯು.ಬೆಳ್ಳಿಯಪ್ಪಗೆ ನೋಟಿಸ್ ಜಾರಿ ಮಾಡಿತು.

ಪರವಾನಿಗೆ ಇಲ್ಲದೆ ನಡೆಸುತ್ತಿದ್ದ ಆರೋಪದ ಮೇಲೆ ಅತ್ತಾವರದ ನ್ಯೂ ಮೆಂಬರ್ರ್ಸ್‌ ಸಿಲ್ಕ್ ಲಾಂಜ್ ಕ್ಲಬ್ ಮೇಲೆ ಮೇಯರ್ ಕವಿತಾ ನೇತೃತ್ವದಲ್ಲಿ ದಾಳಿ ನಡೆಸಿ ಬೀಗ ಹಾಕಲಾಗಿತ್ತು. ಇದನ್ನು ಪ್ರಶ್ನಿಸಿರುವ ಅರ್ಜಿದಾರರು ಎಫ್‌ಐಆರ್ ದಾಖಲಿಸದೆ ತಮ್ಮ ಕ್ಲಬ್ ಮೇಲೆ ದಾಳಿ ನಡೆಸಿ ಬೀಗ ಹಾಕಲಾಗಿದೆ. ಅನಗತ್ಯವಾಗಿ ನಮ್ಮನ್ನು ಬಂಧಿಸಲಾಗಿದೆ. ಆದರೆ, ಕ್ಲಬ್ ನಡೆಸಲು ಸೂಕ್ತ ಪರವಾನಿಗೆನ್ನು ಪಡೆಯಲಾಗಿದೆ. ಹೀಗಾಗಿ, ನಮ್ಮ ವಿರುದ್ಧದ ಪ್ರಕರಣ ರದ್ದುಪಡಿಸಬೇಕು ಹಾಗೂ ಅನಧಿಕೃತವಾಗಿ ನಮ್ಮನ್ನು ಬಂಧಿಸಿದ ಕಾರಣಕ್ಕೆ ಪರಿಹಾರ ನೀಡಲು ರಾಜ್ಯ ಸರಕಾರಕ್ಕೆ ಆದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News