×
Ad

ಮಂಗಗಳ ಸಾವು ಪ್ರಕಣಗಳನ್ನು ತಕ್ಷಣ ಗಮನಕ್ಕೆ ತನ್ನಿ: ಡಾ.ಲೋಕೇಶ್

Update: 2018-02-05 22:18 IST

ಶಿವಮೊಗ್ಗ, ಫೆ. 5: ಜಿಲ್ಲೆಯಲ್ಲಿ ಈ ವರ್ಷ ಇದುವರೆಗೆ ಮಂಗನ ಕಾಯಿಲೆಯ 13 ಪ್ರಕರಣಗಳು ಪತ್ತೆಯಾಗಿದ್ದು, ಮಂಗನ ಕಾಯಿಲೆ ಹರಡುವುದನ್ನು ತಡೆಯಲು ವ್ಯಾಪಕ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ಅವರು ಸೂಚನೆ ನೀಡಿದರು.

ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗನ ಕಾಯಿಲೆ ತಡೆಯುವ ಕುರಿತು ಹಿರಿಯ ವೈದ್ಯಾಧಿಕಾರಿಗಳ ಹಾಗೂ ಅರಣ್ಯ ಇಲಾಖೆ ಹಾಗೂ ಇತರ ಇಲಾಖಾ ಅಧಿಕಾರಿಗಳ ಸಭೆ ನಡೆಸಿದರು.

ಈ ವರ್ಷ ಮಂಗನ ಕಾಯಿಲೆಯಿಂದ ತೀರ್ಥಹಳ್ಳಿ ತಾಲೂಕಿನಲ್ಲಿ ಒಂದು ಸಾವು ಸಂಭವಿಸಿದೆ. 2014ರಲ್ಲಿ ಜಿಲ್ಲೆಯಲ್ಲಿ 147 ಮಂಗನ ಕಾಯಿಲೆ ಪ್ರಕರಣಗಳು, 2015ರಲ್ಲಿ 41ಪ್ರಕರಣಗಳು, 2016ರಲ್ಲಿ 13, 2017ರಲ್ಲಿ 37ಪ್ರಕರಣಗಳು ಪತ್ತೆಯಾಗಿತ್ತು. ಪ್ರಸ್ತುತ ಮಂಗನ ಕಾಯಿಲೆ ದೃಢೀಕರಿಸಲು ಪುಣೆಯ ಪ್ರಯೋಗಾಲಯಕ್ಕೆ ಸತ್ತ ಮಂಗದ ಜೈವಿಕ ಅಂಶಗಳನ್ನು ಕಳುಹಿಸಲಾಗುತ್ತಿದ್ದು, ವರದಿ ಸಿಗುವುದು ವಿಳಂಬವಾಗುತ್ತಿದೆ. ಈ ಹಿನ್ನೆಲೆಯಲ್ಲಿ ರೋಗ ಪತ್ತೆ ಕಿಟ್ ಖರೀದಿಸಲು ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

ಏನು ಮಾಡಬೇಕು: ಮಂಗ ಸಾವಿಗೀಡಾಗಿರುವುದು ಕಂಡು ಬಂದಲ್ಲಿ ತಕ್ಷಣ ಸ್ಥಳೀಯ ಆರೋಗ್ಯ ಅಧಿಕಾರಿಗಳ, ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಬೇಕು. ಯಾವುದೇ ಕಾರಣದಿಂದ ಮಂಗ ಸತ್ತಿದ್ದರೂ, ಸಾವಿಗೀಡಾದ ಮಂಗನ ಹತ್ತಿರ ಹೋಗಬಾರದು. ಕಾಡಿಗೆ ಹೋಗುವಾಗ ಮುಂಜಾಗರೂಕತಾ ಕ್ರಮವಾಗಿ ಡಿಎಂಪಿ ತೈಲವನ್ನು ಹಚ್ಚಿಕೊಳ್ಳಬೇಕು. ಮಂಗ ಸತ್ತ ಜಾಗದಲ್ಲಿ ಕನಿಷ್ಟ ಒಂದು ವಾರ ಓಡಾಡಬಾರದು. ಆರೋಗ್ಯ ಇಲಾಖೆ ಅಧಿಕಾರಿಗಳು ಮಂಗ ಸತ್ತ ಪ್ರದೇಶದ 150 ಅಡಿ ವ್ಯಾಪ್ತಿಯಲ್ಲಿ ಮೆಲಾಥಿನ್ ಸಿಂಪಡಿಸಿ, ಪೋಸ್ಟ್ ಮಾರ್ಟಂ ಮಾಡಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸುವರು ಎಂದರು.

