2030ರೊಳಗೆ ಅಂತರ್ಜಲ ಮಟ್ಟ ಹೆಚ್ಚಿಸಿಕೊಳ್ಳಬೇಕಿದೆ: ಸಚಿವ ಟಿ.ಬಿ.ಜಯಚಂದ್ರ
ತುಮಕೂರು,ಫೆ.5: ಮಳೆಯಾಶ್ರಿತ ತುಮಕೂರು ಜಿಲ್ಲೆಯಲ್ಲಿ ಕುಸಿದಿರುವ ಅಂತರ್ಜಲ ಮಟ್ಟವನ್ನು 2030ರೊಳಗೆ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲರು ಸಹಕಾರ ನೀಡುವಂತೆ ಕಾನೂನು ಮತ್ತು ಸಂಸದೀಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.
ಶ್ರೀ ಸಿದ್ದಗಂಗಾ ಮಠದಲ್ಲಿಂದು ನಡೆದ 54ನೇ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭೂಮಿಯ ತೇವಾಂಶ ಕಡಿಮೆಯಾಗುತ್ತಿದ್ದು, ಮಳೆ ನೀರು ಸಂಗ್ರಹ, ವಿವೇಚನಯುತವಾಗಿ ನೀರನ್ನು ಬಳಸುವ ಮೂಲಕ 2030ರೊಳಗೆ ಕುಸಿತಗೊಂಡಿರುವ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ರೈತರು ಮುಂದಾಗಬೇಕಿದೆ. ಅಂತರ್ಜಲ ಮಟ್ಟ ಹೆಚ್ಚಿಸಲು ಸರ್ಕಾರ ಕೃಷಿ ಹೊಂಡಗಳನ್ನು ನಿರ್ಮಿಸುತ್ತಿದೆ ಎಂದು ಅವರು ತಿಳಿಸಿದರು.
ಕೃಷಿ ಇಂದು ಲಾಭದಾಯಕವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ರೈತರು ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಲೆಯೂ ಸಿಗುತ್ತಿಲ್ಲ. ಸಾಂಪ್ರಾದಾಯಿಕ ಕೃಷಿ ಪದ್ಧತಿಯನ್ನು ಬಿಟ್ಟು ರೈತರು ವೈಜ್ಞಾನಿಕ ಪದ್ಧತಿಯಿಂದ ಹೆಚ್ಚು ಬೆಳೆಯನ್ನು ಬೆಳೆಯುವಂತೆ ಅವರು ಸಲಹೆ ನೀಡಿದರು.
ರೈತರು ಕೃಷಿಗೆ ಸಂಬಂಧಿಸಿದಂತೆ ಆಗುತ್ತಿರುವ ಆವಿಷ್ಕಾರಿ ಬದಲಾವಣೆಗಳನ್ನು ತಿಳಿದುಕೊಳ್ಳಲು ಇಂತಹ ವಸ್ತುಪ್ರದರ್ಶನಗಳು ಸಹಕಾರಿಯಾಗಲಿವೆ, ರೈತರ ಆತ್ಮಸ್ಥೈರ್ಯವನ್ನು ಹೆಚ್ಚಿಸುವಂತಹ ಕೆಲಸವನ್ನು ಕೃಷಿ ವಸ್ತು ಪ್ರದರ್ಶನಗಳನ್ನು ಮಾಡುತ್ತಿದ್ದು, ರೈತರಿಗಾಗಿ ಮುಂದಾಲೋಚನೆಯಿಂದ 54 ವರ್ಷಗಳ ಹಿಂದೆಯೇ ವಸ್ತು ಪ್ರದರ್ಶನವನ್ನು ಪ್ರಾರಂಭಿಸಿದ ಡಾ.ಶ್ರೀಶಿವಕುಮಾರ ಸ್ವಾಮೀಜಿಗಳಿಗೆ ಧನ್ಯವಾದವನ್ನು ತಿಳಿಸಿದರು.
ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ಮಾತನಾಡಿ, ಕೃಷಿ ಸೇರಿದಂತೆ ಎಲ್ಲ ರಂಗದಲ್ಲಿಯೂ ಬದಲಾವಣೆಗಳು ನಿರಂತರವಾಗಿ ನಡೆಯುತ್ತಿದ್ದು, ರೈತರು ಆಧುನಿಕ ತಳಿಗಳ ಬಗ್ಗೆ ತಿಳಿದುಕೊಳ್ಳಲು, ಕಡಿಮೆ ನೀರನ್ನು ಬಳಸಿ ಉತ್ತಮ ಬೆಳೆ ಬೆಳೆಯುವ ಬಗ್ಗೆ ನಡೆದಿರುವ ಸಂಶೋಧನೆಗಳ ಬಗ್ಗೆ ತಿಳಿದುಕೊಳ್ಳಲು ಸಿದ್ದಗಂಗಾ ವಸ್ತುಪ್ರದರ್ಶನ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಅಂತರ್ಜಲ ಕುಸಿತದಿಂದ ಇಂದು ಕೃಷಿ ಚಟುವಟಿಕೆ ಕುಂಠಿತಗೊಂಡಿದೆ ರೈತರಿಗೆ ಜಲಜಾಗೃತಿ ಅವಶ್ಯಕವಾಗಿದ್ದು, ಉತ್ತಮ ಮಳೆಗಾಗಿ-ಬೆಳೆಗಾಗಿ ಮರಗಳನ್ನು ಬೆಳೆಸಬೇಕಾಗಿದೆ. ಅರಣ್ಯ ಇಲಾಖೆ ಈ ಕೆಲಸ ಮಾಡುತ್ತಿದೆ ಆದರು ನಿರೀಕ್ಷಿತ ಮಟ್ಟದಲ್ಲಿ ಮರಗಳು ಬೆಳೆಯುತ್ತಿಲ್ಲ ಅದಕ್ಕಾಗಿ ರೈತರು ತಮ್ಮ ಜಮೀನುಗಳಲ್ಲಿ ಸಾಲು ಮರಗಳನ್ನು ಬೆಳೆಸುವಂತೆ ಅವರು ಸಲಹೆ ನೀಡಿದರು.
ಶಾಸಕರಾದ ಬಿ.ಸುರೇಶ್‍ಗೌಡ ಮಾತನಾಡಿ ಶ್ರೀ ಶಿವಕುಮಾರಸ್ವಾಮೀಜಿ ಅವರು ಎಲ್ಲ ಕ್ಷೇತ್ರದಲ್ಲಿಯೂ ತಮ್ಮ ಸೇವೆಯನ್ನು ಸಲ್ಲಿಸಿದ್ದು, ರೈತರಿಗೆ ಆಧುನಿಕ ತಳಿಗಳು ಹಾಗೂ ಆಧುನಿಕ ಕೃಷಿ ಪದ್ಧತಿಯನ್ನು ತಿಳಿಸುವ ಸಲುವಾಗಿ ಈ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನವನ್ನು ಆಯೋಜನೆ ಮಾಡಿದ್ದು, ರೈತರಿಗೆ ಹೊಸ ವಿಚಾರಗಳನ್ನು ತಿಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.
ರೈತರಿಗಾಗಿ ನಡೆಯುತ್ತಿರುವ ವಸ್ತು ಪ್ರದರ್ಶನದಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ತಂತ್ರಜ್ಞಾನ, ಸಂಶೋಧನೆಗಳ ಬಗ್ಗೆ ತಿಳಿದುಕೊಳ್ಳಬೇಕು, ರೈತರ ಸ್ನೇಹಿ ಕೆಲಸಗಳನ್ನು ವಸ್ತು ಪ್ರದರ್ಶನ ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮಠಾಧೀಶರಾದ ಶ್ರೀ ಸಿದ್ಧಲಿಂಗಮಹಾಸ್ವಾಮೀಜಿ, ಜಿಲ್ಲಾಧಿಕಾರಿ ಕೆ.ಪಿ.ಮೋಹನ್‍ರಾಜ್, ಜಿ.ಪಂ.ಸಿಇಒ ಅನೀಸ್ ಕಣ್ಮಣಿ ಜಾಯ್, ಜಿ.ಪಂ.ಸದಸ್ಯರಾದ ಶಿವಕುಮಾರ್, ನರಸಿಂಹಮೂರ್ತಿ, ಬಿಬಿಎಂಪಿ ಮಾಜಿ ಮೇಯರ್ ಪುಟ್ಟರಾಜು, ಎಂ.ನಂದೀಶ್, ಕೆಂ.ಬ.ರೇಣುಕಯ್ಯ, ಎಸ್.ಶಿವಕುಮಾರ್, ಕೆ.ಎಸ್.ಉಮಾಮಹೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.