ಪ್ರಜಾಪ್ರಭುತ್ವ ಹಳ್ಳ ಹಿಡಿಯುತ್ತಿದೆ: ಜ್ಞಾನಪ್ರಕಾಶ ಸ್ವಾಮೀಜಿ
ಮಂಡ್ಯ, ಫೆ.5: ಸಂವಿಧಾನ ಶಿಲ್ಪಿ ಅಂಬೇಡ್ಕರ್ ಎಲ್ಲರಿಗೂ ಮತದಾನದ ಹಕ್ಕು ತಂದುಕೊಟ್ಟರು. ಆದರೆ, ಇಂದು ಅದನ್ನು ಮಾರಾಟ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಪ್ರಜಾಪ್ರಭುತ್ವ ಹಳ್ಳ ಹಿಡಿಯುತ್ತಿದೆ ಎಂದು ಮೈಸೂರು ಬಹುಜನ ಪೀಠದ ಜ್ಙಾನಪ್ರಕಾಶ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಲೋಕಸರ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅಭ್ಯುದಯ ಯುವಕರ ಸಂಘ, ಭೀಮಾ ಸೇನಾ ಸಮಿತಿ, ಕಲ್ಪವೃಕ್ಷ ಯುವಕ ಸಂಘದ ವತಯಿಂದ ಸೋಮವಾರ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರ ಆಶಯಗಳಿಗೆ ಅಪಮಾನ ಮಾಡಲಾಗುತ್ತಿದೆ. ಯುವಕರು ಸಂಘಟಿತರಾಗುವ ಮೂಲಕ ಶೋಷಣೆ ವಿರುದ್ಧ ನಿಲ್ಲಬೇಕು. ಸಾಮಾಜಿಕವಾಗಿ ಹಿಂದುಳಿದ ಹೆಣ್ಣುಮಕ್ಕಳು ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದು ಅವರು ಕರೆ ನೀಡಿದರು.
ಕನ್ನಂಬಾಡಿ ಕಟ್ಟೆ ನಿರ್ಮಾಣಕ್ಕೆ ನೀಲ ನಕಾಶೆ ಕೊಟ್ಟಿದ್ದು ಮೈಸೂರು ಹುಲಿ ಟಿಪ್ಪು ಸುಲ್ತಾನ್. ತಮ್ಮ ಮನೆಯ ಆಭರಣಗಳನ್ನು ಅಡವಿಟ್ಟು ನಾಲ್ವಡಿ ಕೃಷ್ಣರಾಜ ಒಡೆಯರ್ ಕಟ್ಟೆ ನಿರ್ಮಾಣ ಮಾಡಿದರು. ಆದರೆ, ಕಟ್ಟೆಯ ನಿರ್ಮಾಣದ ಕೀರ್ತಿ ವಿಶ್ವೇಶ್ವರಯ್ಯ ಅವರಿಗೆ ಕೊಡಲಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಎಸ್‍ಎಸ್‍ಎಲ್‍ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಎಲ್.ಎಸ್.ಅಂಕಿತಾ ಹಾಗೂ ಎಲ್.ಎಂ.ನಿಸರ್ಗ ಅವರನ್ನು ಅಭಿನಂದಿಸಲಾಯಿತು.
ಶಿಕ್ಷಕ ಜೆ ಶಿವಣ್ಣ, ಕಾರ್ಯಪಾಲಕ ಅಭಿಯಂತರ ಚಂದ್ರಹಾಸ, ರೇಷ್ಮೆ ಇಲಾಖೆಯ ಶಾಂತರಾಜು, ಎಸ್ಸಿ, ಎಸ್ಟಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಶಿವರುದ್ರಯ್ಯ, ಸಾರಿಗೆ ಸಂಸ್ಥೆಯ ತಾಳಶಾಸನ ಮೋಹನ್. ಎಸ್‍ಡಿಎಂಸಿ ಅಧ್ಯಕ್ಷ ಶಂಕರ್, ಸಂಘದ ಗೌರವ ಅಧ್ಯಕ್ಷ ಜೆ.ಶಿವಣ್ಣ, ಅಧ್ಯಕ್ಷ ಗಂಗಾಧರ್, ಕಾರ್ಯದರ್ಶಿ ಎಲ್.ಡಿ.ಶಿವಶಂಕರ್, ಕಲ್ಪವೃಕ್ಷ ಸಂಘದ ಅಧ್ಯಕ್ಷ ಮಹದೇವು ಹಾಗೂ ಗ್ರಾಮ ಮುಖಂಡರು ಉಪಸ್ಥಿತರಿದ್ದರು.