ಜಾಗೃತಿ ಶಿಬಿರ: ಮಂಗನ ಕಾಯಿಲೆ ಕುರಿತು ಈಗಾಗಲೇ ತೀರ್ಥಹಳ್ಳಿ ತಾಲೂಕಿನಲ್ಲಿ ವೈದ್ಯಾಧಿಕಾರಿಗಳಿಗೆ ತರಬೇತಿ ನೀಡಲಾಗಿದ್ದು, ಸಾಗರ ಮತ್ತು ಸೊರಬ ತಾಲೂಕಿನಲ್ಲಿ ಫೆಬ್ರವರಿ 6ರಂದು ಕಾರ್ಯಕ್ರಮ ಆಯೋಜಿಸಬೇಕು. ಆರೋಗ್ಯ ಇಲಾಖೆ, ಅರಣ್ಯ ಇಲಾಖೆ, ಸಂಬಂಧಪಟ್ಟ ಪಿಡಿಒಗಳು, ಆಶಾ ಕಾರ್ಯಕರ್ತರು ಶಿಬಿರದಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

ಮಂಗನ ಕಾಯಿಲೆ ವಿರುದ್ಧ ಪ್ರಥಮ ವರ್ಷ ಎರಡು ಬಾರಿ ಹಾಗೂ ಪ್ರತಿ ವರ್ಷ ಒಂದು ಬಾರಿ ಲಸಿಕೆ ಹಾಕಬೇಕು. ತೀರ್ಥಹಳ್ಳಿ ತಾಲೂಕಿನಲ್ಲಿ ಈಗಾಗಲೇ 43ಸಾವಿರ ಮಂದಿಗೆ ಲಸಿಕೆ ಹಾಕಲಾಗಿದ್ದು, ಸಾಗರದಲ್ಲಿ 6ಸಾವಿರ ಮಂದಿಗೆ ಲಸಿಕೆ ಹಾಕಲಾಗಿದೆ. ಮಂಗನ ಕಾಯಿಲೆ ಕಾಣಿಸಿಕೊಳ್ಳುವ ತಾಲೂಕುಗಳಲ್ಲಿ ಕರ್ತವ್ಯ ನಿರ್ವಹಿಸುವ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ತಪ್ಪದೆ ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ರೋಗದ ಲಕ್ಷಣಗಳು: ಸತ್ತ ಮಂಗನ ದೇಹದಿಂದ ಹೊರ ಬರುವ ಉಣ್ಣೆಗಳು ಕಚ್ಚಿದರೆ ಮನುಷ್ಯರಿಗೆ ಮಂಗನ ಕಾಯಿಲೆ ಬರುತ್ತದೆ. ಉಣ್ಣೆಗಳು ಕಚ್ಚಿದ 3ರಿಂದ 8 ದಿನಗಳ ಒಳಗಾಗಿ ಜ್ವರ, ತಲೆ, ಕೈ ಕಾಲು, ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಕಣ್ಣು ಕೆಂಪಗಾಗುವುದು, ವಸಡು, ಬಾಯಿ ಮತ್ತು ಮಲದಲ್ಲಿ ರಕ್ತ ಕಾಣಿಸಿಕೊಳ್ಳುವುದು ಎಂದು ತೀರ್ಥಹಳ್ಳಿ ತಾಲೂಕು ವೈದ್ಯಾಧಿಕಾರಿ ಡಾ.ಕಿರಣ್ ಅವರು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಕೇಶ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹನುಮಂತಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಶಂಕರಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News